ಮಡಿಕೇರಿ ಫೆ.3 : ದಕ್ಷಿಣ ಕೊಡಗಿನಲ್ಲಿ ಹುಲಿ ಆತಂಕ ಮುಂದುವರೆದಿದ್ದು, ಸಾಲು ಸಾಲು ಜಾನುವಾರುಗಳು ಬಲಿಯಾಗುತ್ತಿವೆ. ತೂಚಮಕೇರಿ ಗ್ರಾಮದ ಪುಟ್ಟಂಗಡ ಚೇತನ್ ಎಂಬುವವರಿಗೆ ಸೇರಿದ ಹಸುವನ್ನು ಹುಲಿ ಕೊಂದು ಹಾಕಿದೆ. 15 ದಿನಗಳ ಹಿಂದೆಯಷ್ಟೆ ಬಲ್ಯಮಂಡೂರು ಗ್ರಾಮದ ಚೇಂದಿರ ಸುರೇಶ್ ಅವರ ಎಮ್ಮೆಯನ್ನು ಹುಲಿ ಬಲಿ ಪಡೆದಿತ್ತು. ಕಳೆದ ವರ್ಷ ಕೂಡ ಚೇತನ್ ಅವರಿಗೆ ಸೇರಿದ ಹಸುವೊಂದನ್ನು ಹುಲಿ ಕೊಂದು ಹಾಕಿತ್ತು. ಈ ಭಾಗದಲ್ಲಿ ಹುಲಿ ಉಪಟಳ ನಿರಂತರವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿದೆ. ಸ್ಥಳಕ್ಕೆ ಭೇಟಿ ನೀಡಿದ್ದ ಅರಣ್ಯ ಅಧಿಕಾರಿಗಳು ಹುಲಿ ಸೆರೆಗೆ ಬೋನ್ ಅಳವಡಿಸಲು ಕ್ರಮ ಕೈಗೊಂಡಿದ್ದಾರೆ. ಹಸುಗಳ ಮಾಲೀಕರಿಗೆ ತಕ್ಷಣ ಪರಿಹಾರ ನೀಡಬೇಕೆಂದು ಸ್ಥಳೀಯ ಜನಪ್ರತಿನಿಧಿಗಳು ಅಧಿಕಾರಿಗಳನ್ನು ಒತ್ತಾಯಿಸಿದರು. ಮಾಯಮುಡಿಯ ರುದ್ರಬೀಡು ಎಂಬಲ್ಲಿ ಮತ್ತೊಂದು ಹಸುವನ್ನು ಹುಲಿ ಕೊಂದು ಹಾಕಿದೆ. ದಕ್ಷಿಣ ಕೊಡಗಿನ ಹುಲಿ ಉಪಟಳದ ಭಾಗಗಳಲ್ಲಿ ಕಾರ್ಮಿಕರು ಕಾಫಿ ತೋಟಗಳಿಗೆ ಕೆಲಸಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಕಾಫಿ ಕೊಯ್ಲಿನ ಸಮಯವಾಗಿರುವುದರಿಂದ ಬೆಳೆಗಾರರು ಅತಂತ್ರ ಪರಿಸ್ಥಿತಿಯನ್ನು ಅನುಭವಿಸುತ್ತಿದ್ದಾರೆ.
ಲೇಖಕ: admin
ಮಡಿಕೇರಿ ಫೆ.3 : ಪದ್ಮಶ್ರೀ ಪುರಸ್ಕೃತ ಕೊಡಗಿನ ಉಮ್ಮತ್ತಾಟ್ ಕಲಾವಿದೆ ಐಮುಡಿಯಂಡ ರಾಣಿ ಮಾಚಯ್ಯ ಅವರನ್ನು ಮಡಿಕೇರಿ ಕೊಡವ ಸಮಾಜದ ವತಿಯಿಂದ ಸನ್ಮಾನಿಸಲಾಯಿತು. ರಾಣಿ ಮಾಚಯ್ಯ ಅವರನ್ನು ನಗರದ ಎವಿ ಶಾಲೆ ಬಳಿಯಿಂದ ತೆರೆದ ಜೀಪ್‍ನಲ್ಲಿ ಮೆರವಣಿಗೆ ಮೂಲಕ ಕರೆ ತಂದು ಕೊಡವ ಸಮಾಜದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಮಾಜಿ ಸಚಿವ ಎಂ.ಸಿ.ನಾಣಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯರಾದ ವೀಣಾ ಅಚ್ಚಯ್ಯ, ಸುನೀಲ್ ಸುಬ್ರಮಣಿ, ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಮುತ್ತಪ್ಪ, ಉಪಾಧ್ಯಕ್ಷ ನಂದಿನೆರವಂಡ ಚೀಯಣ್ಣ, ಜಂಟಿ ಕಾರ್ಯದರ್ಶಿ ನಂದಿನೆರವಂಡ ದಿನೇಶ್, ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕನ್ನಂಡ ಕವಿತಾ ಹಾಗೂ ನಿರ್ದೇಶಕಿ ಕಾಂಡೇರ ಲಲ್ಲು ಕುಟ್ಟಪ್ಪ ಸೇರಿದಂತೆ ಕೊಡವ ಸಮಾಜದ ಅಧೀನದಲ್ಲಿರುವ 12 ಕೇರಿಗಳ ಸದಸ್ಯರು, ಪೊಮ್ಮಕ್ಕಡ ಕೂಟದ ಪ್ರಮುಖರು, ಜನಾಂಗ ಬಾಂಧವರು ಹಾಗೂ ಸಾರ್ವಜನಿಕರು ಹಾಜರಿದ್ದರು.
