ವಿರಾಜಪೇಟೆ ಜ.9 : ಅಂಕ ಗಳಿಸುವ ಉದ್ದೇಶದಿಂದ ಮಕ್ಕಳನ್ನು ವಿಪರೀತ ಒತ್ತಡಕ್ಕೆ ಸಿಲುಕಿಸುವುದು ಉತ್ತಮ ಬೆಳವಣಿಗೆಯಲ್ಲ ಎಂದು ವಿರಾಜಪೇಟೆ ತಾಲೂಕು ದಂಡಾಧಿಕಾರಿ, ತಹಶೀಲ್ದಾರ್ ಡಿ.ಅರ್ಚನಾಭಟ್ ಅಭಿಪ್ರಾಯಪಟ್ಟಿದ್ದಾರೆ.
ವಿರಾಜಪೇಟೆಯ ಬ್ರೈಟ್ ಪಬ್ಲಿಕ್ ಸ್ಕೂಲಿನ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಗಳನ್ನು ಉದ್ಘಾಟಿಸಿ, ಮಾತನಾಡಿದ ಅವರು, “ಪೋಷಕರು ತಾವು ಸ್ವತಃ ಬದುಕಿನಲ್ಲಿ ಏನೂ ಸಾಧನೆ ಮಾಡಲಿಲ್ಲ ಎಂಬ ಕಾರಣಕ್ಕೆ ತಮ್ಮ ಮಕ್ಕಳನ್ನು ಅನಾರೋಗ್ಯಕರ ಸ್ಪರ್ಧೆಗೆ ಒಡ್ಡಿ ಒತ್ತಡಕ್ಕೆ ಸಿಲುಕಿಸುವುದು ದುಷ್ಪರಿಣಾಮ ಉಂಟು ಮಾಡುತ್ತದೆ. ಅರ್ಹತೆ, ಆಸಕ್ತಿ ಮತ್ತು ಪ್ರತಿಭೆಗೆ ಅನುಸಾರವಾಗಿ ಮಕ್ಕಳು ಆಯಾ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡುತ್ತಾರೆ. ಗುರಿ ಮುಟ್ಟಲು ನಿರಂತರ ಪ್ರಯತ್ನ ಮತ್ತು ಜೀವನದಲ್ಲಿ ಸುಂದರ ಕನಸುಗಳನ್ನು ಕಾಣಬೇಕು. ಮಕ್ಕಳಿಗೆ ವಿನಾ ಕಾರಣ ಪರೋಕ್ಷ ದಿಗ್ಬಂಧನ ಹಾಕುವುದು ಉತ್ತಮವಲ್ಲ. ಪೋಷಕರು ಶಿಕ್ಷಣ ಸಂಸ್ಥೆಗಳೊಂದಿಗೆ ಹೊಂದಾಣಿಕೆ ಇಟ್ಟುಕೊಂಡಲ್ಲಿ ಸಂಸ್ಥೆಗಳು ಬೆಳವಣಿಗೆಯನ್ನು ಸಾಧಿಸಬಹುದು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೀಳಗಿ ಮಾತನಾಡಿ, ಮಕ್ಕಳು ಉತ್ತಮ ಅಂಕ ಪಡೆದು ಉನ್ನತ ಶಿಕ್ಷಣ ಹಾಗೂ ಸ್ಥಾನ-ಮಾನ ಗಳಿಸಬೇಕು ಎಂಬ ಅಭಿಲಾಷೆ ಪ್ರತಿಯೊಬ್ಬ ಪೋಷಕರಲ್ಲಿ ಇರುವುದು ಸಹಜ. ಆದರೆ ಹೆಚ್ಚಿನ ಅಂಕ ಗಳಿಸುವುದು ಮಾತ್ರ ಶಿಕ್ಷಣದ ಗುರಿಯಲ್ಲ. ಚಾರಿತ್ರ್ಯವಂತ ನೈತಿಕ ಪ್ರಜ್ಞೆ ಇರುವ ಪ್ರಜೆಗಳ ನಿರ್ಮಾಣ ಶಿಕ್ಷಣದ ಗುರಿಯಾಗಬೇಕು. ನಮ್ಮಲ್ಲಿರುವ ಮಾನವ ಸಂಪನ್ಮೂಲಗಳನ್ನು ಪ್ರಯೋಜನಕಾರಿಯಾಗಿ ಉಪಯೋಗಿಸಿದಲ್ಲಿ ದಾರಿದ್ರ್ಯ ಮತ್ತು ಬಡತನ ಇರುವುದಿಲ್ಲ. ಶಿಕ್ಷಣದ ಮೂಲಕ ಇದು ಸಾಧ್ಯವಾಗ ಬೇಕು.”ಎಂದರು.
ಪುರಸಭಾ ಸದಸ್ಯರುಗಳಾದ ಮುಹಮ್ಮದ್ ರಾಫಿ, ಎಸ್.ಹೆಚ್.ಮತೀನ್, ಸಮಾಜ ಸೇವಕರುಗಳಾದ ಡಾ||.ಬಾದ್‍ಷಾ, ನಿಯಾಝ್ ಅಹಮದ್, ಗೌರವ ಕಾರ್ಯದರ್ಶಿ ಪಿ.ಕೆ.ಅಬ್ದುಲ್ ರೆಹೆಮಾನ್ ಮಾತನಾಡಿದರು.
ಇಸ್ಲಾಮಿಕ್ ಸರ್ವಿಸ್ ಟ್ರಸ್ಟ್ ಅಧ್ಯಕ್ಷ ಕೆ.ಪಿ.ಕೆ.ಮುಹಮ್ಮದ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಮಿಥಿಲೇಶ್ ಕುಮಾರ್ ಶಾಲಾ ವರದಿಯನ್ನು ಮಂಡಿಸಿದರು. ಶಾಲಾ ಆಡಳಿತಾಧಿಕಾರಿ ಕೆ.ಟಿ.ಬಷೀರ್ ಸ್ವಾಗತಿಸಿದರು. ಶೈಕ್ಷಣಿಕ ವರ್ಷದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರುಗಳಿಗೆ ಪಾರಿತೋಷಕಗಳನ್ನು ನೀಡಲಾಯಿತು. ಪಿ.ಕೆ.ಸಮೀಜ್ ಖಿರಾಅತ್‍ನೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ಆಶಾ ಹಾಗೂ ಮಿಸ್ಬಾ ಫಾತಿಮಾ ನಿರೂಪಣೆ ಮಾಡಿದರು. ಸಮಾರಂಭದ ನಂತರ ವಿದ್ಯಾರ್ಥಿಗಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆಯಿತು.