ಮಡಿಕೇರಿ, NEWS DESK ನ.3: ನಾ. ಡಿಸೋಜಾ ಅವರು ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದವರು. ಮಲೆನಾಡಿನ ಜನಜೀವನದ ನೋವು-ನಲಿವುಗಳಿಗೆ ಅಕ್ಷರ ರೂಪ ನೀಡಿದ ಪರಿಸರ ಪ್ರೇಮಿ ಹಾಗೂ ವಿಶ್ವಮಾನವತ್ವದ ಚಿಂತನೆಗಳನ್ನು ಮೈಗೂಡಿಸಿಕೊಂಡ ದಾರ್ಶನಿಕ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಸ್.ಐ. ಮುನೀರ್ ಅಹಮದ್ ಬಣ್ಣಿಸಿದರು.
ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಿದ್ದ ನಾ. ಡಿಸೋಜಾ ಮಕ್ಕಳ ಸಾಹಿತ್ಯ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ನಾ. ಡಿಸೋಜಾ ಅವರ ಸಾಹಿತ್ಯದ ಕುರಿತು ಉಪನ್ಯಾಸ ನೀಡಿದರು.
ಲೇಖಕ ತನ್ನ ಬುದ್ಧಿ, ಮನಸ್ಸಿನ ಭಾವನೆಗಳು, ಕಲ್ಪನೆ ಹಾಗೂ ಜೀವನ ತತ್ವಗಳಿಗೆ ಸೃಜನಾತ್ಮಕ ರೂಪ ನೀಡಿದಾಗ ಉತ್ತಮ ಕೃತಿಗಳು ಮೂಡಿಬರುತ್ತವೆ. ಅಂತಹ ಕೃತಿಗಳು ಜನಜೀವನಕ್ಕೆ ದಾರಿದೀಪವಾಗುತ್ತವೆ. ನಾ. ಡಿಸೋಜಾ ಅವರು ಇಂತಹ ಮಹತ್ವದ ಕೃತಿಗಳನ್ನು ರಚಿಸಿದವರು. ಅವರು ಕೇವಲ ಸಾಹಿತಿ ಅಥವಾ ಕಥೆಗಾರರಲ್ಲ; ಪ್ರಖರ ವೈಚಾರಿಕ ಪ್ರಜ್ಞೆಯ ಚಿಂತಕರು ಹಾಗೂ ಸರ್ವಧರ್ಮ ಸಮಭಾವದ ಪ್ರತಿಪಾದಕರು. ಅವರ ಸಾಹಿತ್ಯದಲ್ಲಿ ವಿಶ್ವಮಾನವತ್ವದ ಆಶಯಗಳು ಮೇಳೈಸಿವೆ ಎಂದರು.
ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣದಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮಾತನಾಡಿ, ಅಪಾರ ಪರಿಸರ ಕಾಳಜಿಯುಳ್ಳ ನಾ. ಡಿಸೋಜಾ ಅವರು ಕನ್ನಡ ಸಾಹಿತ್ಯ ಲೋಕಕ್ಕೆ ಮಕ್ಕಳ ಸಾಹಿತ್ಯ ಸೇರಿದಂತೆ ಅಪಾರ ಕೊಡುಗೆ ನೀಡಿದ್ದಾರೆ. ತಮ್ಮ ಕಥೆ ಹಾಗೂ ಕಾದಂಬರಿಗಳ ಮೂಲಕ ಪರಿಸರ ಸಂರಕ್ಷಣೆಯ ಮಹತ್ವವನ್ನು ನಿರಂತರವಾಗಿ ಸಾರಿದ್ದಾರೆ. ಪರಿಸರ ನಾಶವೇ ಮಾನವ ಜನಾಂಗದ ವಿನಾಶಕ್ಕೆ ಮೂಲ ಎಂಬುದನ್ನು ತಮ್ಮ ಸಾಹಿತ್ಯದ ಮೂಲಕ ಎಚ್ಚರಿಸಿದ್ದಾರೆ ಎಂದರು.
