ಮಡಿಕೇರಿ ಫೆ.2 : ಜಿಲ್ಲೆಯ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 2 ಸಾವಿರ ಕೋಟಿ ರೂ.ಗೂ ಹೆಚ್ಚಿನ ಅನುದಾನ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗವಾಗಿದ್ದು, ಈ ಬಗ್ಗೆ ಶ್ವೇತ ಪತ್ರ ಬಿಡುಗಡೆಗೂ ಸಿದ್ಧವಿರುವುದಾಗಿ ಶಾಸಕ ಕೆ.ಜಿ.ಬೋಪಯ್ಯ ತಿಳಿಸಿದ್ದಾರೆ. ಕೊಡಗು ಪತ್ರಕರ್ತರ ಸಂಘ ಮತ್ತು ಕೊಡಗು ಪತ್ರಿಕಾಭವನ ಟ್ರಸ್ಟ್ ನ ಸಂಯುಕ್ತಾಶ್ರಯದಲ್ಲಿ ನಗರದ ಪತ್ರಿಕಾ ಭವನದಲ್ಲಿ ನಡೆದ ‘ಸಂವಾದ’ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ತಮ್ಮ ನಾಲ್ಕು ಅವಧಿಯ ಶಾಸಕ ಸ್ಥಾನದ ನಡೆಗಳನ್ನು ಮೆಲುಕು ಹಾಕಿದರು. ಹೊಗಳಿಕೆ ಮತ್ತು ತೆಗಳಿಕೆಗಳನ್ನು ಸಮಾನವಾಗಿ ಸ್ವೀಕರಿಸುತ್ತಲೆ, ತನ್ನನ್ನು ಆಯ್ಕೆ ಮಾಡಿದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ ತೃಪ್ತಿ ಇದೆ ಎಂದರು. ಕೊಡಗು ಜಿಲ್ಲೆಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಬೇಕೆನ್ನುವ ಏಕಮಾತ್ರ ಉದ್ದೇಶದೊಂದಿಗೆ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಸಕ್ತ ಆರ್ಥಿಕ ಸಾಲಿನಲ್ಲೆ ಕ್ಷೇತ್ರಕ್ಕೆ 5508 ಲಕ್ಷ ರೂ. ಅನುದಾನ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ದೊರಕುವಂತೆ ನೋಡಿಕೊಂಡಿರುವುದಾಗಿ ಹೇಳಿದರು. ::: ‘ಕೊಂಗಣ ಹೊಳೆ’ಯಿಂದ ನೀರು ::: ವಿರಾಜಪೇಟೆ…
ಲೇಖಕ: admin
ಸುಂಟಿಕೊಪ್ಪ ಫೆ.2 : ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಟ ವೇತನ ನೀಡುವಂತೆ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಫೆ.14 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಅನಿರ್ಧಿಷ್ಟ ಮುಷ್ಕರ ನಡೆಯಲಿದ್ದು, ಮುಷ್ಕರದ ಭಿತ್ತಿಪತ್ರವನ್ನು ಕರ್ನಾಟಕ ರಾಜ್ಯ ಗ್ರಾ.ಪಂ ನೌಕರರ ಸಂಘದ ಜಿಲ್ಲಾಧ್ಯಕ್ಷ ಭರತ್ ಕುಮಾರ್ ಬಿಡುಗಡೆ ಮಾಡಿದರು. ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಸಿಬ್ಬಂದಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ ಅವರು ಭಿತ್ತಿಪತ್ರಗಳನ್ನು ನೀಡಿದರು. ನಂತರ ಮಾತನಾಡಿದ ಅವರು ಗ್ರಾ.ಪಂ ಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕರವಸೂಲಿಗಾರ, ಕ್ಲರ್ಕ್, ಡಾಟಾ ಎಂಟ್ರಿ ಅಪರೇಟರ್, ನೀರುಗಂಟಿಗಳನ್ನು, ಸ್ವಚ್ಛತಾ ಸಿಬ್ಬಂದಿಗಳನ್ನು ಸರಕಾರಿ ನೌಕರರನ್ನಾಗಿ ಘೋಷಿಸಬೇಕು. ದಿನನಿತ್ಯದ ಬೆಲೆ ಏರಿಕೆ ಅನುಸಾರವಾಗಿ ಕನಿಷ್ಟ ವೇತನ ರೂ.25,000 ನಿಗದಪಡಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲಾಗುವುದೆಂದು ತಿಳಿಸಿದರು.
