ಮಡಿಕೇರಿ ಜ.22 : ಪತ್ರಕರ್ತರು ನಿರ್ಭೀತಿಯಿಂದ ಕಾರ್ಯನಿರ್ವಹಿಸುವ ಮೂಲಕ ವ್ಯವಸ್ಥೆಯೊಳಗಿನ ತಪ್ಪನ್ನು ತಿದ್ದುವ ಕೆಲಸ ಮಾಡಬೇಕು ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಬೇಕೆಂದು ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಕರೆ ನೀಡಿದ್ದಾರೆ.
ಕೊಡಗು ಪ್ರೆಸ್‌ಕ್ಲಬ್ ಬೆಳ್ಳಿಹಬ್ಬದ ಹಿನ್ನೆಲೆಯಲ್ಲಿ ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಭಾನುವಾರ ನಡೆದ ಕೊಡಗು ಪ್ರೆಸ್ ಕ್ಲಬ್ ಪ್ರೀಮಿಯರ್ ಲೀಗ್ – 3 ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗ ತಪ್ಪು ದಾರಿ ತುಳಿದರೆ ಎಚ್ಚರಿಸುವ ಕೆಲಸ ಪತ್ರಿಕಾರಂಗ ಮಾಡುತ್ತಿದೆ. ಒತ್ತಡದಲ್ಲಿರುವ ಪತ್ರಕರ್ತರಿಗೆ ಕ್ರೀಡಾಕೂಟಗಳು ದೈಹಿಕ ಹಾಗೂ ಮಾನಸಿಕ ಉಲ್ಲಾಸ ನೀಡುತ್ತದೆ. ಪತ್ರಕರ್ತರ ಪ್ರತಿಭೆ ಅನಾವರಣಕ್ಕೆ ಅವಕಾಶ ಕಲ್ಪಿಸುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ ಮಾತನಾಡಿ, ಪತ್ರಿಕಾರಂಗ ಆಡಳಿತ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ವ್ಯವಸ್ಥೆಯ ಲೋಪದೋಷ, ಅನ್ಯಾಯ, ಅನಾಚಾರ ಬಯಲಿಗೆಳೆಯುವ ವ್ಯವಸ್ಥೆ ಪತ್ರಿಕಾರಂಗದಲ್ಲಿದೆ. ಸಮಾಜದ ನೈಜಸ್ಥಿತಿ ತಿಳಿಸುತ್ತಾ ಒಳಿತು, ಕೆಡುಕುಗಳಿಗೆ ಸಾಕ್ಷಿಯಾಗುವ ಪತ್ರಕರ್ತರನ್ನು ಸೈನಿಕರಿಗೆ ಹೋಲಿಸಬಹುದು ಎಂದು ಅಭಿಪ್ರಾಯಪಟ್ಟರು.
ಮುಳಿಯ ಜ್ಯುವೆಲ್ಸ್ ಮಡಿಕೇರಿ ಶಾಖೆ ವ್ಯವಸ್ಥಾಪಕ ತೀತಿಮಾಡ ಸೋಮಣ್ಣ ಮಾತನಾಡಿ ಕ್ರೀಡೆ ನವೋಲ್ಲಾಸ ತುಂಬುತ್ತದೆ, ದುಶ್ಚಟಗಳನ್ನು ದೂರ ಮಾಡುತ್ತದೆ ಎಂದರು.
ಕೊಡಗು ಪ್ರೆಸ್‌ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೊಡಗು ಪ್ರೆಸ್‌ಕ್ಲಬ್ ಪ್ರಧಾನ ಕಾರ್ಯದರ್ಶಿ ರೆಜಿತ್ ಕುಮಾರ್ ಗುಹ್ಯ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಉಪಾಧ್ಯಕ್ಷ ಸುಬ್ರಹ್ಮಣಿ ಸ್ವಾಗತಿಸಿ, ಚಂದ್ರಮೋಹನ್ ವಂದಿಸಿದರು.















