ಮಡಿಕೇರಿ, NEWS DESK ನ.4: ಕೊಡಗು ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಹುಲಿ ದಾಳಿ ನಿರಂತರವಾಗಿ ಮುಂದುವರಿದಿದ್ದು, ಕಳೆದ ಒಂದು ತಿಂಗಳ ಅವಧಿಯಲ್ಲಿ 50ಕ್ಕೂ ಹೆಚ್ಚು ಜಾನುವಾರುಗಳು ಹುಲಿಗೆ ಬಲಿಯಾಗಿವೆ. ಇದರಿಂದ ಗ್ರಾಮಸ್ಥರು ತೀವ್ರ ಆತಂಕಕ್ಕೊಳಗಾಗಿದ್ದು, ಹುಲಿ ಹಾವಳಿ ನಿಯಂತ್ರಿಸುವಲ್ಲಿ ವಿಫಲವಾಗಿರುವ ಅರಣ್ಯ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಕೊಡಗಿನ ವಿರಾಜಪೇಟೆ ತಾಲೂಕಿನ ಹುದಿಕೇರಿ ಸಮೀಪದ ಬೆಳ್ಳೂರು ಗ್ರಾಮದಲ್ಲಿ ಹುಲಿ ಉಪಟಳ ಮಿತಿ ಮೀರಿದ್ದು, ಸುಮಾರು 54 ಹಸುಗಳು ಹುಲಿ ದಾಳಿಗೆ ಬಲಿಯಾಗಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಸೋಮವಾರ ಬೆಳ್ಳೂರು ಗ್ರಾಮದ ಬಾಚೀರ ವಾಸು ದೇವಯ್ಯ ಅವರಿಗೆ ಸೇರಿದ ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕಿದೆ. ಘಟನೆಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ರೈತರ ಜೀವನಾಧಾರವಾಗಿರುವ ಜಾನುವಾರುಗಳ ರಕ್ಷಣೆಗೆ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ಹುಲಿ ಹಾವಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದರೊಂದಿಗೆ ನಷ್ಟ ಅನುಭವಿಸಿದ ರೈತರಿಗೆ ಸಮರ್ಪಕ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು ಹಾಗೂ ಬಿಜೆಪಿ ಪ್ರಮುಖರು, ತಕ್ಷಣ ಕೂಂಬಿಂಗ್ ಕಾರ್ಯಾಚರಣೆ ನಡೆಸಿ ಹುಲಿಯನ್ನು ಸೆರೆಹಿಡಿಯುವಂತೆ ಆಗ್ರಹಿಸಿದರು.
ಮರಗೋಡು ಗ್ರಾಮದಲ್ಲೂ ಹುಲಿ ದಾಳಿ
ಮಡಿಕೇರಿ ತಾಲೂಕಿನ ಮರಗೋಡು ಗ್ರಾಮದಲ್ಲಿ ಮಂಗಳವಾರ ರಾತ್ರಿ ಎರಡು ಕರುಗಳ ಮೇಲೆ ಹುಲಿ ದಾಳಿ ನಡೆಸಿದೆ. ಪರಿಚನ ಮನೋಜ್ ಅವರಿಗೆ ಸೇರಿದ ಒಂದು ಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಂದು ಕರುವನ್ನು ಹುಲಿ ಎಳೆದೊಯ್ದಿರುವುದಾಗಿ ತಿಳಿದುಬಂದಿದೆ.
ಮರಗೋಡು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಲಿ ಸಂಚಾರವಿರುವ ಮಾಹಿತಿ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. ಜಾನುವಾರುಗಳನ್ನು ಮೇಯಿಸಲು ತೆರಳುವವರು ಹಾಗೂ ತೋಟದ ಕೆಲಸಗಳಿಗೆ ಹೋಗುವವರು ಭಯದಿಂದ ದಿನ ಕಳೆಯುವಂತಾಗಿದೆ.