ಮಡಿಕೇರಿ ಫೆ.3 : ಕೊಡಗು ಆಮ್ ಆದ್ಮಿ ಪಕ್ಷದ ಸಭೆಯು ಫೆ.4 ರಂದು ಮಡಿಕೇರಿಯಲ್ಲಿ ನಡೆಯಲಿದೆ ಎಂದು ಕೊಡಗು ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಭೋಜಣ್ಣ ಸೋಮಯ್ಯ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಅಂದು ಬೆಳಿಗ್ಗೆ 10 ಗಂಟೆಗೆ ಮಡಿಕೇರಿಯ ಕೋಟೆ ಮಹಿಳಾ ಸಮಾಜ ಸಭಾಂಗಣದಲ್ಲಿ ಸಭೆ ನಡೆಯಲಿದ್ದು, ಎಎಪಿ ಪಕ್ಷದ ರಾಜ್ಯ ನಾಯಕರುಗಳಾದ ಬಿ. ಟಿ. ನಾಗಣ್ಣ ಮತ್ತು ಚೆನ್ನಪ್ಪ ಗೌಡ ಸಭೆಗೆ ಆಗಮಿಸಲಿದ್ದಾರೆ. ಅಲ್ಲದೆ ಸಭೆಯಲ್ಲಿ ಪಕ್ಷಕ್ಕೆ ನೂತನ ಕಾರ್ಯಕರ್ತರು ಸೇರ್ಪಡೆಯಾಗಲಿದ್ದು, ಪಕ್ಷಕ್ಕೆ ಸೇರಲು ಇಚ್ಛೆ ಇರುವ ಸಾರ್ವಜನಿಕರು ಆಗಮಿಸುವಂತೆ ಭೋಜಣ್ಣ ತಿಳಿಸಿದರು. ವಿಧಾನ ಸಭಾ ಚುನಾವಣೆ ಸಮೀಪ ಇರುವುದರಿಂದ ಪಕ್ಷದ ಮುಖಂಡರು,ಹಿತೈಷಿಗಳು,ಅಭಿಮಾನಿಗಳು, ಬೆಂಬಲಿಗರು,ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಗೆ ಹಾಜರಾಗುವಂತೆ ಕೋರಿದರು.
