ಮಡಿಕೇರಿ, NEWS DESK ಸೆ.25: ಕೊಡಗು ಜಿಲ್ಲಾ ವಾಣಿಜ್ಯೋದ್ಯಮಿಗಳ ವಿವಿಧೋದ್ದೇಶ ಸಹಕಾರ ಸಂಘದ 2025-26ನೇ ಸಾಲಿನ 25ನೇ ವಾರ್ಷಿಕ ಮಹಾಸಭೆ ನಗರದ ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆಯ ಚೇತನ ಚಿಲುಮೆ ಬಾಲಭವನ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಕೆ.ಬಿ. ಗಿರೀಶ್ ಗಣಪತಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಘವು 2006-07ನೇ ಸಾಲಿನಿಂದ ನಿರಂತರವಾಗಿ ಲಾಭದಲ್ಲಿ ಕಾರ್ಯನಿರ್ವಹಿಸುತ್ತಿದ್ದು, 2025-26ನೇ ಸಾಲಿನಲ್ಲಿ ರೂ.29.33 ಲಕ್ಷ ಲಾಭ ಗಳಿಸಿದೆ. ಈ ಹಿನ್ನೆಲೆಯಲ್ಲಿ ಮಹಾಸಭೆಯಲ್ಲಿ ಸದಸ್ಯರಿಗೆ ಶೇ.10ರಷ್ಟು ಡಿವಿಡೆಂಡ್ ಘೋಷಿಸಲಾಯಿತು.
2002ರ ಡಿಸೆಂಬರ್ 22ರಂದು ಆರಂಭಗೊಂಡಿರುವ ಸಂಘವು ಕಳೆದ 24 ವರ್ಷಗಳಿಂದ ಸ್ವಂತ ಬಂಡವಾಳದ ಮೂಲಕ ವ್ಯವಹಾರ ನಡೆಸುತ್ತಿದೆ. 2026ರ ಮಾರ್ಚ್ 31ರ ವೇಳೆಗೆ ಸಂಘವು ಒಟ್ಟು 1,912 ಸದಸ್ಯರನ್ನು ಹೊಂದಿದ್ದು, ಇವರ ಪೈಕಿ 1,039 ಸದಸ್ಯರು ಪೂರ್ಣ ಮುಖಬೆಲೆಯ ಷೇರು ಮೊತ್ತ ಪಾವತಿಸಿದ್ದಾರೆ. ಉಳಿದ 873 ಸದಸ್ಯರ ಪಾಲುಗಳು ಅಪೂರ್ಣವಾಗಿವೆ. ಸದಸ್ಯರಿಂದ ಒಟ್ಟು ರೂ.98.52 ಲಕ್ಷ ಷೇರು ಬಂಡವಾಳ ಸಂಗ್ರಹವಾಗಿದೆ.
ಸಂಘದಲ್ಲಿ ಅಡಮಾನ ಸಾಲ, ಜಾಮೀನು ಸಾಲ, ಆಭರಣ ಸಾಲ, ಪಿಗ್ಮಿ ಓವರ್‌ಡ್ರಾಫ್ಟ್ ಸಾಲ, ಸ್ವ-ಸಹಾಯ ಸಂಘಗಳಿಗೆ ಸಾಲ ಹಾಗೂ ಸಿಬ್ಬಂದಿಗೆ ಸಾಲ ಸೇರಿದಂತೆ ವಿವಿಧ ಸಾಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. 2026ರ ಮಾರ್ಚ್ 31ರ ಅಂತ್ಯಕ್ಕೆ ವಿವಿಧ ಠೇವಣಿಗಳ ಮೂಲಕ ರೂ.36.80 ಕೋಟಿ ಠೇವಣಿ ಸಂಗ್ರಹಿಸಲಾಗಿದ್ದು, ರೂ.12.18 ಕೋಟಿ ಸಾಲ ವಿತರಿಸಲಾಗಿದೆ.
2014-15ನೇ ಸಾಲಿನಲ್ಲಿ ಇಲಾಖೆಯ ಅನುಮತಿ ಪಡೆದು ಮಡಿಕೇರಿ ನಗರದ ಕೊಹಿನೂರು ರಸ್ತೆಯಲ್ಲಿ ಸಂಘದ ಸ್ವಂತ ಕಟ್ಟಡವನ್ನು ಖರೀದಿಸಲಾಯಿತು. ಸದಸ್ಯರ ಸಹಕಾರದಿಂದ ಕಟ್ಟಡದ ಮೇಲ್ಭಾಗದಲ್ಲಿ ಮತ್ತೊಂದು ಅಂತಸ್ತನ್ನು ನಿರ್ಮಿಸಲಾಗಿದೆ. ಪ್ರಸ್ತುತ ಈ ಕಟ್ಟಡವನ್ನು ನೃತ್ಯ ಶಾಲೆಗೆ ಬಾಡಿಗೆಗೆ ನೀಡಲಾಗಿದೆ.
