ವಿರಾಜಪೇಟೆ, NEWS DESK ನ. 4: ಕನ್ನಡ ರಾಜ್ಯೋತ್ಸವದ ಅಂಗವಾಗಿ ಕರ್ನಾಟಕ ಸಂಘದ ವತಿಯಿಂದ ವಿರಾಜಪೇಟೆ ಮಹಿಳಾ ಸಮಾಜದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗಾಗಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಸ್ಪರ್ಧಾ ಕಾರ್ಯಕ್ರಮ ಮತ್ತು ಸಾಧಕರ ಸನ್ಮಾನ ಸಮಾರಂಭವು ಸಂಭ್ರಮದಿಂದ ನಡೆಯಿತು.
ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅರಮೇರಿ ಕಳಂಚೇರಿ ಮಠದ ಮಠಾಧೀಶರಾದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿಯವರು ಕನ್ನಡ ಭಾಷೆಯ ಶ್ರೀಮಂತಿಕೆ, ಹಿರಿಮೆ ಮತ್ತು ಪ್ರಾಚೀನತೆಯನ್ನು ವಿವರಿಸಿದರು.
ಕೊಡಗು ಜಿಲ್ಲೆಯಲ್ಲಿ ದಾನಿಗಳು ಸ್ವಯಂಪ್ರೇರಿತರಾಗಿ ಜಮೀನು ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಸರ್ಕಾರಿ ಶಾಲೆಗಳ ಸ್ಥಾಪನೆಗೆ ಅಡಿಪಾಯ ಹಾಕಿದ್ದಾರೆ. ಅಂದಿನಿಂದಲೂ ಕೊಡಗಿನ ಜನತೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದ್ದಾರೆ. ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ವಿಶ್ವವಿದ್ಯಾಲಯಗಳು ಅಥವಾ ಸಾಂಸ್ಥಿಕ ಕಾಯ್ದೆಗಳಿಂದ ಮಾತ್ರ ಭಾಷೆಯನ್ನು ಬೆಳೆಸಲು ಸಾಧ್ಯವಿಲ್ಲ. ನಮ್ಮ ದೈನಂದಿನ ಜೀವನದಲ್ಲಿ ಕನ್ನಡವನ್ನು ನಿರಂತರವಾಗಿ ಬಳಸುವ ಮೂಲಕ ಮಾತ್ರ ಭಾಷೆಯನ್ನು ಜೀವಂತವಾಗಿರಿಸಲು ಸಾಧ್ಯ. ಕನ್ನಡದ ಲಾಲಿತ್ಯ, ಮಾಧುರ್ಯ, ನಾದಮಧುರ ಪದಪುಂಜಗಳು ಹಾಗೂ ಭಾವೈಕ್ಯತೆಯ ಸೊಬಗು ಅನನ್ಯವಾಗಿದೆ ಎಂದು ಹೇಳಿದರು.
ವಿರಾಜಪೇಟೆ ಪುರಸಭೆಯ ಮುಖ್ಯಾಧಿಕಾರಿ ಪಟ್ಟಚೆರವಂಡ ನಾಚಪ್ಪ ಮಾತನಾಡಿ, ಆಧುನಿಕ ಯುಗದಲ್ಲಿ ಕನ್ನಡ ಭಾಷೆಯ ಸ್ಥಾನಮಾನ ಮತ್ತು ಎದುರಿಸುತ್ತಿರುವ ಸವಾಲುಗಳ ಕುರಿತು ಅನಿಸಿಕೆ ಹಂಚಿಕೊಂಡರು. ಸಾರ್ವಜನಿಕ ಸೇವೆ ಹಾಗೂ ವೃತ್ತಿ ಜೀವನದಲ್ಲಿ ಮಾತೃಭಾಷೆಯ ಬಳಕೆಯ ಮಹತ್ವವನ್ನು ವಿವರಿಸಿದರು.
