ಮಡಿಕೇರಿ ನ.23 NEWS DESK : ಕೊಡಗು ಕೃಷಿ ವಿಜ್ಞಾನ ವೇದಿಕೆಯ ಬೆಳ್ಳಿ ಮಹೋತ್ಸವ ಅಂಗವಾಗಿ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ನ.26 ರಂದು ರೈತ ಮೇಳವನ್ನು ಆಯೋಜಿಸಲಾಗಿದೆ ಎಂದು ವೇದಿಕೆ ಅಧ್ಯಕ್ಷ ಡಾ.ಸಿ.ಜಿ.ಕುಶಾಲಪ್ಪ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಕೃಷಿ ವಿಜ್ಞಾನ ವೇದಿಕೆ 25 ವರ್ಷ ಪೂರೈಸಿದೆ. ಬೆಳ್ಳಿ ಮಹೋತ್ಸವ ಅಂಗವಾಗಿ ಅನವ್ರತ ಘೋಷವಾಕ್ಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಭತ್ತದ ಕೃಷಿ ಪುನಶ್ಚೇತನ, ಸುಸ್ಥಿರಢ ಕಾಫಿ ಕೃಷಿ, ಕೃಷಿ ವ್ಯವಸ್ಥೆಯ ವೈವಿಧ್ಯೀಕರಣ, ಕೃಷಿ ಅರಣ್ಯ, ಕೃಷಿ ವ್ಯಾಪರ ಸೇರಿದಂತೆ ವಿವಿಧ ವಿಷಯಗಳ ಚರ್ಚೆಗೆ ರೈತ ಮೇಳವನ್ನು ಆಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ ವಿವಿಧ ವಿಚಾರಗಳ ಕುರಿತು ವಿಚಾರ ಮಂಡನೆ, ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸಂವಾದ ನಡೆಯಲಿದೆ ಎಂದು ತಿಳಿಸಿದರು. ಯುವಜನತೆಯನ್ನು ಕೃಷಿಯತ್ತ ಸೆಳೆಯುವ ದೃಷ್ಠಿಯಿಂದ ಪೊನ್ನಂಪೇಟೆ ವ್ಯಾಪ್ತಿಯ 5 ಪದವಿ ಕಾಲೇಜಿನಿಂದ 10 ವಿದ್ಯಾರ್ಥಿಗಳಂತೆ 60 ವಿದ್ಯಾರ್ಥಿಗಳನ್ನು ಮೇಳಕ್ಕೆ ಆಹ್ವಾನಿಸಲಾಗಿದೆ. ಅಲ್ಲದೇ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸೋಮೆಯಂಗಡ ಗಣೇಶ್ ತಿಮ್ಮಯ್ಯ ಅವರ ಜಮೀನಿಗೆ ಕ್ಷೇತ್ರ ಭೇಟಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಅಂದು 10 ಗಂಟೆಗೆ ನಡೆಯುವ ರೈತಮೇಳವನ್ನು ಸರ್ಕಾರದ ಕೃಷಿ ನಿರ್ದೇಶಕ ಡಾ.ಜಿ.ಟಿ.ಪುತ್ರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕೊಡಗು ಕೃಷಿ ವಿಜ್ಞಾನ ವೇದಿಕೆಯ ಅಧ್ಯಕ್ಷ ಡಾ.ಸಿ.ಜಿ.ಕುಶಾಲಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಆರ್.ಸಿ.ಜಗದೀಶ್, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಡೀನ್ ಡಾ.ಜಿ.ಎಂ.ದೇವಗಿರಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು. ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ಉಪನ್ಯಾಸ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಕೃಷಿ ಮತ್ತು ವ್ಯಟನರಿ ವಿಶ್ವವಿದ್ಯಾಲಯಗಳಿಂದ ಆಯ್ಕೆಯಾದ ಓರ್ವ ವಿದ್ಯಾರ್ಥಿಗೆ ರೂ.25 ಸಾವಿರ ವಿದ್ಯಾರ್ಥಿ ವೇತನ ನೀಡಲಾಗುವುದು. ಮುಂದಿನ ವರ್ಷದಿಂದ ಕೃಷಿ ಹಾಗೂ ಸಂಬಂಧಿತ ಶಿಕ್ಷಣದಲ್ಲಿ ಸಾಧನೆ ತೋರುವ 4 ವಿದ್ಯಾರ್ಥಿಗಳಿಗೆ ತಲಾ ರೂ.25 ಸಾವಿರ ವಿದ್ಯಾರ್ಥಿ ವೇತನವನ್ನು ನೀಡಲು ನಿರ್ಧರಿಸಲಾಗಿದೆ. ಇದಕ್ಕಾಗಿ ಸಂಘದ ಸದಸ್ಯರೇ 15 ಲಕ್ಷದಷ್ಟು ಆರ್ಥಿಕ ನೆರವು ನೀಡಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಿಶ್ರಾಂತ ಕುಲಪತಿ ಡಾ.ಪಿ.ಜಿ.ಚಂಗಪ್ಪ, ಕರ್ನಾಟಕ ಸರ್ಕಾರದ ಮಾಜಿ ಕಾರ್ಯದರ್ಶಿ ಡಾ.ಜಿ.ಕೆ.ವಸಂತ್ ಕುಮಾರ್, ಕರ್ನಾಟಕ ಸರ್ಕಾರದ ಕೃಷಿ ನಿರ್ದೇಶಕ ಡಾ.ಪುತ್ರ, ಟಾಟಾ ಕಾಫಿ ವ್ಯವಸ್ಥಾಪಕ ನಿರ್ದೇಶಕ ಪಿ.ಎಂ.ಮಂದಣ್ಣ, ಕೃಷಿ ವಿಜ್ಞಾನ ವೇದಿಕೆ ಸ್ಥಾಪಕ ಅಧ್ಯಕ್ಷ ದಿ.ಡಾ.ಎಂ.ಜೆ ಬೋಪಯ್ಯ ಅವರ ಪರವಾಗಿ ಅವರ ಕುಟುಂಬವನ್ನು ಸನ್ಮಾನಿಸಲಾಗುವುದು ಎಂದು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಮಾಜಿ ಅಧ್ಯಕ್ಷ ಮಂಡೆಪಂಡ ಎ.ಕುಟ್ಟಣ್ಣ, ಕಾರ್ಯಕ್ರಮ ಸಂಚಾಲಕ ಅಜ್ಜಿರಂಡ ಚಂಗಪ್ಪ, ಉಪಾಧ್ಯಕ್ಷ ಹೆಚ್.ಎಸ್.ರಾಜಶೇಖರ್, ಕಾರ್ಯದರ್ಶಿ ಕೋಣೇರಿರ ನಾಣಯ್ಯ ಉಪಸ್ಥಿತರಿದ್ದರು.