ಸುಂಟಿಕೊಪ್ಪ, NEWS DESK ನ.4: ಕನ್ನಡ ಸಾಹಿತ್ಯ ಇತಿಹಾಸದಲ್ಲಿ ಸುಂಟಿಕೊಪ್ಪಕ್ಕೆ ವಿಶೇಷ ಸ್ಥಾನಮಾನವಿದೆ ಎಂದು ಸುಂಟಿಕೊಪ್ಪ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪಿ.ಎಫ್. ಸೆಬಾಸ್ಟಿನ್ ಹೇಳಿದರು.
ಬುಧವಾರ ಸುಂಟಿಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕುವೆಂಪು, ಡಾ. ಶಿವರಾಮ ಕಾರಂತ, ದ.ರಾ. ಬೇಂದ್ರೆ ಹಾಗೂ ಮಾಸ್ತಿ ಸೇರಿದಂತೆ ಹಲವು ಹಿರಿಯ ಸಾಹಿತಿಗಳು ಸುಂಟಿಕೊಪ್ಪದಲ್ಲಿ ಸಂಚರಿಸಿದ್ದು, ಹರದೂರು ಗ್ರಾಮದ ಗುಂಡುಗುಟ್ಟಿ ಮಂಜನಾಥಯ್ಯ ಅವರ ಬಂಗಲೆಯಲ್ಲಿ ವಾಸ್ತವ್ಯ ಹೂಡಿ ಸಾಹಿತ್ಯ ರಚನೆ ಮಾಡುತ್ತಿದ್ದರು ಎಂದು ಸ್ಮರಿಸಿದರು.
ಇಂದಿನ ಕಾಲಘಟ್ಟದಲ್ಲಿಯೂ ಸುಂಟಿಕೊಪ್ಪದ ಹಿರಿಯ ಸಾಹಿತಿ ಅಬ್ದುಲ್ ರಶೀದ್ ಹಾಗೂ ಪ್ರಸ್ತುತ ಶಾಲೆಯಲ್ಲಿ ಶಿಕ್ಷಕರಾಗಿರುವ ಸತೀಶ್ ಕಾಜೂರು ಅವರ ಕವಿತೆಗಳು ವಿಶ್ವವಿದ್ಯಾಲಯ ಮಟ್ಟದ ಕನ್ನಡ ಪಠ್ಯಗಳಲ್ಲಿ ಸೇರ್ಪಡೆಯಾಗಿರುವುದು ಹೆಮ್ಮೆಯ ಸಂಗತಿ ಎಂದರು.
ಕನ್ನಡ ಮಾಧ್ಯಮ ಶಾಲೆಗಳಲ್ಲಿ ಸ್ಪಷ್ಟ ಪದಬಳಕೆಗೆ ಆದ್ಯತೆ ನೀಡುವುದು ಕನ್ನಡ ಭಾಷೆಯ ಉಳಿವಿಗೆ ಸಹಕಾರಿಯಾಗಿದೆ. ಇಂಗ್ಲಿಷ್ ಮಾಧ್ಯಮವನ್ನು ಜೀವನ ರೂಪಿಸಿಕೊಳ್ಳಲು ಸಹಾಯಕ ಭಾಷೆಯಾಗಿ ಬಳಸಿಕೊಳ್ಳಬೇಕೇ ಹೊರತು ಕನ್ನಡವನ್ನು ನಿರ್ಲಕ್ಷಿಸಬಾರದು ಎಂದು ಕಿವಿಮಾತು ಹೇಳಿದರು.
ಶಾಲೆಯ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಸಹ ಶಿಕ್ಷಕ ಹಾಗೂ ಸಾಹಿತಿ ಸತೀಶ್ ಕಾಜೂರು ಅವರು ಕನ್ನಡ ರಾಜ್ಯೋತ್ಸವದ ಹುಟ್ಟು ಮತ್ತು ಬೆಳವಣಿಗೆಯ ಕುರಿತು ಮಾಹಿತಿ ನೀಡಿದರು.
ಬ್ರಿಟಿಷರ ಒಡೆದು ಆಳುವ ನೀತಿಯಿಂದಾಗಿ ವಿವಿಧ ಭಾಷೆಗಳನ್ನು ಮಾತನಾಡುವ ಜನರು ಪ್ರತ್ಯೇಕವಾಗಿದ್ದರು. ಈ ನೀತಿಯ ವಿರುದ್ಧ ನಡೆದ ಹೋರಾಟಗಳ ಪರಿಣಾಮವಾಗಿ ಮೊದಲು ತೆಲುಗು ಭಾಷಿಕರು ಒಂದಾಗಿ ಆಂಧ್ರಪ್ರದೇಶವನ್ನು ರಚಿಸಿಕೊಂಡರು. ಇದರಿಂದ ಪ್ರೇರಣೆ ಪಡೆದ ಕನ್ನಡಿಗರು ಒಗ್ಗೂಡಿ ಮೈಸೂರು ರಾಜ್ಯವನ್ನು ರಚಿಸಿಕೊಂಡರು. ಮುಂದೆ ಮೈಸೂರು ರಾಜ್ಯ ಕರ್ನಾಟಕವಾಗಿ ಮರುನಾಮಕರಣಗೊಂಡಿತು ಎಂದು ವಿವರಿಸಿದರು.
ಕರ್ನಾಟಕ ಎಂದರೆ ಕಪ್ಪು ಮಣ್ಣಿನ ಪ್ರದೇಶವಾಗಿದ್ದು, ನೈಸರ್ಗಿಕ ಸಂಪತ್ತು ಹಾಗೂ ಸೌಂದರ್ಯದಿಂದ ಕೂಡಿದ ನಾಡಾಗಿದೆ. ಕನ್ನಡದಲ್ಲಿ ಮಾತನಾಡುವ, ಓದುವ ಮತ್ತು ಬರೆಯುವ ಮೂಲಕ ಕನ್ನಡ ಭಾಷೆ ಹಾಗೂ ಕರ್ನಾಟಕಕ್ಕೆ ಗೌರವ ಸಲ್ಲಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಕುಮಾರ್, ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಪ್ರಭಾರ ಉಪಪ್ರಾಂಶುಪಾಲೆ ಶಾಂತ ಹೆಗ್ಡೆ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಪಿ.ಇ. ನಂದ ಮಾತನಾಡಿದರು.
ಸುಂಟಿಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಉಪಾಧ್ಯಕ್ಷ ಎಚ್.ಎಸ್. ರವಿ, ಗೌರವಾಧ್ಯಕ್ಷ ಎಚ್.ಯು. ರಫೀಕ್ ಖಾನ್, ಸುಂಟಿಕೊಪ್ಪ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಉಪಾಧ್ಯಕ್ಷೆ ಲೀಲಾವತಿ ಹಾಗೂ ಶಾಲಾಭಿವೃದ್ಧಿ ಸಮಿತಿ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲಾ ಮಕ್ಕಳು ಕನ್ನಡ ನಾಡು, ನುಡಿ, ನೆಲ ಮತ್ತು ಜಲದ ಮಹತ್ವ ಸಾರುವ ಗೀತೆಗಳನ್ನು ಹಾಡಿದರು. ಕರ್ನಾಟಕದ ಕವಿಗಳು ಹಾಗೂ ಕನ್ನಡ ಭಾಷೆಯ ಬೆಳವಣಿಗೆಗೆ ಕೊಡುಗೆ ನೀಡಿದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಪರಿಚಯವನ್ನು ಮಾಡಿಕೊಟ್ಟರು.

















