ಚೆಟ್ಟಳ್ಳಿ, NEWS DESK ಅ.19: ಕಾವೇರಿ ತುಲಾ ಸಂಕ್ರಮಣದ ಅಂಗವಾಗಿ ತಲಕಾವೇರಿಯಲ್ಲಿ ನಡೆದ ತೀರ್ಥೋದ್ಭವದ ಪವಿತ್ರ ತೀರ್ಥವನ್ನು ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ತರಿಸಿ, ಸಂಘದ ಆವರಣದಲ್ಲಿರುವ ಕಾವೇರಿ ಮಾತೆಯ ಪ್ರತಿಮೆಗೆ ವಿಶೇಷ ಪೂಜೆ ಸಲ್ಲಿಸ ಲಾಯಿತು.
ತಲಕಾವೇರಿಯಿಂದ ಪುಣ್ಯತೀರ್ಥವನ್ನು ತಂದು ಅರ್ಚಕರ ಮೂಲಕ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಭಕ್ತರಿಗೆ ತೀರ್ಥ ಹಾಗೂ ಪ್ರಸಾದ ವಿತರಿಸಲಾಯಿತು.
ಈ ಸಂದರ್ಭ ಮಾತನಾಡಿದ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ, ಕಾವೇರಿ ಮಾತೆಯ ಪ್ರತಿಮೆಯನ್ನು ಪ್ರತಿಷ್ಠಾಪಿಸಿ 15 ವರ್ಷಗಳು ಪೂರ್ಣಗೊಂಡಿದ್ದು, ಅಂದಿನಿಂದ ಪ್ರತಿವರ್ಷ ತಲಕಾವೇರಿಯಿಂದ ಪುಣ್ಯತೀರ್ಥ ತಂದು ವಿತರಿಸುವ ಕಾರ್ಯ ನಡೆಸಿಕೊಂಡು ಬರಲಾಗುತ್ತಿದೆ ಎಂದರು. ಜಾತಿ-ಜಾತಿಗಳೆಂದು ವಿಭಜನೆಯಾಗದೆ, ಎಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಪರಸ್ಪರ ಪ್ರೀತಿ, ಸೌಹಾರ್ದದಿಂದ ಬದುಕಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಪೇರಿಯನ ಪೂಣಚ್ಚ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಂದಿನಿ ಕೆ.ಎಸ್., ಸಂಘದ ನಿರ್ದೇಶಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.





































