ವಿರಾಜಪೇಟೆ, NEWS DESK ಅ.05: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 157ನೇ ಜನ್ಮದಿನಾಚರಣೆಯನ್ನು ವಿರಾಜಪೇಟೆ ಪುರಸಭೆ ಕಚೇರಿಯಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ವಿರಾಜಪೇಟೆ ಪುರಸಭೆಯ ಮುಖ್ಯಾಧಿಕಾರಿ ಪಟ್ಟಚೆರವಂಡ ಕೆ. ನಾಚಪ್ಪ ಅವರು ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು.
ನಂತರ ಮಾತನಾಡಿದ ಅವರು, ಗಾಂಧೀಜಿಯವರ ಬದುಕು, ಹೋರಾಟ ಹಾಗೂ ಆದರ್ಶಗಳನ್ನು ಸ್ಮರಿಸಿದರು. “ಸತ್ಯ ಮತ್ತು ಅಹಿಂಸೆ ಕೇವಲ ಪದಗಳಲ್ಲ. ಅವುಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಗಾಂಧೀಜಿಯವರು ಕಂಡ ರಾಮರಾಜ್ಯ ಎಂದರೆ ಎಲ್ಲರಿಗೂ ಸಮಾನತೆ, ನೆಮ್ಮದಿ ಹಾಗೂ ನ್ಯಾಯ ದೊರೆಯುವ ಸಮಾಜ. ಇಂದಿನ ಯುವಪೀಳಿಗೆ ಗಾಂಧೀಜಿಯವರ ಸರಳತೆ, ಸ್ವಾಭಿಮಾನ ಮತ್ತು ನೈತಿಕ ಮೌಲ್ಯಗಳನ್ನು ಮೈಗೂಡಿಸಿಕೊಳ್ಳುವುದು ಅಗತ್ಯ,” ಎಂದು ಹೇಳಿದರು.
ಸ್ವಚ್ಛತೆಯೇ ಸೇವೆ
ಗಾಂಧೀಜಿಯವರ ಕನಸಿನ ಸ್ವಚ್ಛ ಭಾರತ ನಿರ್ಮಾಣದಲ್ಲಿ ಪ್ರತಿಯೊಬ್ಬ ನಾಗರಿಕರೂ ಕೈಜೋಡಿಸಬೇಕು ಎಂದು ಕರೆ ನೀಡಿದ ನಾಚಪ್ಪ, “ಸ್ವಚ್ಛತೆ ಕೇವಲ ಸರ್ಕಾರದ ಜವಾಬ್ದಾರಿಯಲ್ಲ. ಅದು ಪ್ರತಿಯೊಬ್ಬ ನಾಗರಿಕನ ಸಾಮಾಜಿಕ ಜವಾಬ್ದಾರಿ. ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ರೋಗಮುಕ್ತ ಸಮಾಜ ನಿರ್ಮಿಸಬಹುದು,” ಎಂದರು.
ಕಾರ್ಯಕ್ರಮದ ಬಳಿಕ ಪುರಸಭೆ ವತಿಯಿಂದ ವಿಶೇಷ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಯಿತು. ಪೌರಕಾರ್ಮಿಕರು ಹಾಗೂ ಪುರಸಭೆಯ ಸಿಬ್ಬಂದಿ ಕಚೇರಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡರು. ಈ ಮೂಲಕ ಗಾಂಧೀಜಿಯವರ ಸ್ವಚ್ಛತೆ ಹಾಗೂ ಸೇವೆಯ ಸಂದೇಶವನ್ನು ಕಾರ್ಯರೂಪಕ್ಕೆ ತಂದರು.
ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತಿ
ಕಾರ್ಯಕ್ರಮದಲ್ಲಿ ಆರೋಗ್ಯ ನಿರೀಕ್ಷಕಿ ಕೋಮಲ, ಪರಿಸರ ಅಭಿಯಂತರ ರೀತು ಸಿಂಗ್, ಪುರಸಭೆ ಸಿಬ್ಬಂದಿಗಳಾದ ರಜನಿ ವೇಲುಮುರುಗನ್, ಇರ್ಫಾನ್, ಐವಾನ್, ಮುರಳಿ ಸೇರಿದಂತೆ ಪುರಸಭೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೌರಕಾರ್ಮಿಕರು ಉಪಸ್ಥಿತರಿದ್ದರು.








