
ಮಡಿಕೇರಿ NEWS DESK ಸೆ.29 : ದುಬಾರೆ ಆನೆ ಶಿಬಿರದಲ್ಲಿದ್ದ ಸುಮಾರು 19 ವರ್ಷ ಪ್ರಾಯದ ಗಂಡಾನೆಯೊಂದು ಸತತ ಐದು ತಿಂಗಳಿಗೂ ಹೆಚ್ಚಿನ ಕಾಲ ಅರಣ್ಯ ಇಲಾಖೆಯಿಂದ ಚಿಕಿತ್ಸೆ ಪಡೆಯುತ್ತಿದ್ದರೂ, ಸೆ.29ರಂದು ಬೆಳಗ್ಗೆ 9.50ಕ್ಕೆ ಮೃತಪಟ್ಟಿದೆ. ಕಾದಾಟದ ಗಾಯಗಳು ಹಾಗೂ ಮುರಿದ ದಂತದೊಂದಿಗೆ ಶಿಬಿರಕ್ಕೆ ಬಂದಿದ್ದ ಆನೆಯನ್ನು ಅರಣ್ಯ ಇಲಾಖೆಯ ಪಶುವೈದ್ಯರು ಪ್ರತ್ಯೇಕವಾಗಿರಿಸಿ (ಕ್ವಾರಂಟೈನ್), ಯಾವುದೇ ಮಾನಸಿಕ ಒತ್ತಡಕ್ಕೆ ಒಳಗಾಗದಂತೆ ಆರೈಕೆ ಮಾಡುತ್ತಿದ್ದರು. ಪ್ರತಿದಿನ ಆ್ಯಂಟಿಬಯೋಟಿಕ್ಸ್, ನೋವು ನಿವಾರಕಗಳು, ಗಾಯಕ್ಕೆ ಔಷಧೋಪಚಾರ ಹಾಗೂ ಅಗತ್ಯ ಪೋಷಕಾಂಶಗಳನ್ನು ನೀಡಲಾಗುತ್ತಿತ್ತು. ಹೆಚ್ಚಿನ ತಜ್ಞ ಚಿಕಿತ್ಸೆಗೆ Wildlife SOS ಸಂಸ್ಥೆಯ ನುರಿತ ವನ್ಯಜೀವಿ ಪಶುವೈದ್ಯರ ತಂಡವನ್ನು ಕರೆಸಿ ಜಂಟಿ ಆರೋಗ್ಯ ತಪಾಸಣೆ ನಡೆಸಲಾಗಿತ್ತು. ಈ ವೇಳೆ ನಡೆಸಿದ ಡಿಜಿಟಲ್ ಎಕ್ಸ್‌ರೇ ಪರೀಕ್ಷೆಯಲ್ಲಿ ಆನೆಯ ಎಡ ಮೊಣಕೈ ಮೂಳೆಯಲ್ಲಿ ಬಿರುಕು ಇರುವುದು ದೃಢಪಟ್ಟಿತ್ತು. ತಜ್ಞ ವೈದ್ಯರ ಸಲಹೆಯಂತೆ ಸುಧಾರಿತ ಚಿಕಿತ್ಸೆಯನ್ನು ಮುಂದುವರಿಸಲಾಗಿದ್ದು, ಕಾಲಿನ ಮೇಲಿನ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಆನೆಯನ್ನು ಕ್ರಾಲ್‌ನಿಂದ ಹೊರಗೆ ಬಿಡಲಾಗಿತ್ತು. ಪೆಟ್ಟಾದ ಕಾಲನ್ನು ಸ್ಥಿರವಾಗಿಡಲು ಸೆ.27ರಂದು ತಜ್ಞರ ಮೂಲಕ ಫೈಬರ್‌ಗ್ಲಾಸ್ ಬ್ಯಾಂಡೇಜ್ ಅಳವಡಿಸಲಾಗಿತ್ತು. ಸೆ.29ರಂದು ಆನೆಯು ಏಕಾಏಕಿ ಕುಸಿದು ಬಿದ್ದ ಹಿನ್ನೆಲೆಯಲ್ಲಿ ತಕ್ಷಣವೇ ತುರ್ತು ಗ್ಲುಕೋಸ್ ಹಾಗೂ ದ್ರವ ಚಿಕಿತ್ಸೆ (IV fluids) ನೀಡಿ ತೀವ್ರ ನಿಗಾ ವಹಿಸಲಾಯಿತು. ಆದರೆ ಚಿಕಿತ್ಸೆಗೂ ಸ್ಪಂದಿಸದೆ ಆನೆಯು ಕೊನೆಯುಸಿರೆಳೆದಿದೆ. ಸಾವಿನ ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಪ್ರಾಥಮಿಕ ಪಶುವೈದ್ಯಕೀಯ ವರದಿಯಂತೆ, ದೀರ್ಘಕಾಲದ ಮೂಳೆ ಮುರಿತದ ತೊಂದರೆ, ನಿರಂತರ ಅನಾರೋಗ್ಯ ಹಾಗೂ ದೈಹಿಕ ದೌರ್ಬಲ್ಯದಿಂದ (Systemic exhaustion) ಆನೆಯು ಮೃತಪಟ್ಟಿರಬಹುದೆಂದು ತಿಳಿದುಬಂದಿದೆ.









