
ಮಡಿಕೇರಿ, NEWS DESK ಸೆ.30: ಕೊಡಗು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಜಿಲ್ಲಾಧಿಕಾರಿ ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೋಮಶೇಖರ್ ಎಸ್.ಜೆ. ಅವರ ನೇತೃತ್ವದಲ್ಲಿ ನಡೆಯಿತು.
ಕೊಡಗು ಜಿಲ್ಲೆಯನ್ನು ಈಗಾಗಲೇ ಬರಪೀಡಿತ ಪ್ರದೇಶವೆಂದು ಘೋಷಿಸಿರುವ ಹಿನ್ನೆಲೆಯಲ್ಲಿ, ಗ್ರಾಮ ಪಂಚಾಯಿತಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಮುನ್ನವೇ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು. ಯಾವುದೇ ಗ್ರಾಮದಲ್ಲೂ ಕುಡಿಯುವ ನೀರಿನ ಅಭಾವ ಉಂಟಾಗದಂತೆ ಕ್ರಮ ವಹಿಸುವಂತೆ ತಿಳಿಸಲಾಯಿತು.
ಜಲ ಜೀವನ್ ಮಿಷನ್ ಕಾಮಗಾರಿಗಳು ಇನ್ನೂ ಪೂರ್ಣಗೊಳ್ಳದಿರುವ ಕಡೆಗಳಲ್ಲಿ ಕಾಮಗಾರಿಗಳನ್ನು ತ್ವರಿತವಾಗಿ ಮುಕ್ತಾಯಗೊಳಿಸುವಂತೆ ಸೂಚಿಸಲಾಯಿತು. ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಕಂಡುಬಂದಿರುವ ಸಮಸ್ಯೆಗಳನ್ನು ಸಭೆಯಲ್ಲಿ ಚರ್ಚಿಸಿ, ಅವುಗಳನ್ನು ಶೀಘ್ರವಾಗಿ ಬಗೆಹರಿಸುವಂತೆ ಸೂಚನೆ ನೀಡಲಾಯಿತು.
ವಿಬಿ ಜಿ ರಾಮ್ ಜಿ ಯೋಜನೆಯ ಪ್ರಗತಿ ಕುರಿತು ಚರ್ಚೆ ನಡೆಸಿ, ಕೊಡಗು ಜಿಲ್ಲೆಯಲ್ಲಿ ವೈಯಕ್ತಿಕ ಕಾಮಗಾರಿಗಳಿಗೆ ಹೆಚ್ಚಿನ ಬೇಡಿಕೆಯಿರುವುದರಿಂದ ಜನರ ಅಗತ್ಯಕ್ಕೆ ಅನುಗುಣವಾಗಿ ಯೋಜನೆಯ ಸೌಲಭ್ಯಗಳನ್ನು ಒದಗಿಸಿ ಪ್ರಗತಿ ಸಾಧಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಲಾಯಿತು.
ಗ್ರಾಮೀಣ ಪ್ರದೇಶಗಳ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ತಿಳಿಸಿದ ಅವರು, ಪ್ಲಾಸ್ಟಿಕ್ ಮಾರಾಟಕ್ಕೆ ಕಡಿವಾಣ ಹಾಕಬೇಕು. ಗ್ರಾಮಗಳಿಂದ ಕಸವನ್ನು ನಗರ ಪ್ರದೇಶಗಳಿಗೆ ತಂದು ವಿಲೇವಾರಿ ಮಾಡುವ ಪ್ರಕರಣಗಳು ಕಂಡುಬಂದರೆ ದಂಡ ವಿಧಿಸಿ ಎಚ್ಚರಿಕೆ ನೀಡುವಂತೆ ಸಲಹೆ ನೀಡಿದರು.
ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ‘ಸ್ವಚ್ಛತಾ ಹಿ ಸೇವಾ’ ಅಭಿಯಾನ ಹಮ್ಮಿಕೊಂಡು ಸಾರ್ವಜನಿಕರಲ್ಲಿ ಸ್ವಚ್ಛತೆ ಕುರಿತು ಹೆಚ್ಚಿನ ಅರಿವು ಮೂಡಿಸುವಂತೆ ತಿಳಿಸಲಾಯಿತು.
ಗ್ರಾಮ ಪಂಚಾಯಿತಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತ್ ಜೋಡೋ ಯುವ ಸಂಘಗಳ ನೋಂದಣಿ ಕೈಗೊಳ್ಳುವಂತೆ ಸೂಚಿಸಲಾಯಿತು. ಪ್ರತಿ ಸಂಘಕ್ಕೆ ರೂ.10 ಲಕ್ಷ ಸಹಾಯಧನ ದೊರೆಯಲಿದ್ದು, ಯುವಶಕ್ತಿಯನ್ನು ಬಲಪಡಿಸಲು ಈ ಯೋಜನೆ ಸಹಕಾರಿಯಾಗಲಿದೆ ಎಂದು ತಿಳಿಸಲಾಯಿತು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಅಬ್ದುಲ್ ನಬೀ ಮಾತನಾಡಿ, ಗ್ರಾಮ ಪಂಚಾಯಿತಿಗಳಲ್ಲಿ ತೆರಿಗೆ ವಸೂಲಾತಿಗೆ ಹೆಚ್ಚಿನ ಆದ್ಯತೆ ನೀಡಬೇಕು. ನಿಯಮಿತವಾಗಿ ಅಡಾಕ್ ಸಭೆಗಳನ್ನು ನಡೆಸಿ, ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸುವ ಮೂಲಕ ಪ್ರಗತಿ ಸಾಧಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಯೋಜನಾ ನಿರ್ದೇಶಕ ಜೀವನ್ ಕುಮಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶೇಖರ್, ಸೋಮವಾರಪೇಟೆ ಇ.ಒ. ಪರಮೇಶ್ವರ್, ವಿರಾಜಪೇಟೆ ಇ.ಒ. ರಾಜೇಶ್ ಕೆ.ಆರ್., ಮಡಿಕೇರಿ ತಾ.ಪಂ. ಸಹಾಯಕ ನಿರ್ದೇಶಕ (ಗ್ರಾ.ಉ) ಹೇಮಂತ್, ಸೋಮವಾರಪೇಟೆ ಸಹಾಯಕ ನಿರ್ದೇಶಕ (ಪಂ.ರಾಜ್) ಶ್ರೀನಿವಾಸ್, ಜಲಜೀವನ್ ಅಭಿಯಾನದ ಎಂಜಿನಿಯರ್ ಭಾಸ್ಕರ್, ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ವಿಬಿ ಜಿ ರಾಮ್ ಜಿ ತಾಂತ್ರಿಕ ಸಿಬ್ಬಂದಿ ಹಾಗೂ ಜಿಲ್ಲಾ ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು.