ಮಡಿಕೇರಿಯಲ್ಲಿ ನಡೆದ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಾ. ಡಿಸೋಜಾ ಅವರು ಸಮರ್ಥವಾಗಿ ಕಾರ್ಯನಿರ್ವಹಿಸಿದ್ದರು. ಆ ಸಮ್ಮೇಳನದ ಸ್ಮರಣಾರ್ಥ ಅವರ ಹೆಸರಿನಲ್ಲಿ ಸಾಹಿತ್ಯ ಪರಿಷತ್ತು ದತ್ತಿ ಸ್ಥಾಪಿಸಿದ್ದು, ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಹಾಗೂ ಚಿಂತನೆ ಬೆಳೆಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಪ್ರೊ. ತಿಪ್ಪೇಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ಬೆಳೆಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕಾಲೇಜಿನಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ. ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಅನಾವರಣಗೊಳಿಸಿ ಬೆಳೆಸಲು ಇಂತಹ ಕಾರ್ಯಕ್ರಮಗಳು ಜಿಲ್ಲೆಯ ಎಲ್ಲ ವಿದ್ಯಾಸಂಸ್ಥೆಗಳಲ್ಲಿ ನಡೆಯಬೇಕು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸುವ ಉದ್ದೇಶದಿಂದ ಸಾಹಿತ್ಯ ಪರಿಷತ್ತು ಹಲವು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. 2014ರಲ್ಲಿ ನಾ. ಡಿಸೋಜಾ ಅವರ ಸರ್ವಾಧ್ಯಕ್ಷತೆಯಲ್ಲಿ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇದೇ ಕಾಲೇಜಿನಲ್ಲಿ ನಡೆದಿತ್ತು. ಆ ಸಂದರ್ಭದಲ್ಲಿ ಲಕ್ಷಾಂತರ ಕನ್ನಡಾಭಿಮಾನಿಗಳು ಭಾಗವಹಿಸಿ ಕನ್ನಡದ ಹಿರಿಯ ಸಾಹಿತಿಗಳನ್ನು ಭೇಟಿಯಾಗಿದ್ದು ಸ್ಮರಣೀಯ ಕ್ಷಣವಾಗಿದೆ ಎಂದರು.
ಗಾಯನ ಮತ್ತು ನೃತ್ಯ ಸ್ಪರ್ಧೆ:
ದತ್ತಿಯ ಆಶಯದಂತೆ ವಿದ್ಯಾರ್ಥಿಗಳಿಗೆ ಗಾಯನ ಮತ್ತು ನೃತ್ಯ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಗಾಯನ ಸ್ಪರ್ಧೆಯಲ್ಲಿ ಕು. ಚೊಂದಮ್ಮ ಎಂ.ಯು. ಪ್ರಥಮ, ಕು. ಸಪ್ನಾ ಎಂ. ಶೇಟ್ ದ್ವಿತೀಯ ಹಾಗೂ ಕು. ಮಣಿಕಂಠ ತೃತೀಯ ಬಹುಮಾನ ಪಡೆದರು.
ನೃತ್ಯ ಸ್ಪರ್ಧೆಯಲ್ಲಿ ಕು. ಲಕ್ಷ್ಮಿ ಆರ್. ಮತ್ತು ಕು. ಹರ್ಷಿತಾ ಎಂ.ಸಿ. ಪ್ರಥಮ, ಕು. ತುಳಸಿ ಮತ್ತು ಕು. ಅರ್ಪಿತ ದ್ವಿತೀಯ ಹಾಗೂ ಕು. ಹರ್ಷಿತ ತೃತೀಯ ಬಹುಮಾನ ಗಳಿಸಿದರು. ಒಟ್ಟು 19 ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
ವೇದಿಕೆಯಲ್ಲಿ ಕೊಡಗು ಜಿಲ್ಲಾ ಬರಹಗಾರರ ಸಂಘದ ಅಧ್ಯಕ್ಷೆ ಪುದಿಯನೆರವನ ರೇವತಿ ರಮೇಶ್, ಗೌರವ ಕೋಶಾಧಿಕಾರಿ ಎಸ್.ಎಸ್. ಸಂಪತ್ ಕುಮಾರ್ ಹಾಗೂ ಕಾಲೇಜಿನ ವಿದ್ಯಾರ್ಥಿ ಸಂಘದ ಸಂಯೋಜಕರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಕು. ಅರ್ಪಿತಾ ನಿರೂಪಿಸಿದರು. ರೇವತಿ ರಮೇಶ್ ಸ್ವಾಗತಿಸಿದರು. ಕು. ಚೊಂದಮ್ಮ ನಾಡಗೀತೆ ಹಾಡಿದರು. ಉಪನ್ಯಾಸಕರ ಪರಿಚಯವನ್ನು ಕು. ಸಂಧ್ಯಾ ನೆರವೇರಿಸಿದರು. ಕಾರ್ಯಕ್ರಮದ ಸಂಯೋಜಕಿ ಹಾಗೂ ಪ್ರಾಧ್ಯಾಪಕಿ ಡಾ. ಎ.ಎನ್. ಗಾಯತ್ರಿ ವಂದಿಸಿದರು. ಕಾಲೇಜಿನ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

















