ನಾಪೋಕ್ಲು, NEWS DESK ಸೆ.27: ಸಮೀಪದ ಸಣ್ಣಪುಲಿಕೋಟು ಗ್ರಾಮದ ಐತಿಹಾಸಿಕ ಕಡೋಡಿ ಶ್ರೀ ಮಹಾವಿಷ್ಣು ಸನ್ನಿಧಿಯಲ್ಲಿ ವಾರ್ಷಿಕ ಸೋಣ ತಿಂಗಳ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾಲಾಯ ಹರಕೆ ಪೂಜಾ ವಿಧಿ ವಿಧಾನಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು.
ದೇವಾಲಯದ ತಕ್ಕರಾದ ದಾಮೋದರ್ ಮಾತನಾಡಿ, “ಸಣ್ಣಪುಲಿಕೋಟುವಿನ ಕಡೋಡಿ ಶ್ರೀ ಮಹಾವಿಷ್ಣು ದೇವಾಲಯವು ಕಡೋಡಿ, ಕುಯ್ಯಮುಡಿ ಕುಟುಂಬಸ್ಥರು ಹಾಗೂ ಊರವರ ಪವಿತ್ರ ಶ್ರದ್ಧಾಭಕ್ತಿಯ ಕೇಂದ್ರವಾಗಿದೆ. ಸೋಣ ತಿಂಗಳಿನ ಒಂದು ತಿಂಗಳ ಕಾಲ ದೇವಾಲಯದಲ್ಲಿ ನಿತ್ಯ ದೀಪ ಬೆಳಗಿಸಿ, ಪೂಜೆ ಸಲ್ಲಿಸಲಾಗುತ್ತದೆ. 30 ದಿನಗಳ ಪೂಜಾ ಕೈಂಕರ್ಯಗಳ ಬಳಿಕ ಭಕ್ತರು ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿ ತಮ್ಮ ಹರಕೆಗಳನ್ನು ತೀರಿಸುವುದು ಇಲ್ಲಿನ ಸಂಪ್ರದಾಯವಾಗಿದೆ” ಎಂದು ತಿಳಿಸಿದರು.
ವಾರ್ಷಿಕ ಸೋಣ ತಿಂಗಳ ಕಾಲಾಯ ಹರಕೆ ಪೂಜಾ ವಿಧಿ ವಿಧಾನದಲ್ಲಿ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಕುಯ್ಯಮುಡಿ ಲವ, ಪದಾಧಿಕಾರಿಗಳು ಹಾಗೂ ಸದಸ್ಯರು, ಕಡೋಡಿ ಕುಟುಂಬಸ್ಥರು ಸೇರಿದಂತೆ ನೂರಾರು ಭಕ್ತಾದಿಗಳು ಭಾಗವಹಿಸಿದ್ದರು. ಭಕ್ತರು ತಮ್ಮ ಭಕ್ತಿ ಅನುಸಾರ ಹರಕೆ ಹಾಗೂ ಕಾಣಿಕೆಗಳನ್ನು ಸಮರ್ಪಿಸಿ ದೇವರ ಕೃಪೆಗೆ ಪಾತ್ರರಾದರು.







