ಮಡಿಕೇರಿ ಜ.3 : ನಗರದ ತ್ಯಾಗರಾಜ ಕಾಲೋನಿಯಲ್ಲಿರುವ ‘ತಣಲ್’ ಆಶ್ರಮದ ಪ್ರಯತ್ನದ ಫಲವಾಗಿ ಮಹಿಳೆಯೊಬ್ಬರು 9 ವರ್ಷಗಳ ನಂತರ ತನ್ನ ಪತಿಯ ಜೊತೆಯಾಗಿದ್ದಾರೆ.
ಮಾನಸಿಕ ಸಮಸ್ಯೆಯಿಂದಾಗಿ ಕುಟುಂಬದವರಿಂದ ದೂರವಾಗಿದ್ದ ಹರಿಯಾಣ ಮೂಲದ ದರ್ಶನ ಕಳೆದ ನಾಲ್ಕು ವರ್ಷಗಳಿಂದ ‘ತಣಲ್’ ಆಶ್ರಮದಲ್ಲಿ ಆಶ್ರಯ ಪಡೆದು ಮಾನಸಿಕವಾಗಿ ಸಮಸ್ಯೆಯಿಂದ ಚೇತರಿಸಿಕೊಂಡಿದ್ದಾರೆ.
ಕಳೆದ 32 ವರ್ಷಗಳ ಹಿಂದೆ ದೆಹಲಿ ಮೂಲಕ ಲೆಹರ್ ಸಿಂಗ್ ಎಂಬವರೊಂದಿಗೆ ವಿವಾಹವಾಗಿದ್ದ ದರ್ಶನ. ಸಮಸ್ಯೆಗಳ ನಡುವೆ ದೆಹಲಿಯಲ್ಲಿ ತನ್ನ ಐವರು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದರು. 9 ವರ್ಷಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದ ದರ್ಶನ ಅವರನ್ನು ಕುಟುಂಬದವರು ಎಷ್ಟೇ ಹುಡುಕಾಡಿದರು ಪತ್ತೆಯಾಗಿರಲಿಲ್ಲ. ಪೊಲೀಸ್ ಠಾಣೆಗೆ ದೂರು ನೀಡದರೂ ಯಾವುದೇ ಸುಳಿವು ದೊರೆತ್ತಿರಲಿಲ್ಲ.
2018ರ ಜುಲೈನಲ್ಲಿ ಕುಶಾಲನಗರದಲ್ಲಿ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ದರ್ಶನ ಅವರನ್ನು ಕಂಡ ಪೊಲೀಸರು ತಣಲ್ ಅಶ್ರಮವನ್ನು ಸಂಪರ್ಕಿಸಿ ಆಶ್ರಯ ನೀಡುವಂತೆ ಮನವಿ ಮಾಡಿದ್ದರು. ಸಾಮಾಜಿಕ ಸಂಸ್ಥೆಯಾಗಿರುವ ತಣಲ್ ಆಕೆಯನ್ನು ಕರೆದುಕೊಂಡು ಬಂದು ಪೋಷಣೆಗೆ ಮುಂದಾಯಿತು. ಇದೀಗ ದರ್ಶನ ಆರೋಗ್ಯದಲ್ಲಿ ಶೇ.80 ರಷ್ಟು ಚೇತರಿಕೆ ಕಂಡಿದೆ ಎಂದು ಸಂಸ್ಥೆಯ ಅಧ್ಯಕ್ಷ ಮೊಹಮ್ಮದ್ ತಿಳಿಸಿದರು.
ಮಡಿಕೇರಿಯಲ್ಲಿರುವ ದರ್ಶನಳ ಕುಟುಂಬವನ್ನು ಪತ್ತೆ ಮಾಡಲು ಸಂಸ್ಥೆ ಅಧ್ಯಕ್ಷ ಮಹಮ್ಮದ್ ಶ್ರಮವಹಿಸಿದ್ದು, ಕಳೆದ ಆರು ತಿಂಗಳ ಹಿಂದೆ ದರ್ಶನ ಅವರು ತನ್ನೂರು ‘ಸೋನಿಪತ್ ಸಮೀಪದ ರಾಥೋರ್ ಎಂದು ಹೇಳಿಕೊಂಡ ಹಿನ್ನೆಲೆ ಮಾಹಿತಿ ಪಡೆದು ದರ್ಶನ ಅವರ ಕುಟುಂಬವನ್ನು ಸಂಪರ್ಕಿಸಿದ್ದಾರೆ.
ಪೊಲೀಸ್ ಠಾಣೆಯಲ್ಲಿ ಸೂಕ್ತ ದಾಖಲೆಗಳನ್ನು ಪರಿಶೀಲಿಸಿ ದೃಢಗೊಂಡ ಬಳಿಕ ತಣಲ್ ಆಶ್ರಮಕ್ಕೆ ಪತಿ ಲೆಹರ್ ಸಿಂಗ್ ಅವರನ್ನು ಕರೆಸಿಕೊಂಡು ದರ್ಶನ ಅವರನ್ನು ಕುಟುಂಬದೊಂದಿಗೆ ಸೇರಿಸಿದ್ದಾರೆ.
ಈ ಸಂದರ್ಭ ನಗರಸಭಾ ಉಪಾಧ್ಯಕ್ಷೆ ಸವಿತಾ ರಾಕೇಶ್, ಸದಸ್ಯೆ ಮೇರಿ ವೇಗಸ್, ಸಂಸ್ಥೆಯ ಅಧ್ಯಕ್ಷ ಮಹಮ್ಮದ್ ಸೇರಿದಂತೆ ಇನ್ನಿತರರು ಹಾಜರಿದ್ದರು.