ಮಡಿಕೇರಿ, ಜ.3: ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿಯ ವತಿಯಿಂದ ಮಡಿಕೇರಿ ನಗರದ ಎ.ಎಲ್.ಜಿ.ಕ್ರೆಸೆಂಟ್ ಶಾಲೆಯಲ್ಲಿ ಏರ್ಪಡಿಸಿದ್ದ ಕೊಡಗು ಜಿಲ್ಲಾಮಟ್ಟದ 30 ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ ಗಮನ ಸೆಳೆಯಿತು.
“ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಜೀವಿ ಪರಿಸರ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳೋಣ” ಎಂಬ ಕೇಂದ್ರ ವಿಷಯದಡಿ ವಿವಿದ ಉಪ ವಿಷಯಗಳ ಕುರಿತು ವಿವಿಧ ಶಾಲೆಗಳಿಂದ ಆಗಮಿಸಿದ್ದ ಕಿರಿಯ ವಿಜ್ಞಾನಿಗಳು ತಮ್ಮ ಮಾರ್ಗದರ್ಶಿ ಶಿಕ್ಷಕರ ಮಾರ್ಗದರ್ಶನದಲ್ಲಿ ಸ್ವತಃ ತಯಾರಿಸಿದ ವೈಜ್ಞಾನಿಕ ಯೋಜನಾ ಪ್ರಬಂಧಗಳನ್ನು ವಿಜ್ಞಾನಿಗಳ ಮಾದರಿಯಲ್ಲಿ ಮಂಡಿಸಿ ಗಮನ ಸೆಳೆದರು.
ಸಮಾವೇಶದ ಕೇಂದ್ರ ವಿಷಯದಡಿ ನಿಮ್ಮ ಪರಿಸರ ವ್ಯವಸ್ಥೆಯನ್ನು ಅರಿಯಿರಿ, ಆರೋಗ್ಯ, ಪೋಷಣೆ ಮತ್ತು ಯೋಗಕ್ಷೇಮವನ್ನು ಬೆಳೆಸುವುದು, ಪರಿಸರ ವ್ಯವಸ್ಥೆ ಮತ್ತು ಆರೋಗ್ಯಕ್ಕಾಗಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಭ್ಯಾಸಗಳು, ಸ್ವಾವಲಂಬನೆಗಾಗಿ ಪರಿಸರ ವ್ಯವಸ್ಥೆ ಆಧಾರಿತ ವಿಧಾನಗಳು ಹಾಗೂ ಪರಿಸರ ವ್ಯವಸ್ಥೆ ಮತ್ತು ಆರೋಗ್ಯಕ್ಕಾಗಿ ತಾಂತ್ರಿಕ ನಾವೀನ್ಯತೆ’ ಎಂಬ ಉಪ ವಿಷಯಗಳ ಕುರಿತು ಇಬ್ಬರು ವಿದ್ಯಾರ್ಥಿಗಳನ್ನೊಳಗೊಂಡ ತಂಡವು ವಿವಿಧ ಶೀರ್ಷಿಕೆಗಳಡಿ ತಯಾರಿಸಿದ್ದ ವೈಜ್ಞಾನಿಕ ಯೋಜನಾ ಪ್ರಬಂಧ ಮಂಡಿಸಿದರು.
ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಜಿಲ್ಲೆಯ ವಿವಿಧ ಶಾಲೆಗಳಿಂದ ಆಗಮಿಸಿದ್ದ 24 ಮಂದಿ ಕಿರಿಯ ವಿಜ್ಞಾನಿಗಳು ತಮ್ಮ ಸುತ್ತಲಿನ ಪ್ರದೇಶದ ಸಮಸ್ಯೆಗಳನ್ನು ವಿವಿಧ ಉಪ ವಿಷಯಗಳ ಕುರಿತು ಮಂಡಿಸಿದ ಪ್ರಬಂಧಗಳು ಗಮನ ಸೆಳೆದವು.
ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣ, ಆರೋಗ್ಯ ಮತ್ತು ನೈರ್ಮಲ್ಯ, ಮಣ್ಣಿನ ಆರೋಗ್ಯ ಸಂರಕ್ಷಣೆ, ತ್ಯಾಜ್ಯಗಳ ನಿರ್ವಹಣೆ, ಕಾಡಾನೆ ಮತ್ತು ಮಾನವನ ಸಂಘರ್ಷ, ಜಲ ಸಂರಕ್ಷಣೆ, ಜೀವಿ- ವೈವಿಧ್ಯ ಸಂರಕ್ಷಣೆ, ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟಿ – ಪರಿಸರ ಸಂರಕ್ಷಿಸಿ, ಕೊಡಗಿನಲ್ಲಿ ಭತ್ತದ ಬೆಳೆಯ ಕ್ಷೀಣಿಸುವಿಕೆ, ಆರೋಗ್ಯ ರಕ್ಷಣೆ, ಪರಿಸರ ವ್ಯವಸ್ಥೆಯಲ್ಲಿ ಜೇನಿನ ಪಾತ್ರ, ಸಂಸ್ಕೃತಿ ಸ್ವಾಸ್ಥ್ಯ ಮತ್ತು ಸೇವನೆಯಡಿ ಎಲೆತಟ್ಟೆಗಳ ಬಳಕೆ, ಸೂಕ್ತವಾಗಿ ಕಸ ವಿಲೇವಾರಿ, ಆರೋಗ್ಯ ಮತ್ತು ಪರಿಸರ ವ್ಯವಸ್ಥೆಯಡಿ ಆಹಾರ ಸಂರಕ್ಷಕಗಳ ಪ್ರಭಾವ ಎಂಬಿತ್ಯಾದಿ ಉಪ ವಿಷಯಗಳ ಕುರಿತು ವಿದ್ಯಾರ್ಥಿಗಳು ಮಂಡಿಸಿದ ವೈಜ್ಞಾನಿಕ ಪ್ರಬಂಧಗಳು ಗಮನ ಸೆಳೆದವು.
ವಿಜ್ಞಾನ ಸಮಾವೇಶದ ಸಂಘಟಕ ಹಾಗೂ ನೋಡಲ್ ಅಧಿಕಾರಿ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ಈ ಸಮಾವೇಶವು ಭವಿಷ್ಯದಲ್ಲಿ ಮಕ್ಕಳು ವಿಜ್ಞಾನಿಗಳಾಗಿ ರೂಪುಗೊಳ್ಳಲು ಸೂಕ್ತ ವೇದಿಕೆ ಕಲ್ಪಿಸುತ್ತದೆ ಎಂದು ತಿಳಿಸಿದರು.
ಎ.ಎಲ್.ಜಿ. ಕ್ರೆಸೆಂಟ್ ಶಾಲೆಯ ಪ್ರಾಂಶುಪಾಲರಾದ ಜಾಯ್ಸ್ ವಿನಯ ಮಾತನಾಡಿ, ಮಕ್ಕಳು ಎಳೆಯ ವಯಸ್ಸಿನಲ್ಲೇ ಇಂತಹ ಸಮಾವೇಶಗಳಲ್ಲಿ ಭಾಗವಹಿಸುವುದರಿಂದ ತಮ್ಮನ್ನು ಸಂಶೋಧನೆಯಲ್ಲಿ ತೊಡಗಿಸಿಕೊಂಡು ಭವಿಷ್ಯದಲ್ಲಿ ಉತ್ತಮ ವಿಜ್ಞಾನಿಗಳಾಗಿ ರೂಪುಗೊಳ್ಳಲು ಸಹಕಾರಿಯಾಗಿದೆ ಎಂದರು.
ಸಮಾವೇಶವನ್ನು ಕೇಂದ್ರ ಸರ್ಕಾರದ ವಿಜ್ಞಾನ ತಂತ್ರಜ್ಞಾನ ಸಂವಹನ ಮಂಡಳಿ ( ಎನ್.ಸಿ.ಎಸ್.ಟಿ.ಸಿ.), ರಾಜ್ಯ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ (ಕೆ- ಸ್ಟೆಪ್ಸ್ ), ಜಿಲ್ಲಾಡಳಿತ, ಕೊಡಗು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ, ಶಾಲಾ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಸಂಘಟಿಸಲಾಗಿತ್ತು.