ಮಡಿಕೇರಿ ನ.23 NEWS DESK : ಭಾರತೀಯ ವಿದ್ಯಾಭವನ -ಸ್ಪಿಕ್ ಮೆಕೆ ಕೊಡಗು ವತಿಯಿಂದ ಪ್ರಸಿದ್ಧ ಕಲಾವಿದ ಬಾಬುಲ್ ಅಲಿ ಅವರಿಂದ “ಜಿಕೀರ್, ಜಾರಿ ಮತ್ತು ನಾತೆ-ರಸುಲ್” ಗಾಯನ ಕಾರ್ಯಕ್ರಮವನ್ನು ನ.26 ರಂದು ಸಂಜೆ 6.30ಕ್ಕೆ ಮಡಿಕೇರಿಯ ಭಾರತೀಯ ವಿದ್ಯಾ ಭವನ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಪ್ರಸಿದ್ಧ ಗಾಯಕ ಬಾಬುಲ್ ಅಲಿ ಅವರು ಭಾರತದ ಅನನ್ಯ ಭಕ್ತಿಗೀತೆಗಳ ರೂಪವಾದ ಜಿಕೀರ್, ಜಾರಿ, ಮತ್ತು ನಾತೆ-ರಸುಲ್ ಪ್ರಕಾರಗಳನ್ನು ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಲಿದ್ದಾರೆ. ಈ ಅಧ್ಯಾತ್ಮ ಚಿಂತನೆಯ ಗೀತೆಗಳು ನಂಬಿಕೆ, ಭ್ರಾತೃತ್ವ, ಮತ್ತು ಸಹಬಾಳ್ವೆಯಂತಹ ವಿಶ್ವಮೌಲ್ಯಗಳನ್ನು ನೆನಪಿಸುವ ಅಪೂರ್ವ ಕಲೆಯ ರೂಪಗಳು. ಬಾಬುಲ್ ಅಲಿ ಅವರು 1980 ರಿಂದ 1985ರ ಅವಧಿಯಲ್ಲಿ ಗುರು ರೇಕಿಬುಡಿನ್ ಅಹ್ಮೆದ್ ಅವರ ಬಳಿ ತರಬೇತಿ ಪಡೆದಿದ್ದಾರೆ. ಆಕಾಶವಾಣಿ ಮತ್ತು ದೂರದರ್ಶನದ ಕಲಾವಿದರಾಗಿರುವ ಅವರು ತಮ್ಮ ಹುಟ್ಟೂರು ಅಸ್ಸಾಂನಲ್ಲಿ ಮಾತ್ರವಲ್ಲ, ದೇಶದ ಹಲವೆಡೆ, ವಿಶೇಷವಾಗಿ ರವೀಂದ್ರ ಭವನ (ಗುವಾಹಟಿ), ಸಂಗೀತ ನಾಟಕ ಅಕಾಡೆಮಿ, ಮತ್ತು ತೆಲಂಗಾಣ ರಾಜ್ಯೋತ್ಸವ (2015) ಕಾರ್ಯಕ್ರಮಗಳಲ್ಲಿ ತಮ್ಮ ಕಲಾಪ್ರದರ್ಶನವನ್ನು ನೀಡಿದ್ದಾರೆ. 17ನೇ ಶತಮಾನದ ಸಂತ ಅಜಾನ್ ಪೀರ್ ಅವರ ಗೀತೆಗಳ ಆಲ್ಬಮ್ ಬಿಡುಗಡೆ ಮಾಡಿದ್ದು, ಅವರ ಕುರಿತಾದ ವ್ಯಕ್ತಿಚಿತ್ರದಲ್ಲಿ ಭಾಗವಹಿಸಿರುವುದು ಇವರ ಪ್ರಮುಖ ಸಾಧನೆಯಾಗಿದೆ. ಅರೇಬಿಕ್ ಪದ ಜಿಕ್ರ್ (ಸ್ಮರಣೆ) ನಿಂದ ಪ್ರೇರೇಪಿತವಾಗಿರುವ’ಜಿಕೀರ್’ ಭಕ್ತಿಗೀತೆಗಳು ದೈಹಿಕ ಮತ್ತು ಆಧ್ಯಾತ್ಮಿಕ ಅಂಶಗಳನ್ನು ಬಹು ಸೂಕ್ಷ್ಮವಾಗಿ ಸುಶ್ರಾವ್ಯಗೊಳಿಸುತ್ತವೆ. ಅಜಾನ್ ಪೀರ್ ಅವರು ಈ ಗೀತೆಗಳನ್ನು ಪರಿಚಯಿಸಿದ್ದು, ಅಸ್ಸಾಂನ ಜನಪದ ಪರಂಪರೆಯ ವಿಶಿಷ್ಟ ರೂಪವಾಗಿದೆ. ಶೋಕಗೀತೆಗಳ ರೂಪವಾದ ‘ಜಾರಿ’ , ಕರ್ಬಲಾ ದುರಂತವನ್ನು ವಿವರಿಸುವ ಗೀತೆಗಳು. ಮುಹರಮ್ ಸಂದರ್ಭಗಳಲ್ಲಿ ವಿಶೇಷವಾಗಿ ಹಾಡಲಾಗುವ ಈ ಗೀತೆಗಳು ಸಹಾನುಭೂತಿ ಮತ್ತು ವಿಶ್ವ ಬಾಂಧವ್ಯವನ್ನು ಪ್ರೇರೇಪಿಸುತ್ತವೆ. ಅಜಾನ್ ಪೀರ್ ಅವರ 160 ಜಿಕೀರ್‌ಗಳಲ್ಲಿ 90 ಗೀತೆಗಳನ್ನು ಸಂಗ್ರಹಿಸಿರುವ ಸೈಯದ್ ಅಬ್ದುಲ್ ಮಾಲಿಕ್ ಅವರು ಈ ಕಲೆಯ ಉಳಿವಿಗೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಅಸ್ಸಾಂನ ಸಾಂಸ್ಕೃತಿಕ ಪರಂಪರೆಯ ಭಾಗವಾಗಿರುವ ಈ ಗೀತೆಗಳು, ಬಾಂಧವ್ಯ ಮತ್ತು ಸೌಹಾರ್ದತೆಯಂತಹ ಸೂಕ್ಷ್ಮ ಮೌಲ್ಯಗಳನ್ನು ಪ್ರತಿಬಿಂಬಿಸುತ್ತವೆ. ಬಾಬುಲ್ ಅಲಿ ಅವರ ಗಾಯನ ಎಲ್ಲ ವಯಸ್ಸಿನ ಪ್ರೇಕ್ಷಕರಿಗೆ ಮನಸ್ಸಿನ ಶಾಂತಿಯನ್ನು ನೀಡುವುದು ಮಾತ್ರವಲ್ಲ, ಭಾವನಾತ್ಮಕ ಮೌಲ್ಯಗಳನ್ನು ಎತ್ತಿ ಹಿಡಿಯಲು ನೆರವಾಗುತ್ತವೆ. ಕಾರ್ಯಕ್ರಮಕ್ಕೆ ಸರ್ವರಿಗೂ ಸ್ವಾಗತವಿದೆಯೆಂದು ಬಿವಿಬಿ ಕಾರ್ಯದರ್ಶಿ ಬಾಲಾಜಿ ಕಶ್ಯಪ್ ತಿಳಿಸಿದ್ದಾರೆ.