ಕುಶಾಲನಗರ, NEWS DESK ನ. 3: ಮಕ್ಕಳಲ್ಲಿ ಬಾಲ್ಯದಿಂದಲೇ ಸ್ವಚ್ಛತೆಯ ಹವ್ಯಾಸವನ್ನು ಬೆಳೆಸುವುದು ಇಂದಿನ ಅಗತ್ಯವಾಗಿದೆ. ಶಾಲಾ ಆವರಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಮರ್ಪಕವಾಗಿ ಸಂಗ್ರಹಿಸಿ ನಿರ್ವಹಿಸಲು ಬಾಟಲ್ ಆಕಾರದ ಕಸದ ಬುಟ್ಟಿ ಸಹಕಾರಿಯಾಗಲಿದೆ ಎಂದು ಕುಶಾಲನಗರ ಇನ್ನರ್ ವೀಲ್ ಸಂಸ್ಥೆಯ ಅಧ್ಯಕ್ಷೆ ಸೀತಾಲಕ್ಷ್ಮಿ ಹೇಳಿದರು.
ಕುಶಾಲನಗರ ಸರ್ಕಾರಿ ಬಾಲಕಿಯರ ಪ್ರೌಢಶಾಲೆಗೆ ಇನ್ನರ್ ವೀಲ್ ಸಂಸ್ಥೆಯ ವತಿಯಿಂದ ಬಾಟಲ್ ಆಕಾರದ ಕಸದ ಬುಟ್ಟಿಯನ್ನು ಕೊಡುಗೆಯಾಗಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಶಾಲಾ ಆವರಣ ಸೇರಿದಂತೆ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಉತ್ತಮ ಆರೋಗ್ಯ ಹಾಗೂ ಹಸಿರು ಪರಿಸರವನ್ನು ಕಾಪಾಡಿಕೊಳ್ಳಬಹುದು ಎಂದು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.
ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತು ವಿವರಿಸಿದ ಅವರು, ಕಸವನ್ನು ಎಲ್ಲೆಂದರಲ್ಲಿ ಎಸೆಯದೆ ಸೂಕ್ತ ಸ್ಥಳದಲ್ಲಿ ವಿಲೇವಾರಿ ಮಾಡುವ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

















