ಮಡಿಕೇರಿ, NEWS DESK ಅ.9: ಮಡಿಕೇರಿ ದಸರಾ ಜನೋತ್ಸವದ ಅಂಗವಾಗಿ ಅಕ್ಟೋಬರ್ 13 ಮತ್ತು 14ರಂದು ಮಡಿಕೇರಿಯ ಗಾಂಧಿ ಮೈದಾನದಲ್ಲಿ ಮೂರನೇ ವರ್ಷದ ಕಾಫಿ ದಸರಾ ಆಯೋಜಿಸಲಾಗಿದೆ. ಕಾಫಿಗೆ ಸಂಬಂಧಿಸಿದ 50 ಮಳಿಗೆಗಳು ಮೇಳೈಸಲಿದ್ದು, ಕಾಫಿ ಕೃಷಿಯಲ್ಲಿ ಸಾಧನೆ ಮಾಡಿದ 13 ಕೃಷಿಕರು ಹಾಗೂ ಉದ್ಯಮಿಗಳನ್ನು ಸನ್ಮಾನಿಸಲಾಗುವುದು ಎಂದು ಕಾಫಿ ದಸರಾ ಸಂಚಾಲಕ ಅನಿಲ್ ಹೆಚ್.ಟಿ. ತಿಳಿಸಿದ್ದಾರೆ.
ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರ ಪರಿಕಲ್ಪನೆಯಲ್ಲಿ, ಕೂರ್ಗ್ ಕಾಫಿ ಪ್ಲಾಂಟರ್ಸ್ ಅಸೋಸಿಯೇಷನ್ ಸಹಯೋಗದೊಂದಿಗೆ ಕಾಫಿ ದಸರಾ ಆಯೋಜಿಸಲಾಗುತ್ತಿದೆ.
ಅ.13ರಂದು ಮಳಿಗೆಗಳ ಉದ್ಘಾಟನೆ
ಅಕ್ಟೋಬರ್ 13ರಂದು ಮಂಗಳವಾರ ಸಂಜೆ 4 ಗಂಟೆಗೆ ಗಾಂಧಿ ಮೈದಾನದ ಕಲಾಸಂಭ್ರಮ ಸಭಾಂಗಣದಲ್ಲಿ ಕಾಫಿ ಸಂಬಂಧಿತ 50 ಮಳಿಗೆಗಳನ್ನು ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸಲಿದ್ದಾರೆ. ಅಂದು ಸಂಜೆ 6 ಗಂಟೆಗೆ ಕಲಾಸಂಭ್ರಮ ವೇದಿಕೆಯಲ್ಲಿ ಮಡಿಕೇರಿ ನಗರದ ಸ್ವಚ್ಛತೆ ಕಾಪಾಡುವ 68 ಪೌರಕಾರ್ಮಿಕರನ್ನು ಶಾಸಕರು ಸನ್ಮಾನಿಸಿ ಗೌರವಿಸಲಿದ್ದಾರೆ.
ಅ.14ರಂದು ಕಾಫಿ ದಸರಾ ಸಭಾ ಕಾರ್ಯಕ್ರಮ
ಅಕ್ಟೋಬರ್ 14ರಂದು ಬುಧವಾರ ಬೆಳಗ್ಗೆ 10 ಗಂಟೆಗೆ ಕಲಾಸಂಭ್ರಮ ಸಭಾಂಗಣದ ಕರ್ನಾಟಕದ ಮೊದಲ ಮಹಿಳಾ ಕಾಫಿ ಉದ್ಯಮಿ ದಿ. ಸಾಕಮ್ಮ ವೇದಿಕೆಯಲ್ಲಿ ಕಾಫಿ ದಸರಾ ಸಭಾ ಕಾರ್ಯಕ್ರಮ ನಡೆಯಲಿದೆ. ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ, ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್, ಭಾರತೀಯ ಕಾಫಿ ಮಂಡಳಿ ಕಾರ್ಯದರ್ಶಿ ಕೂರ್ಮಾರಾವ್, ರಾಜ್ಯಸಭಾ ಸದಸ್ಯ ಅಜಯ್ ಮಖಾನ್, ವಿಧಾನಪರಿಷತ್ ಸದಸ್ಯರಾದ ಎಂ.ಪಿ. ಸುಜಾ ಕುಶಾಲಪ್ಪ, ಭೋಜೇಗೌಡ ಹಾಗೂ ಡಾ. ಧನಂಜಯ್ ಸರ್ಜಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಇವರೊಂದಿಗೆ ಕರ್ನಾಟಕ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಎಸ್.ಆರ್. ಮೆಹರೋಜ್ ಖಾನ್, ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸಿ.ಎಸ್. ಅರುಣ್ ಮಾಚಯ್ಯ, ಮಡಿಕೇರಿ ನಗರಸಭೆ ಅಧ್ಯಕ್ಷೆ ಪಿ. ಕಲಾವತಿ, ಕೊಡಗು ಜಿಲ್ಲಾಧಿಕಾರಿ ಎಸ್.ಜಿ. ಸೋಮಶೇಖರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಕೊಡಗು ಜಿಲ್ಲಾ ಅಧ್ಯಕ್ಷ ತೀತೀರ ಧರ್ಮಜ ಉತ್ತಪ್ಪ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ವೈ. ರಾಜೇಶ್, ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ನಂದಾ ಬೆಳ್ಯಪ್ಪ, ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಕಾರ್ಯಪ್ಪ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿರಲಿದ್ದಾರೆ.