ಮಡಿಕೇರಿ, ನಾಪೋಕ್ಲು, ಮೂರ್ನಾಡು, ಸೋಮವಾರಪೇಟೆ, ಕುಶಾಲನಗರ, ಸುಂಟಿಕೊಪ್ಪ, ಮಾದಾಪುರ, ಕೊಡ್ಲಿಪೇಟೆ, ಶನಿವಾರಸಂತೆ, ಸಿದ್ದಾಪುರ, ಪೊನ್ನಂಪೇಟೆ, ವೀರಾಜಪೇಟೆ, ಗೋಣಿಕೊಪ್ಪಲು ಹಾಗೂ ಚೆಟ್ಟಳ್ಳಿ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸುಮಾರು 20 ಪಿಗ್ಮಿ ಸಂಗ್ರಹಗಾರರು ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿದಿನ ಅಂದಾಜು ರೂ.2 ಲಕ್ಷ ಪಿಗ್ಮಿ ಠೇವಣಿ ಸಂಗ್ರಹವಾಗುತ್ತಿದೆ. ಸಂಘದಲ್ಲಿ ನಿರಖು ಠೇವಣಿ, ಉಳುವರಿ ಠೇವಣಿ ಹಾಗೂ ಆವರ್ತಕ ಠೇವಣಿ (ಆರ್‌ಡಿ) ಸೌಲಭ್ಯಗಳಿದ್ದು, ನಿರಖು ಠೇವಣಿಗೆ ಆಕರ್ಷಕ ಬಡ್ಡಿದರ ನೀಡಲಾಗುತ್ತಿದೆ.
ಸಂಘದ ಮುಖ್ಯ ಶಾಖೆ ಮಡಿಕೇರಿಯಲ್ಲಿ 2002ರಲ್ಲಿ ಆರಂಭಗೊಂಡಿದ್ದು, ಸದಸ್ಯರ ಅನುಕೂಲಕ್ಕಾಗಿ 2007ರಲ್ಲಿ ಕುಶಾಲನಗರ ಹಾಗೂ 2012ರ ಫೆಬ್ರವರಿಯಲ್ಲಿ ಸಿದ್ದಾಪುರದಲ್ಲಿ ಶಾಖೆಗಳನ್ನು ಆರಂಭಿಸಲಾಗಿದೆ. ಮೂರು ಶಾಖೆಗಳೂ ಲಾಭದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಉತ್ತಮ ವ್ಯವಹಾರ ನಡೆಸುತ್ತಿವೆ ಎಂದು ಅಧ್ಯಕ್ಷ ಕೆ.ಬಿ. ಗಿರೀಶ್ ಗಣಪತಿ ಅವರು ಮಾಹಿತಿ ನೀಡಿದರು.
ಮಹಾಸಭೆಯಲ್ಲಿ ಉಪಾಧ್ಯಕ್ಷ ಬಿ. ರಾಮಕೃಷ್ಣಯ್ಯ, ನಿರ್ದೇಶಕರಾದ ಕೆ.ಎಂ. ಗಣೇಶ್, ಕೆ.ಕೆ. ಶ್ರೀನಿವಾಸ್, ಸವಿತಾ ರೈ, ಮುನೀರ್ ಅಹಮ್ಮದ್, ಎಂ.ಪಿ. ಕಾವೇರಪ್ಪ, ಎಂ. ಬಿಜಾಯ್, ಅನಿಲ್ ಹೆಚ್.ಕೆ., ಬಿ. ಜನಾರ್ಧನ ಪ್ರಭು, ಡೆನ್ನಿ ಬರೋಸ್, ಜಯಂತಿ ಎಸ್.ಎಂ., ನಾಗೇಶ್ ಕೆ.ಎಸ್., ನರಸಿಂಹ ಡಿ., ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ಯಾಮಲ ಟಿ.ಡಿ. ಮತ್ತಿತರರು ಉಪಸ್ಥಿತರಿದ್ದರು.







