ಮಡಿಕೇರಿ, NEWS DESK ನ.3: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ದತ್ತಿ ಪ್ರಶಸ್ತಿಗಳಲ್ಲಿ ಒಂದಾದ ಶ್ರೀಮತಿ ವಿಜಯ ವಿಷ್ಣು ಭಟ್ ದತ್ತಿ ಪ್ರಶಸ್ತಿಗೆ ಜಿಲ್ಲೆಯ ಬಹುಭಾಷಾ ಸಾಹಿತಿ ಉಳುವಂಗಡ ಕಾವೇರಿ ಉದಯ್ ಅವರು ಆಯ್ಕೆಯಾಗಿದ್ದಾರೆ.
2026-27ನೇ ಸಾಲಿನ ದತ್ತಿ ಪ್ರಶಸ್ತಿಯ ಆಯ್ಕೆ ಪ್ರಕ್ರಿಯೆಗಾಗಿ ಜಿಲ್ಲೆಯ ಮಹಿಳಾ ಲೇಖಕಿಯರಿಂದ ಕೃತಿಗಳನ್ನು ಆಹ್ವಾನಿಸಲಾಗಿತ್ತು. ಸ್ವೀಕೃತ ಕೃತಿಗಳನ್ನು ಜಿಲ್ಲೆಯ ಮೂವರು ಹಿರಿಯ ಸಾಹಿತಿಗಳು ಪ್ರತ್ಯೇಕವಾಗಿ ಪರಿಶೀಲಿಸಿ ನೀಡಿದ ಅಂಕಗಳನ್ನು ಕ್ರೋಢೀಕರಿಸಿ ಕಾವೇರಿ ಉದಯ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಟಿ. ಶೆಟ್ಟಿಗೇರಿ ನಿವಾಸಿ ಚಂಗುಲಂಡ ಸಿ. ಮಾದಪ್ಪ ಮತ್ತು ಸರಸ್ವತಿ ದಂಪತಿಯ ಪುತ್ರಿಯಾಗಿ 1969ರ ಮೇ 18ರಂದು ಜನಿಸಿದ ಇವರು ಪುತ್ತೂರಿನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದಾರೆ. ಬಳಿಕ ವಗರೆಯ ನಿವಾಸಿ ಉಳುವಂಗಡ ಯು. ಉದಯ್ ಅವರನ್ನು ವಿವಾಹವಾಗಿದ್ದು, ಇಬ್ಬರು ಪುತ್ರರು ಹಾಗೂ ಮೊಮ್ಮಕ್ಕಳೊಂದಿಗೆ ಕುಟುಂಬ ಜೀವನ ನಡೆಸುತ್ತಿದ್ದಾರೆ.
ಬಹುಭಾಷಾ ಸಾಹಿತಿ, ಕವಯಿತ್ರಿಯಾಗಿರುವ ಕಾವೇರಿ ಉದಯ್ ಅವರು ಹವ್ಯಾಸಿ ರಂಗ ಕಲಾವಿದೆ ಹಾಗೂ ಚಿತ್ರಕಲಾವಿದೆಯೂ ಆಗಿದ್ದಾರೆ. ಕನ್ನಡ, ಕೊಡವ, ಇಂಗ್ಲಿಷ್, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಕಥೆ, ಕವನ, ಕಾದಂಬರಿ, ಮುಕ್ತಕ, ವಚನ, ಜೀವನ ಚರಿತ್ರೆ, ಭಕ್ತಿ ಪ್ರಧಾನ ಕೃತಿಗಳು, ಲಲಿತ ಪ್ರಬಂಧ ಹಾಗೂ ನಾಟಕ ಸೇರಿದಂತೆ ಒಟ್ಟು 36 ಕೃತಿಗಳನ್ನು ರಚಿಸಿ ಪ್ರಕಟಿಸಿದ್ದಾರೆ. ಆರು ಭಾಷೆಗಳಲ್ಲಿ ಕವನ ವಾಚನ ಮಾಡಿರುವ ಹೆಗ್ಗಳಿಕೆಯೂ ಇವರಿಗಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮಂಗಲ ಹೋಬಳಿ ಅಧ್ಯಕ್ಷೆ, ಸಿರಿಗನ್ನಡ ವೇದಿಕೆಯ ಕೊಡಗು ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ, ಗುರುಕುಲ ಕಲಾ ಪ್ರತಿಷ್ಠಾನದ ಕೊಡಗು ಜಿಲ್ಲಾ ಘಟಕದ ಗೌರವಾಧ್ಯಕ್ಷೆ ಹಾಗೂ ಕರ್ನಾಟಕ ಲೇಖಕಿಯರ ಸಂಘದ ಕೊಡಗು ಶಾಖೆಯ ಉಪಾಧ್ಯಕ್ಷೆಯಾಗಿ ಸಾಹಿತ್ಯ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಇವರು ರಚಿಸಿರುವ ಕಾದಂಬರಿಯೊಂದು ಕೊಡವ ಚಲನಚಿತ್ರವಾಗಿ ಮೂಡಿಬಂದಿದ್ದು, ಇವರ ಸಣ್ಣ ಕಥೆಗಳನ್ನು ಆಧರಿಸಿ ನಾಲ್ಕು ಕಿರುಚಿತ್ರಗಳು ನಿರ್ಮಾಣಗೊಂಡಿವೆ. ಇವರು ರಚಿಸಿರುವ ಹಾಡುಗಳನ್ನು ಹಲವು ಗಾಯಕರು ಹಾಡಿದ್ದು, ಮಡಿಕೇರಿ ಆಕಾಶವಾಣಿಯ ಸುಪ್ರಭಾತ ಕಾರ್ಯಕ್ರಮದಲ್ಲಿಯೂ ಪ್ರಸಾರವಾಗುತ್ತಿವೆ.
