ಮಡಿಕೇರಿ ಜ.12 : ಚಾಲನೆಯಲ್ಲಿದ್ದ ಹಿಟ್ಟಿನ ಗಿರಣಿ ಬೆಲ್ಟ್‌ಗೆ ಆಕಸ್ಮಿಕವಾಗಿ ತಾಯಿಯ ತಲೆ ಸಿಲುಕಿದಾಗ ಸಮಯ ಪ್ರಜ್ಞೆ ಮೆರೆದು ತಾಯಿಯ ಪ್ರಾಣ ಉಳಿಸಿದ ವಿದ್ಯಾರ್ಥಿ ದೀಕ್ಷಿತ್ (9) 2022-23ನೇ ಸಾಲಿನ ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ಪಾತ್ರನಾಗಿದ್ದಾನೆ.
ದೀಕ್ಷಿತ್ ತಾಯಿ ಅರ್ಪಿತಾ ಕೂಡೂರು ಗ್ರಾಮದ ಹಿಟ್ಟಿನ ಗಿರಣಿಯಲ್ಲಿ ಅಕ್ಕಿ ಪುಡಿ ಮಾಡಿಸುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಚಾಲನೆಯಲ್ಲಿದ್ದ ಗಿರಣಿಯ ಬೆಲ್ಟ್‌ಗೆ ಅವರ ತಲೆಗೆ ಸಿಲುಕಿಕೊಂಡು, ಜೋರಾಗಿ ಕಿರುಚಿಕೊಂಡರು. ಗಿರಣಿ ಪಕ್ಕದಲ್ಲಿ ಆಟವಾಡುತ್ತಿದ್ದ ಬಾಲಕ ದೀಕ್ಷಿತ್ ತಾಯಿಯ ಕೂಗು ಕೇಳಿಸಿಕೊಂಡು ಓಡಿ ಬಂದು ಹಿಟ್ಟಿನ ಗಿರಣಿಯ ವಿದ್ಯುತ್ ಸರಬರಾಜಿನ ಸ್ವಿಚ್ ಆಫ್ ಮಾಡುವ ಮೂಲಕ ಸಮಯ ಪ್ರಜ್ಞೆ ಮೆರೆದು ತಾಯಿಯನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದನು.
ದೆಹಲಿಯಲ್ಲಿ ಜ.26 ರಂದು ಗಣರಾಜ್ಯೋತ್ಸವ ಅಂಗವಾಗಿ ನಡೆಯಲಿರುವ 2022-23ನೇ ಸಾಲಿನ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ದೀಕ್ಷಿತ್ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಸ್ವೀಕರಿಸಲಿದ್ದಾನೆ ಎಂದು ಬಾಲಕನ ಪೋಷಕರು ತಿಳಿಸಿದ್ದಾರೆ. ಈತ ಇಲ್ಲಿನ ಕೂಡೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 3ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ.