ಮಡಿಕೇರಿ ಜ.22 : ಎರಡು ಗೋವುಗಳನ್ನು ಹತ್ಯೆ ಮಾಡಿ ಕಳೇಬರವನ್ನು ಕಾಫಿ ತೋಟದಲ್ಲಿ ಹೂತಿಟ್ಟಿದ್ದ ಆರೋಪದಡಿ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಗರಗಂದೂರು ಸಮೀಪದ ಹಾರಂಗಿ ಹಿನ್ನೀರು ಬಳಿಯ ಲತೀಫ್ ಎಂಬುವವರ ಕಾಫಿ ತೋಟದಲ್ಲಿ ಎರಡು ದಿನಗಳ ಹಿಂದೆ ಗೋವುಗಳನ್ನು ಹತ್ಯೆ ಮಾಡಲಾಗಿತ್ತು ಎಂದು ಆರೋಪಿಸಲಾಗಿದೆ.
ಹಿಂದೂ ಜಾಗರಣಾ ವೇದಿಕೆ ನೀಡಿದ ದೂರಿನ ಹಿನ್ನೆಲೆ ಸ್ಥಳಕ್ಕೆ ಬಂದ ಪೊಲೀಸರು ಮಣ್ಣಿನಡಿ ಇದ್ದ ಗೋವಿನ ಕಳೇಬರದ ತ್ಯಾಜ್ಯಗಳನ್ನು ಹೊರ ತೆಗೆದರು. ಸ್ಥಳ ಮಹಜರು ನಡೆಸಿದ ನಂತರ ಪ್ರಕರಣ ದಾಖಲಿಸಿಕೊಂಡರು.
ಸುಂಟಿಕೊಪ್ಪ ಪೋಲೀಸ್ ಠಾಣಾ ಅಪರಾಧ ವಿಭಾಗದ ಠಾಣಾಧಿಕಾರಿ ಸ್ವಾಮಿ, ಸಿಬ್ಬಂದಿಗಳಾದ ಸತೀಶ್, ಜಗದೀಶ್, ಶ್ರೀಕಾಂತ್, ಬಿರದಾರ ಹಾಗೂ ಜೈಶಂಕರ್ ಸ್ಥಳ ಪರಿಶೀಲನೆ ನಡೆಸಿದರು.
ಸ್ಥಳದಲ್ಲಿ ಜಮಾಯಿಸಿದ್ದ ಹಿಂದೂ ಜಾಗರಣಾ ವೇದಿಕೆಯ ಪ್ರಮುಖರು ಘಟನೆಯನ್ನು ತೀವ್ರವಾಗಿ ಖಂಡಿಸಿದರು. ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಜಿಲ್ಲೆಯಲ್ಲಿ ಗೋವುಗಳ ಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದೆ. ಪೊಲೀಸರು ಗೋಹತ್ಯೆಯನ್ನು ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ ಎಂದು ವೇದಿಕೆಯ ಜಿಲ್ಲಾ ಸಂಚಾಲಕ ಕುಕ್ಕೇರ ಅಜಿತ್, ಪ್ರಮುಖರಾದ ಸುಭಾಷ್ ತಿಮ್ಮಯ್ಯ ಹಾಗೂ ರಂಜನ್ ಗೌಡ ಆರೋಪಿಸಿದರು.
ಎರಡು ಗೋವುಗಳನ್ನು ಹತ್ಯೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ವೇದಿಕೆಯ ಜಿಲ್ಲಾ ಸಮಿತಿಯ ಸುನಿಲ್ ಮಾದಾಪುರ, ವಿನು ಕುಮಾರ್, ಚಿದು, ಸುನಿಲ್, ರಾಜೇಶ್ ಸೇರಿದಂತೆ ಹೊಸತೋಟದ ಕಾರ್ಯಕರ್ತರು ಹಾಜರಿದ್ದರು.