ಮೈಸೂರು ದಸರಾ ಕವಿಗೋಷ್ಠಿಯಲ್ಲಿ ಕೊಡವ ಮತ್ತು ಕನ್ನಡ ಭಾಷೆಗಳಲ್ಲಿ ಎರಡು ಬಾರಿ ಕವನ ವಾಚನ ಮಾಡಿರುವ ಇವರು, ಹಲವು ಕವಿಗೋಷ್ಠಿಗಳ ಅಧ್ಯಕ್ಷತೆ ವಹಿಸಿದ್ದಾರೆ. ವಿವಿಧ ಕಾರ್ಯಕ್ರಮಗಳಲ್ಲಿ ವಿಚಾರ ಮಂಡನೆ ಮಾಡಿರುವುದಲ್ಲದೆ, ಪೌರಾಣಿಕ ಮತ್ತು ಸಾಮಾಜಿಕ ನಾಟಕಗಳನ್ನು ರಚಿಸಿ, ಮಹಿಳೆಯರಿಗೆ ನಿರ್ದೇಶನ ನೀಡಿ, ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿ ಪ್ರದರ್ಶನಗಳನ್ನು ನೀಡಿದ್ದಾರೆ.
ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದ ಸೇವೆಗಾಗಿ 2022ನೇ ಸಾಲಿನ ಕರ್ನಾಟಕ ಸರ್ಕಾರದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಮಕ್ಕಳ ಚಂದಿರ ಪುಸ್ತಕ ಪ್ರಶಸ್ತಿ, ಗುರುಕುಲ ಕಲಾ ಪ್ರತಿಷ್ಠಾನದ ಗುರುಕುಲ ಶಿರೋಮಣಿ ಪ್ರಶಸ್ತಿ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಶಸ್ತಿ, ನಾಡಿನ ಸಮಾಚಾರ ದಿನಪತ್ರಿಕೆಯ ಸಾಹಿತ್ಯ ರತ್ನ ಮತ್ತು ಸಾಹಿತ್ಯ ತಪಸ್ವಿ ಪ್ರಶಸ್ತಿ, ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಬಹುಭಾಷಾ ಸಾಹಿತ್ಯ ಚೇತನ ಪ್ರಶಸ್ತಿ, ವಿದ್ಯಾಧರ ಕನ್ನಡ ಪ್ರತಿಷ್ಠಾನದ ಕನ್ನಡ ಬಹುಭಾಷಾ ಸಾಹಿತ್ಯ ಸಿರಿ ಪ್ರಶಸ್ತಿ, ಯಶೋಮಾರ್ಗ ಸೇವಾ ಫೌಂಡೇಶನ್ನ ಕೆ.ಪಿ. ಪೂರ್ಣಚಂದ್ರ ತೇಜಸ್ವಿ (ಪೂಚಂತೆ) ಪ್ರಶಸ್ತಿ, ಮಾಣಿಕ್ಯ ಪ್ರಕಾಶನದ ಕಾದಂಬರಿ ಮಾಣಿಕ್ಯ ಪ್ರಶಸ್ತಿ ಸೇರಿದಂತೆ ಒಟ್ಟು ಹನ್ನೊಂದು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇಂಟರ್ನ್ಯಾಷನಲ್ ಕಲ್ಚರ್ ರಿಸರ್ಚ್ ಯುನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ಪದವಿಯನ್ನೂ ಪಡೆದಿದ್ದಾರೆ.
ಇವರ ಸಾಹಿತ್ಯ ಸೇವೆಯನ್ನು ಗುರುತಿಸಿ ಈವರೆಗೆ 26 ಸಂಘ-ಸಂಸ್ಥೆಗಳು ಸನ್ಮಾನಿಸಿವೆ.
ಹಿಂದಿನ ವರ್ಷಗಳಲ್ಲಿ ವಿಜಯ ವಿಷ್ಣು ಭಟ್ ಪ್ರಥಮ ದತ್ತಿ ಪ್ರಶಸ್ತಿಯನ್ನು ಸಾಹಿತಿ ಸುಮಿತಾ ಅಮೃತ್ ರಾಜ್ ಹಾಗೂ ದ್ವಿತೀಯ ಪ್ರಶಸ್ತಿಯನ್ನು ಸಾಹಿತಿ ಪ್ರತಿಭಾ ಹರೀಶ್ ರೈ ಅವರು ಪಡೆದುಕೊಂಡಿದ್ದರು. ಈ ಬಾರಿ ತೃತೀಯ ಪ್ರಶಸ್ತಿಗೆ ಉಳುವಂಗಡ ಕಾವೇರಿ ಉದಯ್ ಅವರು ಭಾಜನರಾಗಿದ್ದಾರೆ.
ಪ್ರಶಸ್ತಿಗೆ ಆಯ್ಕೆಯಾಗಿರುವ ಕಾವೇರಿ ಉದಯ್ ಅವರನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಭಿನಂದಿಸಿದೆ ಎಂದು ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

















