ವಿರಾಜಪೇಟೆ, NEWS DESK ಅ.05: ಐತಿಹಾಸಿಕ ವಿರಾಜಪೇಟೆ ಗೌರಿ-ಗಣೇಶ ಉತ್ಸವದ ವಿಸರ್ಜನಾ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಬಸವೇಶ್ವರ ದೇವಸ್ಥಾನ ಉತ್ಸವ ಸಮಿತಿ ವತಿಯಿಂದ ವಿಶೇಷ ಶಾಂತಿ ಪೂಜೆಯನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.
ನಗರದ ಜೈನರ ಬೀದಿಯಲ್ಲಿರುವ ಬಸವೇಶ್ವರ ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಬಸವೇಶ್ವರ ಸ್ವಾಮಿಯ ನಂದಿ ವಿಗ್ರಹಕ್ಕೆ ವಿಶೇಷ ಮಹಾಪೂಜೆ ಹಾಗೂ ಶಾಂತಿ ಪೂಜೆ ಸಲ್ಲಿಸಲಾಯಿತು. ಗೌರಿ-ಗಣೇಶ ಉತ್ಸವ ಯಾವುದೇ ವಿಘ್ನಗಳಿಲ್ಲದೆ ಶಾಂತಿಯುತವಾಗಿ ನೆರವೇರಿದ್ದಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಲಾಯಿತು. ಅಲ್ಲದೆ, ಊರಿನಲ್ಲಿ ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸಲಾಯಿತು.
ಭಕ್ತರಿಗೆ ಪಾನಕ, ಕೋಸಂಬರಿ ವಿತರಣೆ
ಪೂಜಾ ಕಾರ್ಯಕ್ರಮದ ಬಳಿಕ ದೇವಸ್ಥಾನ ಸಮಿತಿ ವತಿಯಿಂದ ಭಕ್ತಾದಿಗಳು ಹಾಗೂ ಸಾರ್ವಜನಿಕರಿಗೆ ಸಾಂಪ್ರದಾಯಿಕವಾಗಿ ಪಾನಕ ಮತ್ತು ಕೋಸಂಬರಿಯನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ರವೀಂದ್ರನಾಥ್ ಕಾಮತ್, ಉಪಾಧ್ಯಕ್ಷ ಪುಷ್ಪರಾಜ್ ಜೈನ್, ಸಂಪತ್, ಕಾರ್ಯದರ್ಶಿ ಜೆ.ಎನ್. ಪ್ರಸಾದ್, ವಿ.ಆರ್. ಪುರುಷೋತ್ತಮ್, ಜೆ.ಪಿ. ಅರುಣ್ ಜೈನ್, ಸದಸ್ಯರಾದ ಜೆ.ವಿ. ಪ್ರಕಾಶ್, ಡಾ. ಎನ್. ವೀರೇಂದ್ರ ಕಾಮತ್, ನರೇಂದ್ರ ಕಾಮತ್, ಚಂದ್ರ ಪ್ರಸಾದ್, ರಾಜೇಂದ್ರ ಕಾಮತ್ ಸೇರಿದಂತೆ ಆಡಳಿತ ಮಂಡಳಿ ಹಾಗೂ ಉತ್ಸವ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಮತ್ತು ಸ್ಥಳೀಯ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.
ದೇವಾಲಯದ ಅರ್ಚಕರಾದ ಮೋಹನ್ ಹಾಗೂ ಸುಹಾಶ್ ಸೇರಿದಂತೆ ಅರ್ಚಕ ವೃಂದದವರು ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.









