ವಿರಾಜಪೇಟೆ ಜ.3 : : ವಿರಾಜಪೇಟೆ ಪುರಸಭೆ ವ್ಯಾಪ್ತಿಯ ರಸ್ತೆ ಡಾಂಬರಿಕರಣ, ಚರಂಡಿ, ಮತ್ತು ಕಾಂಕ್ರೀಟ್ ರಸ್ತೆ ಸೇರಿದಂತೆ ಇತರ ಅಭಿವೃದ್ಧಿ ಕಾರ್ಯಗಳಿಗಾಗಿ ರೂ, 3.5 ಕೋಟಿ ಅನುದಾನದಲ್ಲಿ ಕಾಮಗಾರಿ ಮುಗಿಯುವ ಹಂತದಲ್ಲಿದ್ದು, ನಗರದ ಜನತೆಗೆ ಕುಡಿಯುವ ನೀರು ಹೆಚ್ಚಿನ ಪೂರೈಕೆಗಾಗಿ ರೂ,65 ಕೋಟಿ ಅನುದಾನ ಮಂಜುರಾಗಿದೆ ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.
ರಾಜ್ಯ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ರೂ, 25 ಲಕ್ಷ ಅನುದಾನದಲ್ಲಿ ವಿರಾಜಪೇಟೆಯ ಸುಂಕದಕಟ್ಟೆ ಕೊಳಚೆ ಪ್ರದೇಶದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿ ಈಗಾಗಲೇ ನಗರದ ಎಲ್ಲಾ ಮನೆ ಮನೆಗಳಿಗು ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗಿದ್ದರು ಮುಂದೆಯು ಕುಡಿಯುವ ನೀರಿನ ಸೌಲಭ್ಯ ಹೆಚ್ಚಿಸುವ ನಿಟ್ಟಿನಲ್ಲಿ ಸರಕಾರ 65 ಕೋಟಿ ರೂ, ಅನುದಾನ ಮಂಜೂರು ಮಾಡಲಾಗಿದ್ದು ಮುಂದಿನ ದಿನದಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದ ಶಾಸಕ ಬೋಪಯ್ಯ ಅವರು ಸರಕಾರದ ಅನುದಾನದಲ್ಲಿ ನಡೆಯುವ ಕಾಮಗಾರಿಗಳು ಕಳಪೆಯಾಗದಂತೆ ಸ್ಥಳಿಯರು ಗಮನ ಹರಿಸಬೇಕು ಹಾಗೂ ಗುತ್ತಿಗೆದಾರರು ಸಮಯಕ್ಕೆ ಸರಿಯಾಗಿ ಕಾಮಗಾರಿಯನ್ನು ಮುಗಿಸುವಂತಾಗಬೇಕು ಎಂದರು.
ಭೂಮಿ ಪೂಜೆ ಸಂದರ್ಭ ಪುರಸಭೆ ಅಧ್ಯಕ್ಷೆ ಸುಶ್ಮಿತಾ ಮಹೇಶ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಯಶೋದ, ಮುಖ್ಯಾಧಿಕಾರಿ ಚಂದ್ರಕುಮಾರ್, ಕೊಳಗೇರಿ ಅಭಿವೃದ್ಧಿ ಮಂಡಳಿ ಅಭಿಯಂತರರಾದ ತೇಜಸ್ವಿನಿ, ಜವಹಾರ್ ಜೋಗಿ, ಪುರಸಭೆ ಸದಸ್ಯರಾದ ಜೂನಾ, ಆಶಾ ಸುಬ್ಬಯ್ಯ, ತಸ್ನಿಂ ಅಕ್ತರ್, ಮಹದೇವ, ಡಿಸಿಸಿ ಬ್ಯಂಕ್ ಜಿಲ್ಲಾ ನಿರ್ಧೇಶಕ ರಘುನಾಣಯ್ಯ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಶಿ ಸುಬ್ರಮಣಿ, ಮಧು ದೇವಯ್ಯ, ಸಂಪಿ ಪೂಣಚ್ಚ ಉಪಸ್ಥಿತರಿದ್ದರು.