ಸಂಟಿಕೊಪ್ಪ, NEWS DESK ಅ. 31: ಕುಶಾಲನಗರ ತಾಲ್ಲೂಕು ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ವಿಜಯದಶಮಿ ಅಂಗವಾಗಿ ಪಥಸಂಚಲನವು ಶನಿವಾರ ಸಂಜೆ ಸಂತಿಕೊಪ್ಪ ಪಟ್ಟಣದಲ್ಲಿ ನಡೆಯಿತು.
ಸಂತಿಕೊಪ್ಪ ಸಮೀಪದ ಗದ್ದೆಹಳ್ಳದ ಆರ್.ಕೆ. ಬಡಾವಣೆಯಲ್ಲಿ ಸಂಘದ ಭಗವಾಧ್ವಜಕ್ಕೆ ಪುಷ್ಪನಮನ ಸಲ್ಲಿಸಿ, ಪ್ರಾರ್ಥನೆಯೊಂದಿಗೆ ಪಥಸಂಚಲನಕ್ಕೆ ಚಾಲನೆ ನೀಡಲಾಯಿತು.
ಘೋಷ್ ವಾದ್ಯದ ಮುಂಚೂಣಿಯಲ್ಲಿ ಶಿಸ್ತಿನಿಂದ ಸಮವಸ್ತ್ರ ಧರಿಸಿ ಸಾಗಿದ ಸ್ವಯಂಸೇವಕರು, ಗದ್ದೆಹಳ್ಳ ಮಾರ್ಗವಾಗಿ ಪಟ್ಟಣದ ಮೂಲಕ ಅಯ್ಯಪ್ಪ ದೇವಾಲಯದವರೆಗೆ ಪಥಸಂಚಲನ ನಡೆಸಿದರು. ಅಲ್ಲಿಂದ ಮರಳುವಾಗ ಮಾರುಕಟ್ಟೆ ಮಾರ್ಗವಾಗಿ ತೆರಳಿ ತೆರಳಿದ ಪಥಸಂಚಲನವು ಚಾಮುಂಡೇಶ್ವರಿ ಹಾಗೂ ಮುತ್ತಪ್ಪ ದೇವಾಲಯದ ಬಳಿ ಸಂಪನ್ನಗೊಂಡಿತು.
ಪಥಸಂಚಲನ ಸಾಗಿದ ಮಾರ್ಗದುದ್ದಕ್ಕೂ ಮಹಿಳೆಯರು ಹಾಗೂ ಮಕ್ಕಳು ಪುಷ್ಪಾರ್ಚನೆ ಮಾಡುವ ಮೂಲಕ ಸ್ವಯಂಸೇವಕರನ್ನು ಸ್ವಾಗತಿಸಿದರು.
ಕುಶಾಲನಗರ ತಾಲ್ಲೂಕಿಗೆ ಸೇರಿದ ಸಂತಿಕೊಪ್ಪ, ಏಳನೇ ಹೊಸಕೋಟೆ, ಕೊಡಗರಹಳ್ಳಿ, ಕುಶಾಲನಗರ, ನಾಕೂರು ಕಾನ್ ಬೈಲ್, ಕಂಬಿಬಾಣೆ, ಚೆಟ್ಟಳ್ಳಿ, ಕೆದಕಲ್, ಮತ್ತಿಕಾಡು ಸೇರಿದಂತೆ ವಿವಿಧ ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ಆರ್ಎಸ್ಎಸ್ ಸ್ವಯಂಸೇವಕರು ಪಥಸಂಚಲನದಲ್ಲಿ ಭಾಗವಹಿಸಿದ್ದರು.
ಸಂತಿಕೊಪ್ಪ ಪಿಎಸ್ಐ ಮೋಹನ್ ರಾಜ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಕೊನೆಯಲ್ಲಿ ಭಾಗವಹಿಸಿದ ಸ್ವಯಂಸೇವಕರು ಹಾಗೂ ಸಾರ್ವಜನಿಕರಿಗೆ ಉಪಹಾರದ ವ್ಯವಸ್ಥೆ ಕಲ್ಪಿಸಲಾಗಿತ್ತು.

















