ಮಡಿಕೇರಿ ಜ.12 : ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯು ಕೇಂದ್ರ ಸರ್ಕಾರದ ಮಹತ್ತರ ಯೋಜನೆಯಾಗಿದ್ದು, ಗ್ರಾಮೀಣ ಭಾಗದ ಜನರು ಮತ್ತು ಮಹಿಳೆಯರು ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ವಿರಾಜಪೇಟೆ ತಾಲೂಕು ಪಂಚಾಯಿತಿ ಇ.ಒ. ಕೆ.ಸಿ.ಅಪ್ಪಣ್ಣ ಕರೆ ನೀಡಿದರು.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ವಿರಾಜಪೇಟೆ ತಾಲ್ಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಮಹಿಳಾ ಸ್ವ ಸಹಾಯ ಸಂಘದ ಸದಸ್ಯರುಗಳಿಗೆ ನಡೆದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರಿಗೆ ನರೇಗಾ ಯೋಜನೆಯಲ್ಲಿ ಹಲವಾರು ಸೌಲಭ್ಯಗಳಿದ್ದು, ಅದರ ಸದುಪಯೋಗವನ್ನು ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕು. ಸ್ವಾವಲಂಬಿ ಬದುಕು ನಡೆಸಲು ನರೇಗಾ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ಸತೀಶ್ ಮಾತನಾಡಿ, ರಾಷ್ಟ್ರಪಿತ ಮಹಾತ್ಮಗಾಂಧಿ ಅವರ ಆಶಯದಂತೆ ಹಸಿವು ಮುಕ್ತ ಭಾರತವಾಗಬೇಕು. ಈ ನಿಟ್ಟಿನಲ್ಲಿ ನರೇಗಾ ಯೋಜನೆಯು ಗ್ರಾಮೀಣ ಭಾಗದ ಜನರಿಗೆ ಕನಿಷ್ಠ ಆರ್ಥಿಕ ವರ್ಷದಲ್ಲಿ 100 ದಿನಗಳ ಕೂಲಿ ನೀಡುತ್ತಿದ್ದು, ಪುರುಷ ಮತ್ತು ಮಹಿಳೆಯರಿಗೆ ಸಮಾನ ಕೂಲಿ ಇದ್ದು, ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ನೀಡುವಲ್ಲಿ ಯಶಸ್ವಿಯಾಗಿದೆ. ಅಲ್ಲದೆ ವೈಯಕ್ತಿಕ ಸೌಲಭ್ಯಗಳಾದ ದನದ ಕೊಟ್ಟಿಗೆ, ಕುರಿಶೇಡ್, ಆಡು ಕೊಟ್ಟಿಗೆ, ಹಂದಿಗೂಡು ಹೀಗೆ ಆರ್ಥಿಕ ಸ್ವಾವಲಂಬಿ ಬದುಕಿಗೆ ನರೇಗಾ ವರದಾನವಾಗಿದೆ ಎಂದು ತಿಳಿಸಿದರು.
ಕೃಷಿ ಇಲಾಖೆಯ ಅಧಿಕಾರಿ ರೀನಾ ಮಾತನಾಡಿ ನರೇಗಾ ಯೋಜನೆಯಲ್ಲಿ ಕೃಷಿ ಇಲಾಖೆಯಿಂದ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಕೃಷಿಹೊಂಡ, ಎರೆಹುಳು ಘಟಕ, ರೈತರ ಜಮೀನುಗಳಲ್ಲಿ ಮಳೆ ನೀರಿನ ಸಂಗ್ರಹಣೆಗಾಗಿ ಬದುಗಳ ನಿರ್ಮಾಣವಾಗಿದ್ದು ರೈತರಿಗೆ ನರೇಗಾ ಯೋಜನೆಯು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ನೆರವಾಗಿದೆ ಎಂದು ಮಾಹಿತಿ ನೀಡಿದರು.
ತೋಟಗಾರಿಕೆ ಇಲಾಖೆಯ ಅಧಿಕಾರಿ ರಮೇಶ್ ಮಾತನಾಡಿ, ನರೇಗಾ ಯೋಜನೆಯಡಿ ಮಹಿಳಾ ಸ್ವ ಸಹಾಯ ಸಂಘದ ಮಹಿಳೆಯರು ನರ್ಸರಿಗಳನ್ನು ನಿರ್ಮಾಣ ಮಾಡಿಕೊಂಡಿದ್ದು ಹಾಗೂ ರೈತರಿಗೆ ಅಡಿಕೆ, ಮೆಣಸು, ಕಿತ್ತಲೆ ಕೃಷಿ ಮಾಡಲು ನರೇಗಾ ಯೋಜನೆಯಲ್ಲಿ ಅವಕಾಶವಿದೆ ಎಂದು ಮಾಹಿತಿ ನೀಡಿದರು.
ಸ್ವಚ್ಛ ಭಾರತ್ ಮಿಷನ್ ಸಂಯೋಜಕ ಸೂರಜ್ ಮಾತನಾಡಿ, ನರೇಗಾ ಯೋಜನೆಯಡಿ ಗ್ರಾಮೀಣ ಭಾಗದ ಮನೆ ಮನೆಗಳಿಗೂ ಸೋಕ್ ಫೀಟ್‍ಗಳು ನಿರ್ಮಾಣಗೊಂಡಿದ್ದು, ಸಾಂಕ್ರಾಮಿಕ ರೋಗಗಳು ಬಾರದಂತೆ ತಡೆಯಲು ಸಹಕಾರಿಯಾಗಿದೆ ಎಂದು ತಿಳಿಸಿದರು.
ನರೇಗಾ ತಾಲ್ಲೂಕು ಐ.ಇ.ಸಿ.ಸಂಯೋಜಕ ನರೇಂದ್ರ, ನರೇಗಾ ಯೋಜನೆಯ ಕುರಿತು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕರಾದ ಸ್ವರೂಪ, ಯಶೋಧ, ತಾಂತ್ರಿಕ ಸಂಯೋಜ ನಿರಂಜನ್, ತಾಂತ್ರಿಕ ಸಹಾಯಕ ಅಭಿಯಂತರ ವಿವೇಕ್, ಎನ್‍ಆರ್‍ಎಲ್‍ಎಂ ಯೋಗೇಶ್, ಮಹಿಳಾ ಸ್ವ ಸಹಾಯ ಸಂಘದ ಮಹಿಳೆಯರು ಹಾಗೂ ಇತರರು ಹಾಜರಿದ್ದರು.