ಸೋಮವಾರಪೇಟೆ, NEWS DESK ಅ.09: ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳದಿಣ್ಣೆ ಗ್ರಾಮದ ಮುಖ್ಯ ರಸ್ತೆಯನ್ನು ₹25 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸುವ ಕಾಮಗಾರಿಗೆ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ಇತ್ತೀಚೆಗೆ ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯಲ್ಲಿ ರಸ್ತೆ ಸಂಪರ್ಕ ಪ್ರಮುಖ ಪಾತ್ರ ವಹಿಸುತ್ತದೆ. ಉತ್ತಮ ರಸ್ತೆಗಳಿಂದ ಗ್ರಾಮಸ್ಥರ ದೈನಂದಿನ ಸಂಚಾರ, ಕೃಷಿ ಚಟುವಟಿಕೆಗಳು ಹಾಗೂ ವಾಹನಗಳ ಓಡಾಟಕ್ಕೆ ಅನುಕೂಲವಾಗಲಿದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ರಸ್ತೆ ಅಭಿವೃದ್ಧಿಗೆ ಅಗತ್ಯ ಅನುದಾನ ಮೀಸಲಿಟ್ಟು, ಗುಣಮಟ್ಟದ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಹಳ್ಳದಿಣ್ಣೆ ಗ್ರಾಮದ ಮುಖ್ಯ ರಸ್ತೆಯ ಅಭಿವೃದ್ಧಿ ಹಲವು ವರ್ಷಗಳಿಂದ ಗ್ರಾಮಸ್ಥರ ಬೇಡಿಕೆಯಾಗಿತ್ತು. ಇದೀಗ ₹25 ಲಕ್ಷ ಅನುದಾನದಲ್ಲಿ ಕಾಮಗಾರಿ ಆರಂಭವಾಗುತ್ತಿರುವುದರಿಂದ ಗ್ರಾಮಸ್ಥರ ಬಹುದಿನಗಳ ನಿರೀಕ್ಷೆ ಈಡೇರಿದಂತಾಗಿದೆ. ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಗುಣಮಟ್ಟದೊಂದಿಗೆ ಪೂರ್ಣಗೊಳಿಸಿ, ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಸ್ಥಳೀಯರಾದ ಭಾಸ್ಕರ್ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಬಿ. ಸತೀಶ್, ಉಪಾಧ್ಯಕ್ಷ ಬಸವರಾಜು, ವಲಯ ಕಾಂಗ್ರೆಸ್ ಅಧ್ಯಕ್ಷ ಉಲ್ಲಾಸ್, ಪ್ರಮುಖರಾದ ಸುನಿಲ್, ಅಬ್ದುಲ್ ರಜಾಕ್, ಆನಂದ್, ಮಂಜುಳಾ, ರಿಯಾಜ್, ಸ್ಥಳೀಯರಾದ ಭಾಸ್ಕರ್, ಸುಂದರ, ಶಶಿ, ಸೋಮಯ್ಯ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

