ಶನಿವಾರಸಂತೆ ಫೆ.2 : ಹಂಡ್ಲಿ ಗ್ರಾ.ಪಂ ವ್ಯಾಪ್ತಿಯ ಗುಡುಗಳಲೆ ಶ್ರೀ ಜಯದೇವ ಜಾನುವಾರು ಜಾತ್ರೆ ನಡೆಯುತ್ತಿದ್ದು, ಜನರನ್ನು ಆಕರ್ಷಿಸಲು ಪ್ರತಿ ದಿನ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ನಡೆಯುತ್ತಿದೆ. ಶ್ರೀ ಜಯದೇವಾ ಜಾತ್ರಾ ಕಲಾ ವೇದಿಕೆಯಲ್ಲಿ ಆಲೂರು ಸಿದ್ದಾಪುರ ಜಾನಕಿ ಕಾಳಪ್ಪ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಂದ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜನರ ಗಮನ ಸೆಳೆಯಿತು. ಸಾಂಸ್ಕೃತಿಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಯದೇವ ಜಾನುವಾರು ಜಾತ್ರಾ ಸಮಿತಿ ಅಧ್ಯಕ್ಷ ವಿನಿತ್‌ಕುಮಾರ್, ಕಾರ್ಯದರ್ಶಿ ಅಶೋಕ್, ಜಾನಕಿ ಕಾಳಪ್ಪ ವಿದ್ಯಾಸಂಸ್ಥೆಯ ಮೇನೆಜಿಂಗ್ ಟ್ರಸ್ಟಿ ಎಚ್.ಕೆ.ಶಿವಪ್ರಕಾಶ್, ಶಾಲೆಯ ಶಿಕ್ಷಕರು, ಜಾತ್ರಾ ಸಮಿತಿ ಪದಾಧಿಕಾರಿಗಳು ಹಾಜರಿದ್ದರು. ಈಗಾಗಲೆ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿ ನಡೆದಿದ್ದು, ಹಗಲು ವಿವಿಧ ಕ್ರೀಡಾಕೂಟಗಳು ನಡೆಯುತ್ತಿದೆ. ಚಿತ್ರವರದಿ : ದಿನೇಶ್ ಮಾಲಂಬಿ. ಶನಿವಾರಸಂತೆ
ಮಡಿಕೇರಿ ಫೆ.2 : ಕಾವೇರಿ ನೀರಾವರಿ ನಿಗಮದ ರೂ.76 ಲಕ್ಷ ಅನುದಾನದಲ್ಲಿ ಅಭಿವೃದ್ಧಿಪಡಿಸಲಾದ ಅರಮೇರಿ – ಮೈತಾಡಿ ಸಂಪರ್ಕ ರಸ್ತೆಯನ್ನು ಶಾಸಕ ಕೆ.ಜಿ.ಬೋಪಯ್ಯ ಉದ್ಘಾಡಿಸಿದರು. ಈ ಸಂದರ್ಭ ಗ್ರಾ.ಪಂ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.