ಕಾಫಿ ಕೃಷಿ ಕುರಿತು ವಿಚಾರಗೋಷ್ಠಿ ಮತ್ತು ಸಂವಾದ
ಅಂದು ಬೆಳಗ್ಗೆ 11 ಗಂಟೆಯಿಂದ ಕಾಫಿ ಕೃಷಿಗೆ ಸಂಬಂಧಿಸಿದ ವಿವಿಧ ವಿಚಾರಗೋಷ್ಠಿ ಹಾಗೂ ಸಂವಾದ ಕಾರ್ಯಕ್ರಮಗಳು ನಡೆಯಲಿವೆ. ಕಾಫಿ, ನಿಸರ್ಗ ಮತ್ತು ಪ್ರವಾಸೋದ್ಯಮದ ಕುರಿತು ವಿರಾಜಪೇಟೆಯ ಪ್ರವಾಸೋದ್ಯಮಿ ಭಜನ್ ಬೋಪಣ್ಣ ಮಾತನಾಡಲಿದ್ದಾರೆ.
ಕೃಷಿಕರಲ್ಲಿ ಆತಂಕ ಮೂಡಿಸಿರುವ ಇ.ಯು.ಡಿ.ಆರ್. ಮತ್ತು ಇಂಡಿಕಾಫ್ ವಿಷಯಗಳ ಕುರಿತು ಬೆಂಗಳೂರಿನ ಭಾರತೀಯ ಕಾಫಿ ಮಂಡಳಿಯ ಸಂಶೋಧನಾ ವಿಭಾಗದ ಸಹಾಯಕ ನಿರ್ದೇಶಕ ಡಾ. ಪ್ರದೀಪ್ ಬಾಬು ಮಾಹಿತಿ ನೀಡಲಿದ್ದಾರೆ. ಕೊಡಗಿನ ಕಾಫಿಯ ಗುಣಮಟ್ಟ ಮತ್ತು ಮಹತ್ವದ ಕುರಿತು ಚಟ್ಟಳ್ಳಿಯ ಕಾಫಿ ಸಂಶೋಧನಾ ಕೇಂದ್ರದ ಡಾ. ರಶ್ಮಿ ಹಾಗೂ ಕಾಫಿ ಕೆಫೆಗಳ ಭವಿಷ್ಯದ ಕುರಿತು ಹಟ್ಟಿ ಕಾಫಿ ಸಂಸ್ಥೆಯ ಯತೀಶನ್ ವಿಚಾರ ಮಂಡಿಸಲಿದ್ದಾರೆ.
13 ಕಾಫಿ ಕೃಷಿ ಸಾಧಕರಿಗೆ ಗೌರವ
ಮಧ್ಯಾಹ್ನ 12.30ಕ್ಕೆ ಸಾಕಮ್ಮ ವೇದಿಕೆಯಲ್ಲಿ ಜಿಲ್ಲೆಯ 13 ಕಾಫಿ ಕೃಷಿ ಸಾಧಕರಿಗೆ ಸನ್ಮಾನ ನಡೆಯಲಿದೆ.
