ಮಡಿಕೇರಿ ಜ.24 : ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾದ ಮಡಿಕೇರಿ ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಅಧ್ಯಕ್ಷರಾಗಿ ಎ.ಎ.ಅಯ್ಯಣ್ಣ ಅಧಿಕಾರ ಸ್ವೀಕರಿಸಿದರು.
ನಗರದಲ್ಲಿ ನಡೆದ ಸಂಘದ ಸಭೆಯಲ್ಲಿ ಉಪಾಧ್ಯಕ್ಷರಾಗಿ ಕೆ.ಬಿ.ವಿಜಯಕುಮಾರ್ ಹಾಗೂ ಪಿ.ಕೆ.ನಾಗೇಶ್, ಕಾರ್ಯಾಧ್ಯಕ್ಷರಾಗಿ ಬಿ.ಎಂ.ರಾಜಶೇಖರ್, ಖಜಾಂಚಿಯಾಗಿ ಕೆ.ಎಂ.ರವೀಂದ್ರನ್ ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ಡಿ.ಪಿ.ದಯಾನಂದ ಅಧಿಕಾರ ವಹಿಸಿಕೊಂಡರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ನೂತನ ಅಧ್ಯಕ್ಷ ಎ.ಎ.ಅಯ್ಯಣ್ಣ, ವಿಶ್ವವ್ಯಾಪಿ ಹೆಸರುವಾಸಿಯಾಗಿರುವ ಸಂಘದ ಮಡಿಕೇರಿ ಘಟಕದ ಅಭ್ಯುದಯಕ್ಕಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು.
ತಮಗೆ ಅಧ್ಯಕ್ಷ ಸ್ಥಾನ ನೀಡಿದ ಸರ್ವರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
2018 ರ ಅತಿವೃಷ್ಟಿಯಿಂದ ಇಲ್ಲಿಯವರೆಗೆ ಚಾರಣ ನಡೆಸಲು ಸಾಧ್ಯವಾಗಿರಲಿಲ್ಲ. ಪ್ರಸ್ತುತ ನರಿಮಲೆ ಮತ್ತು ಪಕ್ಷಿ ಪಾತಾಳಕ್ಕೆ ಚಾರಣ ಆಯೋಜಿಸಲು ಸಭೆ ನಿರ್ಧರಿಸಿತು.
ಸಹಕಾರ್ಯದರ್ಶಿ ಎಂ.ಕೆ.ಮನೋಹರ್ ವಂದಿಸಿದರು. ಕಾರ್ಯಕಾರಿ ಸಮಿತಿಯ 9 ಸದಸ್ಯರು ಸೇರಿದಂತೆ ಇತರ ಸದಸ್ಯರು ಉಪಸ್ಥಿತರಿದ್ದರು.