ಮಡಿಕೇರಿ ಫೆ.2 : ಮಡಿಕೇರಿಯ ಇನ್ನರ್ ವೀಲ್ ಸಂಸ್ಥೆಯ ವತಿಯಿಂದ ಶ್ರೀಶಕ್ತಿ ವೃದ್ಧಾಶ್ರಮದ ವಾಸಿಗಳಿಗೆ ಉಚಿತ ದಂತ ತಪಾಸಣೆ ಶಿಬಿರ ನಡೆಯಿತು. ನಗರದ ತ್ಯಾಗರಾಜ ಕಾಲೋನಿಯಲ್ಲಿರುವ ಶ್ರೀಶಕ್ತಿ ವೃದ್ಧಾಶ್ರಮದ 25 ವಾಸಿಗಳಿಗೆ ಉಚಿತವಾಗಿ ದಂತ ತಪಾಸಣೆ ಕೈಗೊಳ್ಳಲಾಯಿತು. ತಂಬಾಕಿನಿಂದ ಉಂಟಾಗುವ ದುಷ್ಪರಿಣಾಮಗಳು, ಬಾಯಿಯ ಕ್ಯಾನ್ಸರ್ ಬಗ್ಗೆ ಇನ್ನರ್ ವೀಲ್ ಸಂಸ್ಥೆಯ ಸದಸ್ಯೆ, ದಂತವೈದ್ಯೆ ಡಾ.ದೀಪ ವಿ ಮಾಹಿತಿ ನೀಡಿದರು. ಸಂಸ್ಥೆಯ ವ್ಯವಸ್ಥಾಪಕ ಸತೀಶ್, ಇನ್ನರ್ ವೀಲ್ ಅಧ್ಯಕ್ಷೆ ಡಾ.ರೇಣುಕಾ ಸುಧಾಕರ್, ಸದಸ್ಯೆಯರಾದ ಉಮಾಗೌರಿ, ಅಗ್ನೇಸ್ ಮುತ್ತಣ್ಣ ಹಾಜರಿದ್ದರು.
ಮಡಿಕೇರಿ ಫೆ.2 : ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಿಗೆ ಶಾಸಕ ಕೆ.ಜಿ.ಬೋಪಯ್ಯ ಊಟದ ತಟ್ಟೆ ಹಾಗೂ ಲೋಟವನ್ನು ವಿತರಿಸಿದರು. ಈ ಸಂದರ್ಭ ಶಾಲೆಯ ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಮಡಿಕೇರಿ ಫೆ.2 : ಜಾಗತಿಕ ಅಹ್ಮದಿಯಾ ಮುಸ್ಲಿಮ್ ಸಂಘಟನೆಯ ಮಹಿಳಾ ಘಟಕ “ಲಜ್ನಾ ಇಮಾಇಲ್ಲಾಹ್” ಇದರ ನೂರರ ಸಂಭ್ರಮಾಚರಣೆ ಪ್ರಯುಕ್ತ ಮಡಿಕೇರಿಯ ಬಾಲಭವನದಲ್ಲಿ ಸರ್ವಧರ್ಮ ಸಮ್ಮೇಳನ ನಡೆಯಿತು. ಅಹ್ಮದಿಯಾ ಮುಸ್ಲಿಮ್ ಸಂಘಟನೆಯ ಕರ್ಣಾಟಕ ದಕ್ಷಿಣ ವಲಯದ ಮಹಿಳಾ ಘಟಕದ ಅಧ್ಯಕ್ಷೆ ನಸೀಮಾ ನಾಸಿರ್ ಸರ್ವಧರ್ಮ ಸಮ್ಮೇಳನದ ಕುರಿತು ಪ್ರಸ್ತಾವಿಕವಾಗಿ ಮಾತನಾಡಿದರು. ನಗರಸಭೆಯ ಅಧ್ಯಕ್ಷರಾದ ಅನಿತಾ ಪೂವಯ್ಯ ಮಾತನಾಡಿ, ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಮುನ್ನುಗ್ಗುತ್ತಿದ್ದು, ಸದಾ ಉತ್ತಮ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು