ಮಡಿಕೇರಿ ಏ.25 NEWS DESK : ಗುರುವಾರ ಕೊನೆಯುಸಿರೆಳೆದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಬೊಟ್ಟೋಳಂಡ ಮಿಟ್ಟು ಚಂಗಪ್ಪ ಅವರ ಅಂತಿಮ ಸಂಸ್ಕಾರ ಇಂದು ನೂರಾರು ಅಭಿಮಾನಿಗಳ ಸಮ್ಮುಖದಲ್ಲಿ ನಗರದಲ್ಲಿ ನಡೆಯಿತು. ಸಚಿವ ಕೆ.ಜೆ.ಜಾರ್ಜ್ ಅವರು ನಗರಕ್ಕಾಗಮಿಸಿ, ಇಲ್ಲಿನ ಸ್ಟೀವರ್ಟ್ ಹಿಲ್ ಬಳಿಯ ಮನೆಯಲ್ಲಿ ತಮ್ಮ ಸ್ನೇಹಿತ ಮಿಟ್ಟು ಚಂಗಪ್ಪ ಅವರ ಅಂತಿಮ ದರ್ಶನ ಪಡೆದು ಗೌರವ ನಮನ ಸಲ್ಲಿಸಿದರು ಮತ್ತು ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು. ಬೆಳಗ್ಗೆ 10 ಗಂಟೆಗೆ ಗಾಂಧಿ ಮೈದಾನಕ್ಕೆ ಮಿಟ್ಟು ಚಂಗಪ್ಪ ಅವರ ಪಾರ್ಥಿವ ಶರೀರವನ್ನು ಸ್ಥಳಾಂತರಿಸಿ, ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಬೋಸ್‍ರಾಜು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರ ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ, ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ಅರಕಲಗೋಡು ಶಾಸಕ ಎ.ಮಂಜು, ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್, ಬಿಜೆಪಿಯ ಮಾಜಿ ಶಾಸಕರಾದ ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ರಾಜ್ಯ ಉಚ್ಚ ನ್ಯಾಯಾಲಯದ ವಕೀಲರಾದ ಹೆಚ್.ಎಸ್.ಚಂದ್ರಮೌಳಿ, ಕಾಫಿ ಬೆಳೆಗಾರರು ಹಾಗೂ ಉದ್ಯಮಿಗಳಾದ ವಿನೋದ್ ಶಿವಪ್ಪ ಸೇರಿದಂತೆ ಕಾಂಗ್ರೆಸ್ ಪಕ್ಷದ ಪ್ರಮುಖರು ಹಾಗೂ ಸಾರ್ವಜನಿಕರು ಮಿಟ್ಟು ಚಂಗಪ್ಪ ಅವರಿಗೆ ಅಂತಿಮ ಗೌರವ ಸಲ್ಲಿಸಿದರು. ಮಿಟ್ಟು ಚಂಗಪ್ಪ ಅವರು ಅತ್ಯಂತ ಸರಳ ಸಜ್ಜನಿಕೆಯ ರಾಜಕಾರಣಿಯಾಗಿದ್ದು, ಅವರ ಅಗಲಿಕೆ ಪಕ್ಷ ಮತ್ತು ಕೊಡಗು ಜಿಲ್ಲೆಗೆ ನಷ್ಟ ಉಂಟು ಮಾಡಿದೆ ಎಂದು ಕಾಂಗ್ರೆಸ್ ಸಚಿವರು ಹಾಗೂ ಶಾಸಕರು ಸಂತಾಪ ಸೂಚಿಸಿದರು. ಮಿಟ್ಟು ಚಂಗಪ್ಪ ಓರ್ವ ಹೃದಯ ಶ್ರೀಮಂತಿಕೆಯ ರಾಜಕಾರಣಿ, ಪಕ್ಷ ಭೇದವಿಲ್ಲದೇ ರಾಜಕೀಯ ರಹಿತವಾಗಿ ಸ್ನೇಹ ಸಂಪಾದಿಸಿದ ಸ್ನೇಹ ಜೀವಿಯಾಗಿದ್ದರು ಎಂದು ಬಿಜೆಪಿ ಮಾಜಿ ಶಾಸಕರು ಅವರ ಜೊತೆಗಿನ ಒಡನಾಟ, ಸ್ನೇಹ ಪರತೆಯನ್ನು ಸ್ಮರಿಸಿದರು.
:: ಅಂತ್ಯಕ್ರಿಯೆ :: ಮಧ್ಯಾಹ್ನದ ಬಳಿಕ ಪಾರ್ಥಿವ ಶರೀರವನ್ನು ನಗರದ ಚೈನ್ ಗೇಟ್ ಬಳಿ ಇರುವ ಕೊಡವ ಸಮಾಜದ ರುದ್ರಭೂಮಿಗೆ ಕೊಂಡೊಯ್ದು ಕೊಡವ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ವೇಳೆ ಮಿಟ್ಟು ಚಂಗಪ್ಪ ಅವರ ಪತ್ನಿ ಯಶಿ ಚಂಗಪ್ಪ, ಪುತ್ರಿಯರಾದ ಕಾವ್ಯ, ಕೃತಿ ಸೇರಿದಂತೆ ಕುಟುಂಬ ವರ್ಗ, ಬಂಧು ಮಿತ್ರರು ಹಾಜರಿದ್ದರು.












