ಮಡಿಕೇರಿ ಜ.4 : ಶ್ರೀ ಕಾವೇರಮ್ಮೆ ಕೊಡವ ಮತ್ತು ಅಮ್ಮಕೊಡವ ಹಿತರಕ್ಷಣಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ 10ನೇ ವರ್ಷದ ‘ಚಂಡಿಕಾ ಹೋಮ’ ಕಾವೇರಿ ಕ್ಷೇತ್ರ ಭಾಗಮಂಡಲದ ಟ್ರಸ್ಟ್ ನ ಜಾಗದಲ್ಲಿ ಜ.15 ರಂದು ನಡೆಯಲಿದೆ.
ಸುದ್ದಿ ಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಟ್ರಸ್ಟ್ ನ ಅಧ್ಯಕ್ಷರಾದ ಎಂ.ಬಿ.ದೇವಯ್ಯ, ಅಂದು ಸುಬ್ರಹ್ಮಣ್ಯ ಬೆಳ್ಳೂಕರಾಯ ಅವರ ನೇತೃತ್ವದಲ್ಲಿ ಬೆಳಗ್ಗೆ 7 ಗಂಟೆಗೆ ಶ್ರೀ ಗಣಪತಿ ಹೋಮ, ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ, ಶತರುದ್ರ ಪಠಣ ಹಾಗೂ ಚಂಡಿಕಾ ಹೋಮ ನಡೆಯಲಿದೆಯೆಂದು ಮಾಹಿತಿ ನೀಡಿದರು.
ಜಿಲ್ಲೆಯ ಕೊಡವ ಮತ್ತು ಅಮ್ಮಕೊಡವ ಜನಾಂಗ ಬಾಂಧವರು ಒಂದಾಗಿ ಸೇರಿ ಟ್ರಸ್ಟ್ ನ ಸಹಯೋಗದಲ್ಲಿ ಚಂಡಿಕಾ ಹೋಮವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಪುರಾಣಗಳಲ್ಲಿ ಪ್ರಸ್ತಾಪವಾಗಿರುವಂತೆ ಅಗಸ್ತ್ಯ ಮುನಿಗಳು ಮತ್ತು ಕಾವೇರಿಯ ನಡುವೆ ಕಲಹವೇರ್ಪಟ್ಟಾಗ ಕಾವೇರಿಯ ಪರವಾಗಿ ನಿಂತ ಕೊಡವರಿಗೆ ಮತ್ತು ಅಮ್ಮ ಕೊಡವರಿಗೆ ಅಗಸ್ತ್ಯ ಮುನಿಗಳು ಶಾಪ ನೀಡಿದ್ದರು. ಈ ಬಗ್ಗೆ ಅಷ್ಟಮಂಗಲ ಪ್ರಶ್ನೆಯಲ್ಲಿ ಬಂದ ಪರಿಹಾರ ಕ್ರಮಗಳಂತೆ ಕಾವೇರಿಯ ಕ್ಷೇತ್ರದಲ್ಲಿ ‘ಚಂಡಿಕಾ ಹೋಮ’ವನ್ನು ನಡೆಸಿಕೊಂಡು ಬರಲಾಗುತ್ತಿದೆ. ಶಾಪ ವಿಮೋಚನೆಗಾಗಿ ಮತ್ತಷ್ಟು ವರ್ಷಗಳ ಕಾಲ ಈ ಧಾರ್ಮಿಕ ಕಾರ್ಯಗಳು ನಡೆಯಬೇಕಾಗಿದೆಯೆಂದು ಹೇಳಿದರು.
ಸಮುದಾಯ ಭವನ- ಶ್ರೀ ಕಾವೇರಮ್ಮೆ ಕೊಡವ ಮತ್ತು ಅಮ್ಮ ಕೊಡವ ಹಿತರಕ್ಷಣಾ ಚಾರಿಟೇಬಲ್ ಟ್ರಸ್ಟ್ ನಿಂದ ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯದ ಮುಂಭಾಗದಲ್ಲಿ 47 ಸೆಂಟ್ ಜಾಗವನ್ನು ಖರೀದಿಸಲಾಗಿದೆ. ಈ ಜಾಗದಲ್ಲಿ ಸಮುದಾಯ ಭವನ ನಿರ್ಮಾಣದ ಚಿಂತನೆ ಇದ್ದು, ಈಗಾಗಲೆ ಉದ್ದೇಶಿತ ಕಾರ್ಯಯೋಜನೆಯನ್ನು ಅನುಷ್ಟಾನಗೊಳಿಸುವ ನಿಟ್ಟಿನಲ್ಲಿ ಸರ್ಕಾರವನ್ನು ಸಂಪರ್ಕಿಸಲಾಗಿದೆ. ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ ಬಿಡುಗಡೆಯಾಗಿರುವ 10 ಕೋಟಿ ಅನುದಾನದಲ್ಲಿ 1 ಕೋಟಿ ರೂ. ನಮ್ಮ ಉದ್ದೇಶಿತ ಯೋಜನೆಗೆ ದೊರಕುವ ಆಶಯವನ್ನು ಎಂ.ಬಿ. ದೇವಯ್ಯ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ಟ್ರಸ್ಟ್ ನ ಉಪಾಧ್ಯಕ್ಷರಾದ ಚೆಪ್ಪುಡಿರ ಎಂ. ಪೊನ್ನಪ್ಪ, ಕಾರ್ಯದರ್ಶಿ ಮುಕ್ಕಾಟೀರ ಎ. ನಾಣಯ್ಯ, ಟ್ರಸ್ಟಿ ಪಾಸುರ ಸಿ. ಕಾವೇರಪ್ಪ ಉಪಸ್ಥಿತರಿದ್ದರು.