ಮಡಿಕೇರಿ, NEWS DESK ನ. 4: ನಗರದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಆವರಣದಲ್ಲಿ ಸೋಮವಾರ ವಾಯು ಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆಯ ಉದ್ಘಾಟನಾ ಸಮಾರಂಭ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ ಅವರು, ವಾಹನಗಳ ಪೂಲಿಂಗ್ ವ್ಯವಸ್ಥೆ ಬಳಕೆ, ಕಸ ವಿಲೇವಾರಿ ಸಂದರ್ಭದಲ್ಲಿ ಹಸಿ ಮತ್ತು ಒಣ ತ್ಯಾಜ್ಯಗಳ ವಿಂಗಡಣೆ, ಸೈಕಲ್ ಬಳಕೆ ಹಾಗೂ ವಾಹನಗಳ ಸ್ವಚ್ಛತೆ ಸೇರಿದಂತೆ ವಾಯು ಮಾಲಿನ್ಯ ನಿಯಂತ್ರಣಕ್ಕೆ ಪೂರಕವಾದ ಹಲವು ಕ್ರಮಗಳ ಕುರಿತು ಮಾಹಿತಿ ನೀಡಿದರು.
ಅಲ್ಲದೆ, ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ 1991ರಿಂದ 2025ರವರೆಗಿನ ಸಾರಿಗೆ ಇಲಾಖೆಯ ಪ್ರಕರಣಗಳಿಗೆ ಶೇ.50ರಷ್ಟು ರಿಯಾಯಿತಿಯಲ್ಲಿ ದಂಡ ಪಾವತಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಸತೀಶ್ ಮಾತನಾಡಿ, ಕಾರ್ಯಕ್ರಮದ ಯಶಸ್ಸಿಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ವಾಹನಗಳ ಸಮರ್ಪಕ ನಿರ್ವಹಣೆ, ಗಿಡ ನೆಡುವುದು, ಶಾಲಾ ಮಕ್ಕಳಲ್ಲಿ ವಾಯು ಮಾಲಿನ್ಯದ ಕುರಿತು ಜಾಗೃತಿ ಮೂಡಿಸಲು ವಿವಿಧ ಸ್ಪರ್ಧೆಗಳನ್ನು ಆಯೋಜಿಸುವುದು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಕೆಎಸ್ಆರ್ಟಿಸಿ ಮಡಿಕೇರಿ ಘಟಕದ ವ್ಯವಸ್ಥಾಪಕ ದರ್ಶನ್, ಕಚೇರಿಯ ಅಧೀಕ್ಷಕರಾದ ಸಲೀಮಾ, ಮೋಹನ್ ಕುಮಾರ್, ಮೋಟಾರು ವಾಹನ ನಿರೀಕ್ಷಕರಾದ ಮೋಹನ್ ಕುಮಾರ್, ಪ್ರದೀಪ್, ಶಶಿಕುಮಾರ್, ರೀಟಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

















