ಮಡಿಕೇರಿ ಜ.12 : ಇಂದಿನ ಯುವ ಜನಾಂಗವು ಉತ್ತಮವಾದ ದಾರಿಯಲ್ಲಿ ನಡೆದರೆ ಮಾತ್ರ , ಭವಿಷ್ಯದ ಭಾರತವನ್ನು ಸದೃಢವಾಗಿ ಕಟ್ಟಲು ಸಾಧ್ಯ ಎಂದು ಶಾಸಕ ಕೆ.ಜಿ.ಬೋಪಯ್ಯ ಕಿವಿ ಮಾತುಹೇಳಿಸದರು.
ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಅಂಗವಾಗಿ ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಆಂತರಿಕ ಗುಣಮಟ್ಟ ಭರವಸಾ ಕೋಶ , ಎನ್.ಎಸ್.ಎಸ್ ಘಟಕ ಹಾಗೂ ಜಿಲ್ಲಾಡಳಿತ, ಜಿ.ಪಂ ಕೊಡಗು , ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ ಮಡಿಕೇರಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕೊಡಗು ಜಿಲ್ಲಾ ಯುವ ಒಕ್ಕೂಟ , ವಿರಾಜಪೇಟೆ, ಸೋಮವಾರಪೇಟೆ , ಮಡಿಕೇರಿ ತಾಲ್ಲೂಕು ಯುವ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ನಡೆದ “ರಾಷ್ಟ್ರೀಯ ಯುವ ದಿನ” ಹಾಗೂ “ಯುವ ಸಪ್ತಾಹ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ಬಿ.ಪ್ರಸಾದ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಯಾವುದೇ ಆಸೆ ಆಮಿಷಗಳು , ಮಾದಕ ಚಟಗಳಿಗೆ ಒಳಗಾಗದೇ ಶಿಸ್ತುಬದ್ಧ ಹಾಗೂ ಸಂಯಮದ ಜೀವನವನ್ನು ನಡೆಸಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು .
ಕುಶಾಲನಗರ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಉಪನ್ಯಾಸಕ ಬಿ.ಆರ್. ಶಶಿಧರ್ ಮಾತನಾಡಿ, ಸ್ವಾಮಿ ವಿವೇಕಾನಂದರ ಜೀವನ , ಆದರ್ಶಗಳು , ಭಾರತೀಯ ತತ್ವಶಾಸ್ತ್ರ ಮತ್ತು ಸಂಸ್ಕೃತಿಯ ಪುನರುತ್ಥಾನಕ್ಕೆ ವಿವೇಕಾನಂದರ ಕೊಡುಗೆಗಳ ಕುರಿತಂತೆ ಸವಿಸ್ತಾರವಾಗಿ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪಾಂಶುಪಾಲ ಡಾ .ದಯಾನಂದ ಕೆ.ಸಿ, ತಮ್ಮ ‘ನಮ್ಮ ದೈನಂದಿನ ಸಾಮಾಜಿಕ ಜೀವನದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ವಿವೇಕಾನಂದರ ತತ್ವ, ಆದರ್ಶಗಳನ್ನು ತಿಳಿದುಕೊಂಡು, ಇಂದಿನ ನಾಗರೀಕ ಸಮಾಜ ಅರಿವು ಮೂಡಿಸುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ವಿರಾಜಪೇಟೆ ತಾಲ್ಲೂಕು ದಂಡಾಧಿಕಾರಿ ಅರ್ಚನಾ ಭಟ್ , ಪೊನ್ನಂಪೇಟೆ ತಾಲ್ಲೂಕು ದಂಡಾಧಿಕಾರಿ ಪ್ರಶಾಂತ್ , ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿ.ಟಿ.ವಿಸ್ಮಯಿ, ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ.ಸುಕುಮಾರ್ , ಕಾಲೇಜಿನ ಎನ್.ಎಸ್.ಎಸ್ . ಯೋಜನಾಧಿಕಾರಿ ಎಂ.ಬಿ.ದಿವ್ಯ, ಹಾಗೂ ಜಿಲ್ಲಾಡಳಿತ , ಜಿಲ್ಲಾ ಪಂಚಾಯತ್ , ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ , ಯುವ ಒಕ್ಕೂಟದ ವಿವಿಧ ಸದಸ್ಯರು, ಕಾಲೇಜಿನ ಬೋದಕ –ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಕಂದಾ ದೇವಯ್ಯ ಸ್ವಾಗತಿಸಿದರು. ಎಂ.ಬಿ.ದಿವ್ಯ ವಂದಿಸಿದರು.
ಇದೇ ವೇಳೆ ಸ್ವಾಮಿ ವಿವೇಕಾನಂದರ ಕುರಿತಂತೆ ಜಿಲ್ಲಾ ಮಟ್ಟದಲ್ಲಿ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧಾ ವಿಜೇತರಿಗೆ ಪ್ರಶಸ್ತಿಗಳನ್ನು ನೀಡಲಾಯಿತು . ಅಲ್ಲದೇ ವಿರಾಜಪೇಟೆ ‘ ನಾಟ್ಯಾಂಜಲಿ ನೃತ್ಯ ಸಂಸ್ಥೆಯ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.