ಸುಂಟಿಕೊಪ್ಪ, NEWS DESK ಸೆ.27: ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಯುವಜನರು ಮುಂಚೂಣಿಯಲ್ಲಿ ನಿಲ್ಲುವಂತೆ ಮಾಡುವುದೇ ರಾಷ್ಟ್ರೀಯ ಸೇವಾ ಯೋಜನೆಯ (ಎನ್ಎಸ್ಎಸ್) ಉದ್ದೇಶವಾಗಿದೆ ಎಂದು ಗರಗಂದೂರು ಮೊರಾರ್ಜಿ ದೇಸಾಯಿ ವಸತಿ ಪದವಿ ಪೂರ್ವ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಕೆ.ಪಿ. ಚಂದ್ರ ಹೇಳಿದರು.
ಮಾದಾಪುರದ ಶ್ರೀಮತಿ ಡಿ. ಚೆನ್ನಮ್ಮ ಪದವಿ ಪೂರ್ವ ಕಾಲೇಜಿನಲ್ಲಿ ಎನ್ಎಸ್ಎಸ್ ಘಟಕದ ವತಿಯಿಂದ ಆಯೋಜಿಸಿದ್ದ ಎನ್ಎಸ್ಎಸ್ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎನ್ಎಸ್ಎಸ್ ಯುವಜನರಲ್ಲಿ ನಿಸ್ವಾರ್ಥ ಸೇವಾ ಮನೋಭಾವ, ಸಾಮಾಜಿಕ ಜವಾಬ್ದಾರಿ ಹಾಗೂ ಸಮುದಾಯ ಅಭಿವೃದ್ಧಿಯ ಪ್ರಜ್ಞೆಯನ್ನು ಬೆಳೆಸುವ ಪ್ರಮುಖ ಸಂಸ್ಥೆಯಾಗಿದೆ. ಎನ್ಎಸ್ಎಸ್ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳು ಸಮಯಪ್ರಜ್ಞೆ, ಶಿಸ್ತು ಹಾಗೂ ಸೇವಾ ಮನೋಭಾವವನ್ನು ಬೆಳೆಸಿಕೊಂಡು ತಮ್ಮ ವ್ಯಕ್ತಿತ್ವವನ್ನು ವಿಕಸನಗೊಳಿಸಿಕೊಂಡರೆ ಉತ್ತಮ ಸಮಾಜ ಹಾಗೂ ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಹೇಳಿದರು.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಆಶಯದಂತೆ, ಗಾಂಧೀಜಿ ಜನ್ಮ ಶತಾಬ್ದಿ ವರ್ಷವಾದ 1969ರ ಸೆಪ್ಟೆಂಬರ್ 24ರಂದು ರಾಷ್ಟ್ರೀಯ ಸೇವಾ ಯೋಜನೆ ಅಸ್ತಿತ್ವಕ್ಕೆ ಬಂದಿತು. ಇಂದು ದೇಶದ ಅನೇಕ ಶಾಲಾ-ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಎನ್ಎಸ್ಎಸ್ ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ಶ್ರೀಮತಿ ಡಿ. ಚೆನ್ನಮ್ಮ ಪದವಿ ಪೂರ್ವ ಕಾಲೇಜಿನಲ್ಲಿ 1985ರಿಂದಲೇ ಎನ್ಎಸ್ಎಸ್ ಘಟಕ ಕಾರ್ಯನಿರ್ವಹಿಸುತ್ತಿದ್ದು, ವಿವಿಧ ಸಾಮಾಜಿಕ ಹಾಗೂ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದು ಪ್ರಾಂಶುಪಾಲ ಚಂದ್ರ ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಸಿ.ಜಿ. ಮಂದಪ್ಪ ಮಾತನಾಡಿ, ಎನ್ಎಸ್ಎಸ್ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸೇವೆ, ಸಮುದಾಯದೊಂದಿಗೆ ಭಾಗವಹಿಸುವಿಕೆ, ಶಿಸ್ತು ಹಾಗೂ ಸಮಾಜದ ಕಡೆಗಿನ ಜವಾಬ್ದಾರಿಯ ಮಹತ್ವವನ್ನು ಬೆಳೆಸುತ್ತದೆ ಎಂದರು.
“ನಾನಲ್ಲ, ನೀನು” ಎಂಬ ಎನ್ಎಸ್ಎಸ್ನ ಧ್ಯೇಯವಾಕ್ಯವು ಸ್ವಾರ್ಥಕ್ಕಿಂತ ಸಮಾಜ ಹಾಗೂ ಇತರರ ಒಳಿತಿಗೆ ಆದ್ಯತೆ ನೀಡುವ ಮನೋಭಾವವನ್ನು ಪ್ರತಿಬಿಂಬಿಸುತ್ತದೆ. ವಿದ್ಯಾರ್ಥಿಗಳು ಸೇವಾ ಪ್ರಜ್ಞೆ, ಸಹಾನುಭೂತಿ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಿಕೊಳ್ಳಲು ಎನ್ಎಸ್ಎಸ್ ಪ್ರೇರಣೆ ನೀಡುತ್ತದೆ ಎಂದು ಹೇಳಿದರು.
ರಾಜ್ಯಶಾಸ್ತ್ರ ಉಪನ್ಯಾಸಕಿ ರಮ್ಯ ಪ್ರಾಸ್ತಾವಿಕ ಭಾಷಣ ಮಾಡಿದರು. ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಕೆ.ಯು. ರೀಟಾ, ಎನ್ಎಸ್ಎಸ್ ಅಧಿಕಾರಿ ಮನೋಹರ ಹಾಗೂ ಸಂಸ್ಥೆಯ ಉಪನ್ಯಾಸಕರು ಉಪಸ್ಥಿತರಿದ್ದರು.
ಕುಮಾರಿ ಮಾನಸ ಸ್ವಾಗತಿಸಿದರು. ಕುಮಾರಿ ಹನಿ ವಂದಿಸಿದರು. ಕುಮಾರಿ ಸುಕನ್ಯ ಕಾರ್ಯಕ್ರಮ ನಿರೂಪಿಸಿದರು.