ಈ ಬಾರಿ ಪ್ರಶಸ್ತಿಗೆ ಆಯ್ಕೆಯಾದವರಲ್ಲಿ ಚೆಯ್ಯಂಡಾಣೆಯ ಮಕ್ಕಿಮನೆ ಸುಧೀರ್, ಬಗ್ಗನಮನೆಯ ಸುರೇಂದ್ರ, ಸೋಮವಾರಪೇಟೆಯ ಉದಯ್ ಈಶ್ವರನ್, ಕಾಫಿ ಮಂಡಳಿಯ ಮಾಜಿ ಉಪಾಧ್ಯಕ್ಷೆ ತಾರಾ ಅಯ್ಯಮ್ಮ, ಮಡಿಕೇರಿಯ ಕಾಫಿ ತಜ್ಞ ಕೆ.ಕೆ. ವಿಶ್ವನಾಥ್, ಕಾಫಿ ಪಲ್ಪಿಂಗ್ನಲ್ಲಿ ಸಹಕಾರ ತತ್ವ ಅಳವಡಿಸಿಕೊಂಡ ತಾಕೇರಿಯ ಕೃಷಿ ಸ್ವಸಹಾಯ ಸಂಘ, ಮಣಜೂರಿನ ಶೇಷಪ್ಪ, ಕಾಫಿ ಬ್ಲಾಗರ್ ಪಟ್ಟಡ ಕಾರ್ತಿಕ್, ನಾಕೂರು ಶಿರಂಗಾಲದ ಪಿ.ಎಂ. ಬಿಜು, ಸುಂಟಿಕೊಪ್ಪದ ಪನ್ಯ ತೋಟದ ಎಸ್.ಬಿ. ಜಯರಾಜ್, ಕೊಡ್ಲಿಪೇಟೆಯ ಕೃಷಿಕ ಮಹಮ್ಮದ್ ರಾಝ, ನೆಲ್ಯಹುದಿಕೇರಿಯ ಇ.ಎಚ್. ಹನೀಫ ಹಾಗೂ ನಾವೀನ್ಯತೆಯ ಕೆಫೆಗಾಗಿ ಮಡಿಕೇರಿಯ ವೀಲ್ ಕೆಫೆ ಸೇರಿವೆ ಎಂದು ಅನಿಲ್ ಹೆಚ್.ಟಿ. ತಿಳಿಸಿದ್ದಾರೆ.
ಕಾಫಿ ದಸರಾ ಸಮಿತಿಯ ಕಾರ್ಯನಿರ್ವಹಣೆ
ಕಾಫಿ ದಸರಾ ಸಮಿತಿಯ ಸದಸ್ಯರಾಗಿ ವಿನೋದ್ ಮೂಡಗದ್ದೆ, ಪಾಲೆಯಂಡ ರೂಪಾ ಸುಬ್ಬಯ್ಯ, ವೀಣಾಕ್ಷಿ ರವಿಕುಮಾರ್, ಮಿನಾಜ್ ಪ್ರವೀಣ್, ಹೆಚ್.ಟಿ. ಶಿವಪ್ಪ, ಮೇಪಾಡಂಡ ಸವಿತಾ ಕೀರ್ತನ್, ಪುದಿನೆರವನ ರೇವತಿ ರಮೇಶ್ ಹಾಗೂ ಮೂವೆರ ಸರಿತಾ ಹರೀಶ್ ಕಾರ್ಯನಿರ್ವಹಿಸಿದ್ದಾರೆ. ಬಿ.ವೈ. ರಾಜೇಶ್ ಗೌರವ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಅನಿಲ್ ಮಾಹಿತಿ ನೀಡಿದ್ದಾರೆ.
ಕಾಫಿ ಕೃಷಿ, ಕಾಫಿ ಉದ್ಯಮ, ಪ್ರವಾಸೋದ್ಯಮ ಹಾಗೂ ಸ್ಥಳೀಯ ಉತ್ಪನ್ನಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಆಯೋಜಿಸಿರುವ ಕಾಫಿ ದಸರಾ, ಮಡಿಕೇರಿ ದಸರಾ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಲಿದೆ.

