ಮಡಿಕೇರಿ ಫೆ.3 : ಭಾರತೀಯ ನೌಕಾಪಡೆಯಲ್ಲಿ ರಿಯಲ್ ಅಡ್ಮಿರಲ್ ಆಗಿ ಕರ್ತವ್ಯದಲ್ಲಿರುವ ಕೊಡಗಿನ ಅಧಿಕಾರಿ ಐಚೆಟ್ಟಿರ ಬಿ.ಉತ್ತಯ್ಯ ಅವರು ಇದೀಗ ಮತ್ತೊಂದು ಮಹತ್ವದ ಜವಾಬ್ದಾರಿಗೆ ನಿಯೋಜಿತರಾಗಿದ್ದಾರೆ. ಐ.ಬಿ.ಉತ್ತಯ್ಯ (ವಿ.ಎಸ್.ಎಂ, ಎ.ವಿ.ಎಸ್.ಎಂ) ಅವರು ಇದೀಗ ಭಾರತೀಯ ನೌಕಾಪಡೆಯ ವಾರ್‌ಶಿಪ್ ಡಿಸೈನ್ ಬ್ಯೂರೋ ನವದೆಹಲಿ ಇದರ ಮಹಾನಿರ್ದೇಶಕ (ಡಿ.ಜಿ.)ರಾಗಿ ನೇಮಕಗೊಂಡಿದ್ದಾರೆ. ಕಳೆದ ಹಲವು ಸಮಯದಿಂದ ವಿಶಾಖಪಟ್ಟಣದ ನೌಕಾನೆಲೆಯಲ್ಲಿ ರಿಯಲ್ ಅಡ್ಮಿರಲ್ ಸ್ಥಾನದೊಂದಿಗೆ ಎಡ್ಮಿರಲ್ ಸೂಪರಿಂಟೆಂಡೆಂಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು, ಇದೀಗ ರಿಯಲ್ ಅಡ್ಮಿರಲ್ ಬಿಮಲ್ ಕುಮಾರನ್ ಅವರಿಂದ ಅಧಿಕಾರ ಸ್ವೀಕರಿಸಿದ್ದಾರೆ. ಉತ್ತಯ್ಯ ಅವರು ಭಾರತೀಯ ನೌಕಾಪಡೆಗೆ 1987ರಲ್ಲಿ ಸೇರ್ಪಡೆಗೊಂಡಿದ್ದು, ಲೋನಾವರದ ಐ.ಎನ್.ಎಸ್.ಶಿವಾಜಿ ನೌಕಾ ಇಂಜಿನಿಯರಿಂಗ್ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿದ್ದು, ಎಂ.ಟೆಕ್, ಎಂಪಿಲ್ ಪದವಿ ಪಡೆದಿದ್ದಾರೆ. ತಮ್ಮ 35 ವರ್ಷಗಳ ಸೇವಾವಧಿಯಲ್ಲಿ ವಿವಿಧ ಜವಾಬ್ದಾರಿಯುತ ಸ್ಥಾನಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಉತ್ತಯ್ಯ ಅವರು, ಕಾರವಾರದ ನೌಕಾನೆಲೆಯ ತಾಂತ್ರಿಕ ಹೆಚ್ಚುವರಿ ಮಹಾ ನಿರ್ದೇಶಕರಾಗಿ, ವಿಶಾಖಪಟ್ಟಣದ ನೌಕಾನೆಲೆಯ ಎಡ್ಮಿರಲ್ ಸೂಪರಿಂಟೆಂಡೆಂಟ್ ಆಗಿ ಪೂರ್ವ ನೌಕಾನೆಲೆಯ ಮುಖ್ಯ ಅಧಿಕಾರಿಯಾಗಿ…
ಸೋಮವಾರಪೇಟೆ ಫೆ.3 : ಐಗೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿಜ್ಞಾನ ಪ್ರಯೋಗಾಲಯಕ್ಕೆ ಪಾರ್ವತಿ ಗ್ಯಾಸ್ ಏಜೆನ್ಸಿಯ ಮಾಲೀಕ ಎಸ್.ಎ.ಮುರಳೀಧರ್ ಉದಾರವಾಗಿ ಗ್ಯಾಸ್ ಸಿಲಿಂಡರ್ ನೀಡಿದರು. ಈ ಸಂದರ್ಭ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೃಷ್ಣಪ್ಪ, ಮುಖ್ಯ ಶಿಕ್ಷಕ ಯಶ್ವಂತ್‍ಕುಮಾರ್, ಸಹ ಶಿಕ್ಷಕರು ಹಾಜರಿದ್ದರು.
ಸೋಮವಾರಪೇಟೆ ಫೆ.3 : ತಾಲ್ಲೂಕಿನಲ್ಲಿ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆಗಳ ಮೂವರು ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಲ್ಯಾಪ್‍ಟಾಪ್‍ಗಳನ್ನು ವಿತರಿಸಲಾಯಿತು. ಎಸ್‍ಎಸ್‍ಎಲ್‍ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಐಗೂರು ಸರಕಾರಿ ಪ್ರೌಢಶಾಲೆಯ ಸ್ನೇಹಾ, ನೆಲ್ಲಿಹುದಿಕೇರಿ ಪ್ರೌಢಶಾಲೆಯ ಅಸ್ಮಿಯಾ, ಅಂಕನಳ್ಳಿ ಪ್ರೌಢಶಾಲೆಯ ಅಭಿಷೇಕ್ ಅವರುಗಳಿಗೆ ಲ್ಯಾಪ್‍ಟಾಪ್‍ಗಳನ್ನು ವಿತರಿಸಲಾಯಿತು. ಈ ಸಂದರ್ಭ ತಹಶೀಲ್ದಾರ್ ಎಸ್.ಎನ್.ನರಗುಂದ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ.ಸುರೇಶ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಕೆ.ಚಂದ್ರು, ರಾಷ್ಟ್ರೀಯ ಹಬ್ಬಗಳ ಸಮಿತಿ ಉಪಾಧ್ಯಕ್ಷರಾದ ಎಂ.ಬಿ.ಅಭಿಮನ್ಯು ಕುಮಾರ್ ಇದ್ದರು.
