ಮಡಿಕೇರಿ, NEWS DESK ನ.3: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಜಿಲ್ಲೆಯ ವಕೀಲರಾದ ಪೇರಿಯಂಡ ಪಿ. ಪೆಮ್ಮಯ್ಯ ಮತ್ತು ಜಿ.ಕೆ. ದೇವಕಿ ಪೆಮ್ಮಯ್ಯ ದಂಪತಿ ಸ್ಥಾಪಿಸಿರುವ ಸಾಹಿತ್ಯ ಪ್ರಶಸ್ತಿಯ ಪ್ರಥಮ ವರ್ಷದ ಪ್ರಶಸ್ತಿಗೆ ಜಿಲ್ಲೆಯ ಹಿರಿಯ ಸಾಹಿತಿ, ಕವಯತ್ರಿ ಹಾಗೂ ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೋರನ ಸರಸ್ವತಿ ಅವರು ಆಯ್ಕೆಯಾಗಿದ್ದಾರೆ.
ಡಾ. ಕೋರನ ಸರಸ್ವತಿ ಅವರು ಕನ್ನಡ ಮತ್ತು ಅರೆಭಾಷೆಯಲ್ಲಿ ಏಳು ಕೃತಿಗಳನ್ನು ಪ್ರಕಟಿಸಿದ್ದು, ನೂರಾರು ಲೇಖನಗಳನ್ನು ರಚಿಸಿದ್ದಾರೆ. ಹಲವಾರು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡನೆ, ಕಾರ್ಯಕ್ರಮಗಳ ಅಧ್ಯಕ್ಷತೆ, ಕವಿಗೋಷ್ಠಿಗಳ ಅಧ್ಯಕ್ಷತೆ ವಹಿಸುವುದರೊಂದಿಗೆ ಆಕಾಶವಾಣಿಯಲ್ಲಿ 58 ಚಿಂತನ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.
ಇದಲ್ಲದೆ, ಹಲವಾರು ಸಾಹಿತ್ಯ ಕಾರ್ಯಕ್ರಮಗಳು, ದೂರದರ್ಶನದ ವಿಶೇಷ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ವಿವಿಧ ಸ್ಪರ್ಧೆಗಳಿಗೆ ತೀರ್ಪುಗಾರರಾಗಿ, ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಸಮಿತಿಗಳ ಸದಸ್ಯರಾಗಿ ಹಾಗೂ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ್ದಾರೆ. ವಿವಿಧ ಅಧ್ಯಯನ ಮಂಡಳಿಗಳಲ್ಲಿ ಕನ್ನಡ ಪಠ್ಯಪುಸ್ತಕ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಇವರ ಸಾಹಿತ್ಯ ಹಾಗೂ ಶೈಕ್ಷಣಿಕ ಸೇವೆಯನ್ನು ಗುರುತಿಸಿ ಕೊಡಗಿನ ಪ್ರತಿಷ್ಠಿತ ಗೌರಮ್ಮ ದತ್ತಿ ಪ್ರಶಸ್ತಿ, ಕೊಡಗು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕೊಡಗು ಜಿಲ್ಲಾ ರಾಜ್ಯೋತ್ಸವ ಶಿಕ್ಷಕ ಪುರಸ್ಕಾರ ಹಾಗೂ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಲಭಿಸಿವೆ.
ಪೇರಿಯಂಡ ಪಿ. ಪೆಮ್ಮಯ್ಯ ಮತ್ತು ಜಿ.ಕೆ. ದೇವಕಿ ಪೆಮ್ಮಯ್ಯ ದಂಪತಿ ಸ್ಥಾಪಿಸಿರುವ ಸಾಹಿತ್ಯ ಪ್ರಶಸ್ತಿಯ ಪ್ರಥಮ ವರ್ಷದ ಪುರಸ್ಕಾರಕ್ಕೆ ಭಾಜನರಾಗಿರುವ ಡಾ. ಕೋರನ ಸರಸ್ವತಿ ಅವರನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಭಿನಂದಿಸಿದೆ ಎಂದು ಪರಿಷತ್ತಿನ ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

