ಎಂದು ಸಲಹೆ ನೀಡಿದರು. ಬ್ರಹ್ಮಕುಮಾರಿ ಮಡಿಕೇರಿ ಶಾಖೆಯ ಧನಲಕ್ಷ್ಮಿ ಮಾತನಾಡಿ, ಎಲ್ಲಾ ಧರ್ಮದ ಮೂಲ ತತ್ವವಾದ ಶಾಂತಿಯು ಮನಸ್ಸಿಗೆ ಎಷ್ಟು ಮುಖ್ಯ, ಅದು ಹೇಗೆ ಪಡೆಯಲು ಸಾಧ್ಯ ಎಂದು ವಿವರಿಸಿದರು. ಸಂತ ಜೋಸೆಫರ ಶಾಲೆಯ ಸಿಸ್ಟರ್ ಅಸುಮ್ತಾ.ಕೆ, ಮಾತನಾಡಿ, ಶಾಂತ ಗುಣಗಳು ಪ್ರತಿಯೊಬ್ಬರಿಗೂ ಯಾವರೀತಿ ಪ್ರಮುಖವಾದದ್ದು ಎಂದು ಹೇಳುತ್ತಾ, ಆ ಗುಣಗಳ ಪ್ರಾಮುಖ್ಯತೆಯನ್ನು ತಿಳಿಸಿದರು. ಸ್ತ್ರೀ ಶಕ್ತಿ ಸಂಘದ ರಾಜ್ಯಾಧ್ಯಕ್ಷೆ ರೆಹೆನಾ ಸುಲ್ತಾನ ಮಾತನಾಡಿ, ಸೇವಾ ಕಾರ್ಯಗಳನ್ನು ನಮ್ಮೆಲ್ಲರ ಹವ್ಯಾಸವಾಗಿ ಮಾಡಿಕೊಳ್ಳಬೇಕೆಂದು …
ಮಡಿಕೇರಿ ಫೆ.2 : ನಕ್ಸಲ್ ಸಂಘಟನೆಯ ಶಂಕಿತ ಮುಖಂಡ, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಕ್ಸಲ್ ಪ್ರಕರಣವನ್ನು ಎದುರಿಸುತ್ತಿರುವ ರೂಪೇಶ್ ನನ್ನು ಬಿಗಿ ಭದ್ರತೆಯಲ್ಲಿ ಮಡಿಕೇರಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಕೇರಳ ಹಾಗೂ ಕರ್ನಾಟಕ ಪೊಲೀಸರ ಬಿಗಿ ಭದ್ರತೆಯಲ್ಲಿ ಬಂದ ರೂಪೇಶ್ ಘೋಷಣೆಗಳನ್ನು ಕೂಗಿದನು. ಕೇರಳ ರಾಜ್ಯದ ವೈವೂರು ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿರುವ ರೂಪೇಶ್‍ನನ್ನು ಬುಧವಾರ ಸಂಜೆ ವೇಳೆಯಲ್ಲಿ ಮಡಿಕೇರಿಗೆ ಕರೆತಂದು ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿರಿಸಲಾಗಿತ್ತು. ಗುರುವಾರ ಬೆಳಗೆ ಶಸ್ತ್ರ ಸಜ್ಜಿತ ಕೊಡಗು ಕಮಾಂಡೋ ಮತ್ತು ಕೇರಳ ಥಂಡರ್ ಬೋಲ್ಟ್ ಕಮಾಂಡೋಗಳ ಬಿಗಿ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಕರೆತರಲಾಯಿತು.
