ವಿರಾಜಪೇಟೆ, NEWS DESK ಅ.25: ಕೊಡಗು ಜಿಲ್ಲೆಯ ಕಿವುಡ ಯುವ ಕ್ರೀಡಾಪಟುಗಳಿಗೆ ಅಗತ್ಯ ಕ್ರೀಡಾ ಸಾಮಗ್ರಿ, ಪ್ರಯಾಣ ಹಾಗೂ ವಸತಿ ವೆಚ್ಚಗಳಿಗೆ ಪ್ರಾಯೋಜಕತ್ವದ ನೆರವು ಒದಗಿಸುವಂತೆ ಕೊಡಗು ಜಿಲ್ಲಾ ಕಿವುಡರ ಸಂಘ (ರಿ.) ಮನವಿ ಮಾಡಿದೆ.
ಸಂಘದ ಅಧ್ಯಕ್ಷ ಸ್ಯಾಮ್ ಜೋಸೆಫ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಂಬರುವ ರಾಜ್ಯಮಟ್ಟದ ಕ್ರೀಡಾಕೂಟಗಳಲ್ಲಿ ಜಿಲ್ಲೆಯ ಕ್ರೀಡಾಪಟುಗಳ ಭಾಗವಹಿಸುವಿಕೆ ಹಾಗೂ ಅವರಿಗೆ ಅಗತ್ಯವಿರುವ ನೆರವಿನ ಕುರಿತು ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಸ್ಯಾಮ್ ಜೋಸೆಫ್ ಅವರು, ಮಂಗಳೂರಿನಲ್ಲಿ ನಡೆಯಲಿರುವ 12ನೇ ಕರ್ನಾಟಕ ರಾಜ್ಯಮಟ್ಟದ ಕಿವುಡರ ಟೆನಿಸ್ ಬಾಲ್ ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಕೊಡಗು ಜಿಲ್ಲೆಯ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಅವರಿಗೆ ಅಗತ್ಯ ಕ್ರೀಡಾ ಸಾಮಗ್ರಿಗಳನ್ನು ಒದಗಿಸುವುದರ ಜತೆಗೆ ಪ್ರಯಾಣ ಮತ್ತು ವಸತಿ ವೆಚ್ಚ ಭರಿಸಲು ಆರ್ಥಿಕ ನೆರವಿನ ಅಗತ್ಯವಿದೆ. ಜಿಲ್ಲೆಯ ಉದ್ಯಮಿಗಳು, ದಾನಿಗಳು ಹಾಗೂ ಸಂಘ-ಸಂಸ್ಥೆಗಳು ಸಹಕಾರ ನೀಡುವ ಮೂಲಕ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.
ಸಂಘದ ನಿರ್ದೇಶಕಿ ಹಾಗೂ ಬೇಟೋಳಿ ಗ್ರಾಮ ಪಂಚಾಯಿತಿಯ ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆ ಆಯಿಷಾ ಮಾತನಾಡಿ, ಕೊಡಗು ಜಿಲ್ಲಾ ಕಿವುಡರ ಸಂಘವು ಕಳೆದ ಎಂಟು ವರ್ಷಗಳಿಂದ ಕಿವುಡ ಸಮುದಾಯದ ಕಲ್ಯಾಣ, ಸಬಲೀಕರಣ ಮತ್ತು ಅಭಿವೃದ್ಧಿಗಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಶಿಕ್ಷಣ, ಕ್ರೀಡೆ ಹಾಗೂ ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ಕಿವುಡ ಯುವಜನರಿಗೆ ಸಮಾನ ಅವಕಾಶಗಳನ್ನು ಕಲ್ಪಿಸಲು ಶ್ರಮಿಸುತ್ತಿದೆ ಎಂದು ತಿಳಿಸಿದರು.
ಈ ಬಾರಿ ನಡೆಯಲಿರುವ 12ನೇ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ದಾನಿಗಳು ನೆರವು ನೀಡಬೇಕು. ಕ್ರೀಡೆಯ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಹಾಗೂ ಜಿಲ್ಲೆಗೆ ಕೀರ್ತಿ ತರಲು ಅವರಿಗೆ ಸೂಕ್ತ ಅವಕಾಶ ಕಲ್ಪಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.
ಇದರೊಂದಿಗೆ, ಕೊಡಗು ಜಿಲ್ಲೆಯ ಕಿವುಡ ಕ್ರೀಡಾಪಟುಗಳು 2027ರ ಜನವರಿಯಲ್ಲಿ ಶಿವಮೊಗ್ಗದಲ್ಲಿ ನಡೆಯಲಿರುವ ರಾಜ್ಯಮಟ್ಟದ ಕಿವುಡರ ವಾಲಿಬಾಲ್ ಪಂದ್ಯಾವಳಿಯಲ್ಲಿಯೂ ಭಾಗವಹಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಎರಡೂ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಅಗತ್ಯ ಸಿದ್ಧತೆ ಕೈಗೊಳ್ಳುವ ನಿಟ್ಟಿನಲ್ಲಿ ಆರ್ಥಿಕ ನೆರವು ಮಹತ್ವದ್ದಾಗಿದೆ ಎಂದು ಸಂಘದ ವತಿಯಿಂದ ತಿಳಿಸಲಾಯಿತು.
ಈ ಹಿನ್ನೆಲೆಯಲ್ಲಿ ಜಿಲ್ಲೆಯ ಉದ್ಯಮಿಗಳು, ಕಂಪನಿಗಳು, ಸಂಘ-ಸಂಸ್ಥೆಗಳು, ದಾನಿಗಳು ಹಾಗೂ ಕ್ರೀಡಾ ಪ್ರೇಮಿಗಳು ಮುಂದೆ ಬಂದು ಕ್ರೀಡಾ ಸಾಮಗ್ರಿ, ಪ್ರಯಾಣ ಮತ್ತು ವಸತಿ ವೆಚ್ಚಗಳಿಗೆ ನೆರವು ನೀಡುವಂತೆ ಕೊಡಗು ಜಿಲ್ಲಾ ಕಿವುಡರ ಸಂಘ (ರಿ.) ಮನವಿ ಮಾಡಿದೆ.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಕೆ.ಕೆ. ಶಂಕರನಾರಾಯಣ, ಪ್ರಧಾನ ಕಾರ್ಯದರ್ಶಿ ರಂಜಿತ್ ಪುದಿಯತಂಡ, ಉಪ ಕಾರ್ಯದರ್ಶಿ ನಾಗೇಶ್, ಖಜಾಂಚಿ ಸುರೇಶ್, ಕ್ರೀಡಾ ಕಾರ್ಯದರ್ಶಿ ಅವಿನಾಶ್ ಜೋಸೆಫ್ ಸೇರಿದಂತೆ ಸಂಘದ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

