ಅರಣ್ಯ ಇಲಾಖೆ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಹುಲಿಯ ಚಲನವಲನ ಪತ್ತೆಹಚ್ಚಬೇಕು. ಹುಲಿಯನ್ನು ಸೆರೆಹಿಡಿಯಲು ಅಥವಾ ಅದರ ಸಂಚಾರ ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಂಡು ಗ್ರಾಮಸ್ಥರು ಹಾಗೂ ಜಾನುವಾರುಗಳ ಸುರಕ್ಷತೆಗೆ ಆದ್ಯತೆ ನೀಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಶಾಸಕ ಎ.ಎಸ್. ಪೊನ್ನಣ್ಣ ಭೇಟಿ
ಹುದಿಕೇರಿ ಸಮೀಪದ ಬೆಳ್ಳೂರು ಗ್ರಾಮದಲ್ಲಿ ನಿರಂತರ ಹುಲಿ ದಾಳಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಗ್ರಾಮಕ್ಕೆ ಭೇಟಿ ನೀಡಿ, ವನ್ಯಜೀವಿಗಳಿಂದ ಎದುರಾಗುತ್ತಿರುವ ಸಮಸ್ಯೆಗಳು ಹಾಗೂ ಗ್ರಾಮಸ್ಥರ ಆತಂಕವನ್ನು ಆಲಿಸಿದರು.
ಹಸುಗಳ ಮಾಲೀಕರು ಮತ್ತು ಗ್ರಾಮಸ್ಥರಿಗೆ ಧೈರ್ಯ ತುಂಬಿದ ಶಾಸಕರು, ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಗ್ರಾಮಸ್ಥರ ಆತಂಕ ದೂರಮಾಡಲು ಆದಷ್ಟು ಶೀಘ್ರ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಕ್ಯಾಮೆರಾಗಳು ಹಾಗೂ ಸುಧಾರಿತ ತಂತ್ರಜ್ಞಾನ ಬಳಸಿ ಹುಲಿಯ ಚಲನವಲನ ಪತ್ತೆಹಚ್ಚಬೇಕು. ಆದಷ್ಟು ಬೇಗ ಹುಲಿಯನ್ನು ಸೆರೆಹಿಡಿದು ಗ್ರಾಮಸ್ಥರಲ್ಲಿ ನೆಮ್ಮದಿ ಮತ್ತು ಸುರಕ್ಷತೆಯ ಭಾವನೆ ಮೂಡಿಸಬೇಕೆಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಡಿಎಫ್ಒ ವಿನಿತಾ ಚೌಹಾಣ್, ವನ್ಯಜೀವಿ ವಿಭಾಗದ ಡಿಎಫ್ಒ ತಾಸಿಂ ಬಾನು, ಎಸಿಎಫ್ಗಳಾದ ಗೋಪಾಲ್, ಮಂಜುನಾಥ್, ಆರ್ಎಫ್ಒಗಳಾದ ರಾಕೇಶ್, ಶಿವರಾಮ್, ಗಂಗಾಧರ್, ವಿವೇಕ್ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿಯಿಂದ ಶಾಸಕರು ಮಾಹಿತಿ ಪಡೆದರು.
ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ತಿತೀರ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಕಾಳಿಮಾಡ ಪ್ರಶಾಂತ್, ತಾಲೂಕು ಬಗರ್ ಹುಕುಂ ಅಧ್ಯಕ್ಷ ಅಣ್ಣಳ್ಳಮಾಡ ಲಾಲಾ ಅಪ್ಪಣ್ಣ, ಟಿ. ಶೆಟ್ಟಿಗೇರಿ ವಲಯ ಅಧ್ಯಕ್ಷ ತಿತೀರ ಪ್ರಭು ಸುಬ್ಬಯ್ಯ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಬಾಲಕೃಷ್ಣ, ಡಿಸಿಸಿ ಸದಸ್ಯ ಮುಕ್ಕಟಿರ ಸಂದೀಪ್, ಉದಯ, ಕುಂಡಚ್ಚಿರ ಮಂಜು ದೇವಯ್ಯ ಹಾಗೂ ಫರ್ದಿನ್ ಉಪಸ್ಥಿತರಿದ್ದರು.

















