ಮಡಿಕೇರಿ ಜ.20 : ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮದಿಂದ 2022-23 ನೇ ಸಾಲಿನ ಗಂಗಾ ಕಲ್ಯಾಣ ನೀರಾವರಿ ಯೋಜನೆಯನ್ನು ಸರ್ಕಾರದ ಆದೇಶದಂತೆ 2023 ರ ಜನವರಿ, 13 ರ ಪ್ರಕಾರ ಅನುಷ್ಠಾನಗೊಳಿಸುತ್ತಿದ್ದು, ಪ್ರವರ್ಗ-1 ರಡಿಯಲ್ಲಿ ಬರುವ ಉಪ್ಪಾರ ಮತ್ತು ಇದರ ಉಪಜಾತಿಗೆ ಒಳಪಡುವ ಅರ್ಹ ಫಲಾಪೇಕ್ಷಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಫಲಾಪೇಕ್ಷಿಗಳು ಜನವರಿ, 17 ರಿಂದ ಮಾರ್ಚ್, 02 ರವರೆಗೆ ಸೇವಾಸಿಂಧು ಪೋರ್ಟಲ್ ಮುಖಾಂತರ ಗ್ರಾಮ ಒನ್, ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದು.
ಗಂಗಾ ಕಲ್ಯಾಣ ನೀರಾವರಿ ಯೋಜನೆಯಡಿ ಉಪ್ಪಾರ ಮತ್ತು ಇದರ ಉಪಜಾತಿಯ ಸಮಾಜದ ಸಣ್ಣ ಮತ್ತು ಅತಿ ಸಣ್ಣ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸುವುದು. ಘಟಕ ವೆಚ್ಚವು 2.50 ಲಕ್ಷ ರೂ.ಗಳಾಗಿದೆ. ಇದರಲ್ಲಿ ರೂ.2 ಲಕ್ಷಗಳ ಸಹಾಯಧನ ಮತ್ತು ಹೆಚ್ಚುವರಿಯಾಗಿ ಅಗತ್ಯವಿದ್ದಲ್ಲಿ ರೂ.50 ಸಾವಿರಗಳ ಸಾಲವನ್ನು ವಾರ್ಷಿಕ ಶೇ.4 ರ ಬಡ್ಡಿ ದರದಲ್ಲಿ 3 ವರ್ಷಗಳ ಮರುಪಾವತಿ ಅವಧಿಯೊಂದಿಗೆ ನೀಡಲಾಗುತ್ತದೆ.
ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು. ಕೇಂದ್ರ ಆಧಾರ್ ಅಧಿನಿಯಮ, 2016 ಸೆಕ್ಷನ್(7) ರಡಿ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಅರ್ಜಿದಾರರ ಹೆಸರು, ಆಧಾರ್ ಕಾರ್ಡ್, ಜಾತಿ, ಆದಾಯ ಪ್ರಮಾಣ ಪತ್ರ ಮತ್ತು ಬ್ಯಾಂಕ್ ಖಾತೆಗಳಲ್ಲಿ ಹೊಂದಾಣಿಕೆ ಆಗಿರಬೇಕು. ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಕಡ್ಡಾಯವಾಗಿದೆ. ನಿಗಮದ/ ಸರ್ಕಾರದ ಯಾವುದಾದರೂ ಯೋಜನೆಗಳಡಿ ಈ ಹಿಂದೆ ಸೌಲಭ್ಯ ಪಡೆದಿರಬಾರದು. ಕುಟುಂಬದ ಒಬ್ಬರಿಗೆ ಮಾತ್ರ ಸೌಲಭ್ಯ ಒದಗಿಸಲಾಗುವುದು. ಸರ್ಕಾರ/ ನಿಗಮವು ಕಾಲಕಾಲಕ್ಕೆ ವಿಧಿಸುವ ಇನ್ನಿತರ ಅರ್ಹತೆ/ ನಿಬಂಧನೆಗಳನ್ನು ಹೊಂದಿದವರಾಗಿರಬೇಕು.
ಅನುದಾನದ ಲಭ್ಯತೆಗೆ ಅನುಗುಣವಾಗಿ ಯೋಜನೆಯನ್ನು/ ಸೌಲಭ್ಯವನ್ನು ಸರ್ಕಾರದ ಆದೇಶದಂತೆ ಜಾರಿಗೊಳಿಸುವುದು. ಯೋಜನೆಗಳ ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆಗಳಾದಲ್ಲಿ ಆ ದಿನಾಂಕದಿಂದ ಜಾರಿಗೆ ಬರುವಂತೆ ಯೋಜನೆಯನ್ನು ಜಾರಿಗೊಳಿಸಲಾಗುವುದು. ಸೇವಾಸಿಂಧು ತಂತ್ರಾಂಶದ ಮೂಲಕ ಮಾತ್ರವೇ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ನಿಗಮದ ವೆಬ್‍ಸೈಟ್ https://upparadevelopment.karnataka.gov.in ಇಲ್ಲಿ ಸಂಪರ್ಕಿಸಿ ಪಡೆಯಬಹುದು. ಅಥವಾ ನಿಗಮದ ಸಹಾಯವಾಣಿ ಸಂಖ್ಯೆ 7026288888 ನ್ನು ಸಂಪರ್ಕಿಸಬಹುದು. ಅಥವಾ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಕೊಡಗು ಜಿಲ್ಲೆ, ಮಡಿಕೇರಿ ದೂ.ಸಂ.08272-221656 ನ್ನು ಕಚೇರಿ ವೇಳೆಯೊಲ್ಲಿ ಸಂಪರ್ಕಿಸಬಹುದು. ಮಾರ್ಚ್, 02 ರವರೆಗೆ ಸೇವಾಸಿಂಧು ಪೋರ್ಟಲ್ ಮುಖಾಂತರ ಗ್ರಾಮ ಒನ್, ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.









