ಗೋಣಿಕೊಪ್ಪ, NEWS DESK ನ.3: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಕೊಡಗು ಜಿಲ್ಲೆ ಇವರ ಆಶ್ರಯದಲ್ಲಿ ಕುಶಾಲನಗರದ ಕೂಡಿಗೆಯಲ್ಲಿ ನಡೆದ ಜಿಲ್ಲಾಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕ ಮತ್ತು ಬಾಲಕಿಯರ ಥ್ರೋಬಾಲ್ ಹಾಗೂ ವಾಲಿಬಾಲ್ ಪಂದ್ಯಾವಳಿಯಲ್ಲಿ ಪೊನ್ನಂಪೇಟೆ ತಾಲೂಕನ್ನು ಪ್ರತಿನಿಧಿಸಿದ ಗೋಣಿಕೊಪ್ಪಲಿನ ಸರ್ವದೈವತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಪಂದ್ಯಾವಳಿಯಲ್ಲಿ ಕಾಲೇಜಿನ ಬಾಲಕರ ಥ್ರೋಬಾಲ್ ತಂಡ ಪ್ರಥಮ ಸ್ಥಾನ ಪಡೆದು ಸತತ ನಾಲ್ಕನೇ ಬಾರಿಗೆ ರಾಜ್ಯಮಟ್ಟಕ್ಕೆ ಆಯ್ಕೆಯಾಗುವ ಮೂಲಕ ವಿಶೇಷ ಸಾಧನೆ ಮಾಡಿದೆ.
ಅದೇ ರೀತಿ, ಬಾಲಕಿಯರ ಥ್ರೋಬಾಲ್ ತಂಡವೂ ಪ್ರಥಮ ಸ್ಥಾನ ಗಳಿಸಿ ಮೂರನೇ ಬಾರಿಗೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ. ಬಾಲಕಿಯರ ವಾಲಿಬಾಲ್ ತಂಡ ಕೂಡ ಪ್ರಥಮ ಸ್ಥಾನ ಪಡೆದು ಸತತ ಎರಡನೇ ಬಾರಿಗೆ ಕೊಡಗು ಜಿಲ್ಲೆಯನ್ನು ರಾಜ್ಯಮಟ್ಟದಲ್ಲಿ ಪ್ರತಿನಿಧಿಸುವ ಅರ್ಹತೆ ಗಳಿಸಿದೆ.
ಈ ಮೂಲಕ ಕಾಲೇಜಿನ ಮೂರು ಕ್ರೀಡಾ ತಂಡಗಳು ತಮ್ಮ ತಮ್ಮ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವುದು ಕಾಲೇಜಿನ ಕ್ರೀಡಾ ಸಾಧನೆಗೆ ಮತ್ತೊಂದು ಗರಿಮೆಯಾಗಿದೆ.
ವಿದ್ಯಾರ್ಥಿಗಳಿಗೆ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕರಾದ ಪ್ರಮೋದ್ ಗೌಡ ಅವರು ತರಬೇತಿ ನೀಡಿರುತ್ತಾರೆ. ವಿದ್ಯಾರ್ಥಿಗಳ ಈ ಅಮೋಘ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

