ಕರ್ನಾಟಕ ಸಂಘದ ಅಧ್ಯಕ್ಷ ಮಾಳೇಟಿರ ಬೆಲ್ಲು ಬೋಪಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೊಡಗಿನಲ್ಲಿ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಪ್ರಸಾರಕ್ಕಾಗಿ ಸಂಘವು ಹಿಂದಿನಿಂದಲೂ ನಡೆಸಿಕೊಂಡು ಬಂದಿರುವ ವಿವಿಧ ಜನಪರ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಸ್ಮರಿಸಿದರು. ಕನ್ನಡದ ಅಸ್ಮಿತೆಯನ್ನು ಉಳಿಸಿ ಬೆಳೆಸುವಲ್ಲಿ ಸ್ಥಳೀಯ ಸಂಘ-ಸಂಸ್ಥೆಗಳ ಜವಾಬ್ದಾರಿ ಮತ್ತು ಯುವಜನರಲ್ಲಿ ಮಾತೃಭಾಷೆಯ ಅಭಿಮಾನ ಬೆಳೆಸುವ ಅಗತ್ಯವನ್ನು ತಿಳಿಸಿದರು.
ಸಾಧಕರಿಗೆ ಸನ್ಮಾನ
ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗೈದ ಕೂತಂಡ ಪೂಣಚ್ಚ (ಕ್ರೀಡಾ ಕ್ಷೇತ್ರ), ಕ್ಯಾಪ್ಟನ್ ಬಾಚುರ ಎಸ್. ಪೂಣಚ್ಚ (ಸೇನಾ ಕ್ಷೇತ್ರ), ಕವಿತಾ ಕೆ.ಡಿ. (ಶಿಕ್ಷಣ ಕ್ಷೇತ್ರ) ಹಾಗೂ ಬಾದುವಮಂಡ ಬೀನಾ ಕಾಳಯ್ಯ (ಸಾಹಿತ್ಯ ಕ್ಷೇತ್ರ) ಅವರನ್ನು ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಸಭಾ ಕಾರ್ಯಕ್ರಮದ ಬಳಿಕ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗಾಗಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ನಡೆದವು. ಪ್ರಾಥಮಿಕ, ಪ್ರೌಢಶಾಲೆ ಮತ್ತು ಕಾಲೇಜು ವಿಭಾಗದ ವಿದ್ಯಾರ್ಥಿಗಳಿಂದ ಕನ್ನಡ ನಾಡಗೀತೆಗೆ ಸಾಮೂಹಿಕ ನೃತ್ಯ ಹಾಗೂ ಸಾರ್ವಜನಿಕರಿಂದ ಕೊಡವ ಮತ್ತು ಕನ್ನಡ ಹಾಡುಗಳ ಸ್ಪರ್ಧೆ ಆಯೋಜಿಸಲಾಗಿತ್ತು. ಮಲ್ಲಮಾಡ ಶ್ಯಾಮಲಾ ಮತ್ತು ಪ್ರೇಮಾಂಜಲಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.
ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಹಾಗೂ ಭಾಗವಹಿಸಿದ ಸ್ಪರ್ಧಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಚೇನಂಡ ಸುರೇಶ್ ನಾಣಯ್ಯ, ಬಾಚಿರ ಗಣೇಶ್ ಬಿದ್ದಪ್ಪ, ಚಾರಿಮಂಡ ಶರಣು ನಂಜಪ್ಪ, ಪುಗ್ಗೆರ ನಂದ, ಕೋಟೆರ ಯು. ಗಣೇಶ್, ಕಾರ್ಯದರ್ಶಿ ಮುಂಡ್ಯೋಳಂಡ ಕುಸುಮ, ಕಂಜಿತಂಡ ಗಿಣಿ ಮೊಣ್ಣಪ್ಪ, ಮಾಜಿ ಅಧ್ಯಕ್ಷರು ಹಾಗೂ ಹಾಲಿ ನಿರ್ದೇಶಕರಾದ ಚಿಲ್ಲವಂಡ ಕಾವೇರಪ್ಪ, ಮಾಜಿ ಉಪಾಧ್ಯಕ್ಷ ಗಿರೀಶ್ ಪೂಣಚ್ಚ, ಬಲ್ಲಡಿಚಂಡ ವಿಜು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಕಲಾವಿದೆ ಪ್ರಭಾ ನಾಣಯ್ಯ ಮತ್ತು ಕರ್ನಾಟಕ ಸಂಘದ ಕಚೇರಿ ನಿರ್ವಾಹಕಿ ಪವಿತ್ರ ಕಾರ್ಯಕ್ರಮ ನಿರ್ವಹಿಸಿದರು.

