ಸೋಮವಾರಪೇಟೆ ಫೆ.3 : ಏಷ್ಯಾ ಬುಕ್ ಆಫ್ ರೆಕಾರ್ಡ್ ಸಂಸ್ಥೆ ವತಿಯಿಂದ ನೀಡುವ ಪ್ರಶಸ್ತಿಗೆ ಸೋಮವಾರಪೇಟೆಯ ನಿವಾಸಿ, ಸಿವಿಲ್ ಇಂಜಿನಿಯರ್ ಹಾಗೂ ಪುಷ್ಪಗಿರಿ ಜೇಸಿ ಸಂಸ್ಥೆ ಪೂರ್ವ ವಲಯ ಉಪಾಧ್ಯಕ್ಷರಾದ ಎ.ಆರ್.ಮಮತ ಭಾಜನರಾಗಿದ್ದಾರೆ. ಕರ್ನಾಟಕದಲ್ಲಿ ಏಕಕಾಲಕ್ಕೆ ಅತೀ ಹೆಚ್ಚು ಕೌಶಲ್ಯ ಆಧಾರಿತ ತರಬೇತಿ ಕಾರ್ಯಕ್ರಮಗಳನ್ನು ಕರ್ನಾಟಕದ ವಿವಿಧ ವಿಭಾಗಗಳಲ್ಲಿ ಒಂದೇ ಬಾರಿಗೆ ಆಯೋಜಿಸಿ ಅನುಷ್ಠಾನಗೊಳಿಸಿದ್ದಕ್ಕಾಗಿ ಈ ಪ್ರಶಸ್ತಿ ನೀಡಿ ಗೌರವಿಸಿದೆ ತುಮಕೂರು ಜೆಸಿಐ ಮೆಟ್ರೋ ವತಿಯಿಂದ ತುಮಕೂರು ಚೇತನ ಸಭಾಂಗಣದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದರು.
ಕುಶಾಲನಗರ ಫೆ.2 : ಕುಶಾಲನಗರ- ಕೊಪ್ಪ ಗಡಿಭಾಗದಲ್ಲಿ ಹೆದ್ದಾರಿ ಬದಿಯಲ್ಲಿದ್ದ ಮರಗಳ ಕೊಂಬೆಗಳನ್ನು ಕಡಿಯುವ ಮೂಲಕ ಮರ ಹಾಗೂ ಪಕ್ಷಿಗಳ ನೆಲೆಗೆ ಹಾನಿ ಮಾಡಲಾಗಿದೆ ಎಂದು ಆರೋಪಿಸಿ ಪರಿಸರ ಪ್ರೇಮಿ ಚಂದ್ರಮೋಹನ್ ಮತ್ತಿತರರು ಅರಣ್ಯ ಇಲಾಖೆಗೆ ದೂರು ಸಲ್ಲಿಸಿದ್ದಾರೆ. ಮರದ ಕೊಂಬೆಗಳನ್ನು ಕಡಿದ ಕ್ರಮವನ್ನು ಖಂಡಿಸಿ ದಿಢೀರ್ ಪ್ರತಿಭಟನೆ ನಡೆಸಿದ ಚಂದ್ರಮೋಹನ್ ಹಾಗೂ ಸ್ಥಳೀಯರು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಕೆ.ವಿಶಿವರಾಂ ಭೇಟಿ ನೀಡಿ ಮರ ಕಡಿಯದಂತೆ ಸೂಚನೆ ನೀಡಿದರೂ ಸ್ಪಂದಿಸದೆ ಎರಡು ಮರಗಳ ಕೊಂಬೆಯನ್ನು ಕಡಿಯಲಾಗಿದೆ. ಮರ ಕಡಿಯಲು ಕಾರಣಕರ್ತರಾದ ಇಬ್ಬರು ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಚಂದ್ರಮೋಹನ್ ಆಗ್ರಹಿಸಿದರು. ಸ್ಥಳೀಯ ಪರಿಸರ ಪ್ರೇಮಿಗಳಾದ ಕೊಡಗನ ಹರ್ಷ, ತೋರೆರ ಉದಯ್, ಸುಮನ್ ಬಾಲಚಂದ್ರ, ಎಂ.ಕೃಷ್ಣ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಮಡಿಕೇರಿ ಫೆ.2 : ಮಣ್ಣು ಸಾಗಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಳು ಸಾಗಾಟದ ಕೇಸ್ ದಾಖಲಿಸುವುದಾಗಿ ವ್ಯಕ್ತಿಯೊಬ್ಬರನ್ನು ಬೆದರಿಸಿ ಲಂಚದ ಬೇಡಿಕೆ ಇಟ್ಟ ಆರೋಪದಡಿ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿಯೊಬ್ಬರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸೋಮಶೇಖರ್ ಸಜ್ಜನ್ ಎಂಬುವವರೇ ಲಂಚ ಕೇಳಿದ ಆರೋಪದಲ್ಲಿ ಸಿಲುಕಿರುವ ಪೊಲೀಸ್ ಸಿಬ್ಬಂದಿ. ಬಿಳಿಗೇರಿ ಗ್ರಾಮದ ವ್ಯಕ್ತಿಯೊಬ್ಬರು ಬೊಲೊರೋ ವಾಹನದಲ್ಲಿ ಮನೆಗೆ ಮಣ್ಣು ಸಾಗಿಸುತ್ತಿದ್ದರು ಎನ್ನಲಾಗಿದೆ. ಈ ಸಂಬಂಧ 10 ಸಾವಿರ ರೂ.ಗಳನ್ನು ನೇರವಾಗಿ ಪಡೆದುಕೊಳ್ಳದೆ ನಗರದ ಹಳೇ ಖಾಸಗಿ ಬಸ್ ನಿಲ್ದಾಣದ ಬೀಡಾ ಅಂಗಡಿಯ ಮಾಲೀಕನ ಬಳಿ ನೀಡುವಂತೆ ಪೊಲೀಸ್ ಸಿಬ್ಬಂದಿ ಹೇಳಿದ್ದರು ಎಂದು ಹೇಳಲಾಗಿದೆ. ಹಣ ಸ್ವೀಕರಿಸುತ್ತಿದ್ದ ಬೀಡಾ ಅಂಗಡಿ ಮಾಲೀಕನನ್ನು ಲೋಕಾಯುಕ್ತರು ಹಣ ಸಹಿತ ವಶಕ್ಕೆ ಪಡೆದರು. ಆತ ನೀಡಿದ ಮಾಹಿತಿ ಆಧರಿಸಿ ಪೊಲೀಸ್ ಸಿಬ್ಬಂದಿ ಸೋಮಶೇಖರ್ ಸಜ್ಜನ್ ನನ್ನು ಲೋಕಾಯುಕ್ತ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಈ ಪ್ರಕರಣದಲ್ಲಿ ಕೆಲವು ತಾಂತ್ರಿಕ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದ್ದು, ಅದರ ಆಧಾರದಲ್ಲಿ ತನಿಖೆ ಮುಂದುವರೆದಿದೆ ಎಂದು ಮೈಸೂರು…
ವಿರಾಜಪೇಟೆ ಫೆ.2 : ವಿರಾಜಪೇಟೆಯ ಖಾಸಗಿ ಬಸ್ಸು ನಿಲ್ದಾಣ ವ್ಯಾಪ್ತಿಯಲ್ಲಿ ಭಿಕ್ಷೆ ಬೇಡಿ ಜೀವನ ಸಾಗಿಸುತಿದ್ದ 60 ವರ್ಷದ ವೃದ್ಧೆಯೊಬ್ಬರು ಸರ್ಕಾರಿ ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ. 2022 ಡಿ.25 ರಂದು ವೃದ್ಧೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ಸೇರಿಸುವ ಸಂದರ್ಭ ಹೆಸರನ್ನು ಪ್ರೇಮ ಎಂದು ದಾಖಲಿಸಿಕೊಳ್ಳಲಾಗಿದೆ. ಶವವನ್ನು ವಿರಾಜಪೇಟೆ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದ್ದು, ವಾರಸುದಾರರು ಯಾರೆಂದು ತಿಳಿದಿಲ್ಲ. ಮೃತರ ಮಾಹಿತಿ ತಿಳಿದು ಬಂದಲ್ಲಿ ವಿರಾಜಪೇಟೆ ನಗರ ಪೊಲೀಸ್ ಠಾಣೆ 08274-257333 ಮತ್ತು ನಗರ ಠಾಣಾಧಿಕಾರಿ 9480804955 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.






