ಮಡಿಕೇರಿ ನ.23 NEWS DESK : ಹ್ಯೂಮನ್ ರೈಟ್ಸ್ ಇಂಟರ್ ನ್ಯಾಷನಲ್ ಫೆಡರೇಷನ್ ಸಂಸ್ಥೆಯ ಪ್ರಮುಖರು, ಹೊದ್ದೂರು ಗ್ರಾಮಸ್ಥರು ಹಾಗೂ ರೈತರು ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ ನಡೆಸಿದರು. ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಹಲವು ವರ್ಷಗಳಿಂದ ಕೃಷಿ ಇಲಾಖೆಗೆ ಸಂಬಂಧಿಸಿದ ಸರ್ಕಾರಿ ಕಟ್ಟಡ ಪಾಳುಬಿದ್ದಿದೆ. ಕಟ್ಟಡದ ಸುತ್ತಮುತ್ತ ಬೆಳೆದಿದ್ದ ಗಿಡಗಂಟಿಗಳನ್ನು ಗ್ರಾಮಸ್ಥರು ಹಾಗೂ ರೈತರು ಕಡಿದು, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತೆರವುಗೊಳಿಸಿದರು. ಈ ಸಂದರ್ಭ ಮಾತನಾಡಿದ ಹ್ಯೂಮನ್ ರೈಟ್ಸ್ ಇಂಟರ್ ನ್ಯಾಷನಲ್ ಫೆಡರೇಷನ್ ನ ರಾಜ್ಯಾಧ್ಯಕ್ಷ ಹರೀಶ್ ಜಿ.ಆಚಾರ್ಯ, ಹೊದ್ದೂರು ಗ್ರಾಮದ ಕಬಡಕೇರಿ ಗ್ರಾಮದಲ್ಲಿ ಗ್ರಾಮ ಸೇವಕರಿಗಾಗಿ ಹಲವು ವರ್ಷಗಳ ಹಿಂದೆ ಕೃಷಿ ಇಲಾಖೆಯಿಂದ ಕಚೇರಿ ನಿರ್ಮಿಸಲಾಗಿದ್ದು, ಇದೀಗ ಅದರ ನಿರ್ವಹಣೆ ಇಲ್ಲದೆ ಕಟ್ಟಡ ಪಾಳು ಬಿದ್ದಿದೆ. ಕಟ್ಟಡದ ಸುತ್ತಮುತ್ತ ಕಾಡು ಬೆಳೆದಿದ್ದು, ಹ್ಯೂಮನ್ ರೈಟ್ಸ್ ಇಂಟರ್ ನ್ಯಾಷನಲ್ ಫೆಡರೇಷನ್ ಸಹಯೋಗದಲ್ಲಿ ಗ್ರಾಮಸ್ಥರು, ರೈತರು ಸೇರಿ ಈ ಪ್ರದೇಶವನ್ನು ಸ್ವಚ್ಛಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ರೈತಾಪಿ ವರ್ಗಕ್ಕೆ ಕಟ್ಟಡ ನೆರವಾಗುವ ನಿಟ್ಟಿನಲ್ಲಿ ಇಲಾಖೆಯ ಗಮನ ಸೆಳೆಯಲಾಗುವುದು ಎಂದರು. ರೈತಾಪಿ ವರ್ಗಕ್ಕೆ ಸಹಾಯವಾಗುವ ಕೆಲಸವನ್ನು ಮಾಡಲು ಕೃಷಿ ಇಲಾಖೆ ಮುಂದಾಗಬೇಕು. ಕೊಡಗಿನ ಯಾವುದೇ ಗ್ರಾಮದಲ್ಲಿ ಈ ರೀತಿ ಸರ್ಕಾರಿ ಕಟ್ಟಡಗಳು ಪಾಳು ಬಿದ್ದಿದ್ದಲ್ಲಿ ಅವುಗಳಲ್ಲಿ ಮೋಜು ಮಸ್ತಿಗೆ ಅವಕಾಶ ನೀಡದೆ ಸ್ವಚ್ಛತಾ ಶ್ರಮದಾನ ನಡೆಸಿ ಬಳಸಿಕೊಳ್ಳುವಂತಾಗಬೇಕು ಎಂದು ತಿಳಿಸಿದರು. ಹೊದ್ದೂರು ಗ್ರಾಮಸ್ಥ ರಮೇಶ್ ಮಾತನಾಡಿ, ಹಲವು ದಿನಗಳ ಹಿಂದೆ ಈ ಕಟ್ಟಡ ಕುರಿತು ಇಲಾಖೆಯ ಗಮನ ಸೆಳೆಯಲಾಗಿದೆ. ಆದರೂ ಇಲಾಖಾಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಇರುವುದರಿಂದ ಗ್ರಾಮಸ್ಥರೆಲ್ಲ ಸೇರಿ ಶುಚಿಗೊಳಿಸಿರುವುದಾಗಿ ತಿಳಿಸಿದರು. ಹೊದ್ದೂರು ಗ್ರಾಮಸ್ಥ ಹಾಗೂ ಮಾಜಿ ಸೈನಿಕ ಚೆಟ್ಟಿಮಾಡ ಬಾಲಕೃಷ್ಣ ಮಾತನಾಡಿ, ಕಳೆದ 30 ವರ್ಷಗಳಿಂದ ಕಟ್ಟಡ ಪಾಳುಬಿದ್ದಿದ್ದು, ಸಂಬಂಧಪಟ್ಟ ಈ ಬಗ್ಗೆ ಗಮನಹರಿಸಿ ಗ್ರಾಮಸ್ಥರ ಉಪಯೋಗಕ್ಕೆ ಬಿಟ್ಟುಕೊಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭ ಸತೀಶ್, ಲಕ್ಷ್ಮಣ್, ವಾಸು ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.