ನಾಪೋಕ್ಲು ಫೆ.2 : ಕಾಫಿ ಮಂಡಳಿಯಿಂದ ರೈತರಿಗೆ ಸಿಗುವ ಸೌಲಭ್ಯಗಳು, ಮತ್ತು ಕಾಫಿ ತೋಟದ ನಿರ್ವಹಣೆ, ಮಣ್ಣು ಪರೀಕ್ಷೆ ಸಮಗ್ರ ಮಾಹಿತಿ ಹಾಗೂ ಮುಂದಿನ ದಿನಗಳಲ್ಲಿ ರೈತರ ತೋಟಗಳಿಗೆ ಭೇಟಿ ನೀಡಿ ಮಣ್ಣು ಪರೀಕ್ಷೆ ಮಾಡುವುದು ಹಾಗೂ ಬೆಳೆಗಾರರಿಗೆ ಮತ್ತು ಕಾರ್ಮಿಕರಿಗೆ ಕಾಫಿ ಗಿಡಗಳ ನಿರ್ವಹಣೆ ಕುರಿತು ತರಬೇತಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಕಾಫಿ ಮಂಡಳಿಯ ಉಪನಿರ್ದೇಶಕ ಡಾ. ಚಂದ್ರಶೇಖರ್ ಮಾಹಿತಿ ನೀಡಿದರು. ಸಮೀಪದ ಕಕ್ಕಬ್ಬೆಯ ಪ್ರಾಥಮಿಕಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದ ಕಾಫಿ ಮಂಡಳಿ ಹಾಗೂ ಬೆಳೆಗಾರರ ನಡುವಿನ ಸಂವಾದ ಕಾರ್ಯಕ್ರಮದಲ್ಲಿ ಕಿರು ಚಿತ್ರಪ್ರದರ್ಶನದ ಮೂಲಕ ಮಾಹಿತಿ ನೀಡಿದರು. ಕಾಫಿ ಮಂಡಳಿಯ ಅಧಿಕಾರಿಗಳಾದ (ಜೆ ಎಲ್ ಓ) ಅಜಿತ್ ಕುಮಾರ್ ರಾವತ್, ಚಟ್ಟಳ್ಳಿ ಕಾಫಿ ಸಂಶೋಧನಾ ಕೇಂದ್ರದ ಮಂಜುನಾಥ್ ರೆಡ್ಡಿ ಇದ್ದ ಬೆಳಗಾರರ ಸಮಸ್ಯೆಯ ಬಗ್ಗೆ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು. ಪ್ರಾಥಮಿಕಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕಲ್ಯಾಟಂಡ ರಘು ತಮ್ಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮ…
ಮಡಿಕೇರಿ ಫೆ.2 : ರೊಬೆಸ್ಟಾ ಎಡ್ವೆಂಚರಸ್ ಆಂಡ್ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ಫೆ.5 ರಂದು ಮಡಿಕೇರಿ ತಾಲ್ಲೂಕಿನ ಬೆಟ್ಟತ್ತೂರಿನಲ್ಲಿ ರಾಷ್ಟ್ರಮಟ್ಟದ 4X4 ಆಫ್ ರೋಡ್ ರ‍್ಯಾಲಿ ನಡೆಯಲಿದೆ ಎಂದು ಆಯೋಜಕರಾದ ಉದ್ದಪ್ಪಂಡ ತಿಮ್ಮಣ್ಣ ತಿಳಿಸಿದ್ದಾರೆ. ಕ್ಯಾಂಪ್ ಎಟ್ ಬೆಟ್ಟತ್ತೂರಿನಲ್ಲಿ (ಜಿಪಿಎಸ್ ಲೊಕೇಶನ್ : ತ್ರಿ ಹಿಲ್ಸ್ ರೆಸಾರ್ಟ್) ಅಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ರ‍್ಯಾಲಿ ನಡೆಯಲಿದ್ದು, ಹೊರ ರಾಜ್ಯಗಳ ಪ್ರತಿಭಾವಂತ ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ. ಸ್ಪರ್ಧೆಯಲ್ಲಿ ಸ್ಟಾಕ್ ಪೆಟ್ರೋಲ್, ಸ್ಟಾಕ್ ಡೀಸಲ್ ಮತ್ತು ಪ್ರೂವ್ ಮೊಡಿಫೈಡ್ ವಿಭಾಗಗಳಿದೆ. ಹೆಚ್ಚಿನ ಮಾಹಿತಿಗೆ 9901312776, 9448448399 ಸಂಪರ್ಕಿಸುವಂತೆ ಉದ್ದಪ್ಪಂಡ ತಿಮ್ಮಣ್ಣ ಕೋರಿದ್ದಾರೆ.






