ಸೋಮವಾರಪೇಟೆ, NEWS DESK ನ. 4: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸೋಮವಾರಪೇಟೆಯ ಸಾಂದೀಪನಿ ಆಂಗ್ಲ ಮಾಧ್ಯಮ ಶಾಲೆಯ ಸಂಯುಕ್ತ ಆಶ್ರಯದಲ್ಲಿ ದಿವಂಗತ ಶಾಂತ ಮಲ್ಲ ಸ್ವಾಮಿಗಳ ಜ್ಞಾಪಕಾರ್ಥ ದತ್ತಿನಿಧಿ, ದಿವಂಗತ ಎಸ್.ಎಸ್. ರಾಮಮೂರ್ತಿಯವರ ಜ್ಞಾಪಕಾರ್ಥ ದತ್ತಿನಿಧಿ ಹಾಗೂ ಕಟ್ಟೆಮನೆ ದಿವಂಗತ ಎಸ್. ಪುಟ್ಟಸ್ವಾಮಿಯವರ ಜ್ಞಾಪಕಾರ್ಥ ದತ್ತಿನಿಧಿ ಕಾರ್ಯಕ್ರಮವು ಸಾಂದೀಪನಿ ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಉದ್ಘಾಟಿಸಿ, ಕೊಡಗಿನ ವೀರಶೈವ ಅರಸರ ಕುರಿತು ಉಪನ್ಯಾಸ ನೀಡಿದರು.
ಕೊಡಗಿನ ಅರಸರು ವೀರಶೈವ ಲಿಂಗಾಯತ ಧರ್ಮಕ್ಕೆ ಸೇರಿದವರಾಗಿದ್ದರೂ, ಕೊಡಗಿನ ಮೂಲ ನಿವಾಸಿಗಳಾದ ಕೊಡವರ ಆಚಾರ-ವಿಚಾರಗಳನ್ನು ಗೌರವಿಸುತ್ತಿದ್ದರು. ಕೊಡಗಿನ ಪ್ರಕೃತಿ ಆರಾಧನೆ ಹಾಗೂ ಭಗವತಿ ದೇವಿಯ ಆರಾಧನೆಗೆ ಪ್ರೋತ್ಸಾಹ ನೀಡುವ ಮೂಲಕ ಜನರೊಂದಿಗೆ ಒಂದಾಗಿ ಬಾಳಿದರು. ವಂಶದ ಕೊನೆಯ ಅರಸರಾದ ಚಿಕ್ಕವೀರರಾಜೇಂದ್ರ ಅವರ ಕಾಲದವರೆಗೂ ಕಲೆ ಮತ್ತು ಸಾಹಿತ್ಯಕ್ಕೆ ಉತ್ತಮ ಪ್ರೋತ್ಸಾಹ ದೊರೆಯುತ್ತಿತ್ತು. ಇತಿಹಾಸ ಪ್ರಸಿದ್ಧ ‘ರಾಜೇಂದ್ರನಾಮೆ’ ಗ್ರಂಥವು ಕೊಡಗಿನ ಇತಿಹಾಸಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ತಿಳಿಸಿದರು.
ಕಾಜೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಸಿ.ಇ. ಅನೂಸೂಯ ಅವರು ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಕನ್ನಡ ಕವಿಗಳು, ಸಾಹಿತಿಗಳು ಹಾಗೂ ಕಲಾವಿದರ ಕೊಡುಗೆ ಕುರಿತು ಉಪನ್ಯಾಸ ನೀಡಿದರು.
ನಂತರ ಕಟ್ಟೆಮನೆ ದಿವಂಗತ ಎಸ್. ಪುಟ್ಟಸ್ವಾಮಿ ದತ್ತಿನಿಧಿ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ದೇಶಭಕ್ತಿ ಗೀತೆಗಳ ಸ್ಪರ್ಧೆ ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಸಾಂದೀಪನಿ ಶಾಲೆಯ ಮುಖ್ಯೋಪಾಧ್ಯಾಯಿನಿ ಎನ್.ಎ. ರೇವತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ವಾಸಂತಿ ರವೀಂದ್ರ ಭಾಗವಹಿಸಿದ್ದರು.
ವೇದಿಕೆಯಲ್ಲಿ ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ಡಿ. ವಿಜೇತ್, ಕಾರ್ಯದರ್ಶಿಗಳಾದ ಎ.ಪಿ. ವೀರರಾಜ್, ಜ್ಯೋತಿ ಅರುಣ್, ಸಾಹಿತಿಗಳಾದ ಜಲ ಕಾಳಪ್ಪ, ಲಾವಣ್ಯ ಮೋಹನ್, ಶಾಫಿ ಸಾದಿ, ಶ್ರೀಧರ್ ಹೂವಲ್ಲಿ, ಜಮೀರ್, ಗಿರೀಶ್ ಕಾರ್ಟ್ನಮನೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

















