ಮಡಿಕೇರಿ ಜ.11 : ಮಡಿಕೇರಿ ನಗರದ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ನೀಡಲಾಗುವ ಬಿಸಿಯೂಟದ ಅಕ್ಕಿಯಲ್ಲಿ ಪ್ಲಾಸ್ಟಿಕ್ ತುಂಡುಗಳು ಮಿಶ್ರಿತವಾಗಿದೆ ಎಂದು ಆರೋಪಿಸಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿದ್ದಾರೆ.
ಪ್ಲಾಸ್ಟಿಕ್ ಮಿಶ್ರಿತ ಅಕ್ಕಿಯಿಂದ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಆತಂಕ ವ್ಯಕ್ತಪಡಿಸಿರುವ ಅಧ್ಯಕ್ಷ ಆರ್.ಪಿ.ಚಂದ್ರಶೇಖರ್ ಅಕ್ಕಿಯನ್ನು ಸರಬರಾಜು ಮಾಡಿರುವ ಗುತ್ತಿಗೆದಾರನ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಮತ್ತು ಶಾಲೆಗೆ ಗುಣಮಟ್ಟದ ಅಕ್ಕಿಯನ್ನು ಪೂರೈಸಬೇಕು ಎಂದು ಒತ್ತಾಯಿಸಿದ್ದಾರೆ.
ತಪ್ಪಿದಲ್ಲಿ ವಿದ್ಯಾರ್ಥಿಗಳ ಪೋಷಕರ ಸಹಕಾರದೊಂದಿಗೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಬಿಸಿಯೂಟಕ್ಕಾಗಿ ದಾಸ್ತಾನಿರಿಸಿರುವ ಅಕ್ಕಿಯಲ್ಲಿ ಮಣಿಯ ರೂಪದ ಪ್ಲಾಸ್ಟಿಕ್ ತುಂಡುಗಳಿರುವುದು ಕಂಡು ಬಂದಿದೆ. ಅಕ್ಕಿಯನ್ನು ತೊಳೆಯುವಾಗ ನೀರಿನಲ್ಲಿ ತೇಲುತ್ತಿತ್ತು ಎಂದು ಚಂದ್ರಶೇಖರ್ ಅಪರ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಅವರ ಗಮನ ಸೆಳೆದರು. ಎಸ್ ಡಿ ಎಂ ಸಿ ಸದಸ್ಯ ದಿನೇಶ್ ಈ ಸಂದರ್ಭ ಹಾಜರಿದ್ದರು.



















