ಸೋಮವಾರಪೇಟೆ ಜ.24 : ಬಿಜೆಪಿ ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಕಾಂಗ್ರೆಸ್‌ನಲ್ಲಿ ಕಮಲ ಕಾಂಗ್ರೆಸಿಗರದ್ದೇ ಕಾರುಬಾರು, ಮುಸ್ಲಿಂ ಸಮುದಾಯ ಕಾಂಗ್ರೆಸ್‌ಗೆ ಮತ ನೀಡಿದರೆ ಕೋಮುವಾದಿ ಬಿಜೆಪಿಗೆ ಮತ ನೀಡಿದಂತೆ ಎಂದು ಹಾಸನ ಲೋಕಸಭಾ ಕ್ಷೇತ್ರದ ಸದಸ್ಯ ಹಾಗೂ ಜೆಡಿಎಸ್ ಮುಖಂಡ ಪ್ರಜ್ವಲ್ ರೇವಣ್ಣ ಹೇಳಿದರು.
ಜೆಡಿಎಸ್ ಕ್ಷೇತ್ರ ಸಮಿತಿ ವತಿಯಿಂದ ಪಟ್ಟಣದ ಒಕ್ಕಲಿಗರ ಸಮುದಾಯಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಬಿಜೆಪಿ ಕೋಮುವಾದಿಗಳು ಬುರ್ಕಾ ಧರಿಸಿದ ಮುಸ್ಲಿಂ ಹೆಣ್ಣುಮಕ್ಕಳನ್ನು ಅಟ್ಟಿಸಿಕೊಂಡು ಹೋದ ಸಂದರ್ಭದಲ್ಲೂ ಕಾಂಗ್ರೆಸ್ ರಾಜ್ಯಾಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಬಾಯಿಗೆ ಬೀಗ ಹಾಕಿಕೊಂಡಿದ್ದರು. ಯಾರು ಮಾತನಾಡದಂತೆ, ಹೇಳಿಕೆ ಕೊಡದಂತೆ ಕಟ್ಟಾಪ್ಪಣೆ ಕೊಟ್ಟಿದರು. ಆದರೆ ಎಚ್.ಡಿ.ಕುಮಾರಸ್ವಾಮಿ, ಮುಸ್ಲಿಂ ಮಹಿಳೆಯರ ಪರವಾಗಿ ಹೇಳಿಕೆ ನೀಡಿ ಅವರಿಗೆ ಮಾನಸಿಕ ಧೈರ್ಯ ತುಂಬಿದರು ಎಂದರು.
ರಾಜ್ಯದಲ್ಲಿ ಜಾತ್ಯಾತೀತ ಜನತಾದಳ ಅಧಿಕಾರಕ್ಕೆ ಬಂದು, ಮುಂದಿನ ಮೂರು ತಿಂಗಳಲ್ಲಿ ರಾಜ್ಯದ ರೈತರು ಮತ್ತು ಸ್ತ್ರೀಶಕ್ತಿ ಸಂಘಗಳ ಸದಸ್ಯರ ಸಂಪೂರ್ಣ ಸಾಲವನ್ನು ಮನ್ನಾ ಮಾಡಲು ಎಚ್.ಡಿ.ಕುಮಾರಸ್ವಾಮಿಯವರು ಮಾತುಕೊಟ್ಟಿದ್ದಾರೆ. ಮಾತಿನಂತೆ ನಡೆಯುವುದು ಜೆಡಿಎಸ್ ಹೆಗ್ಗಳಿಕೆ ಎಂದರು.
ಪಕ್ಷದ ಹಿರಿಯ ಮುಖಂಡರಾದ ಹೆಚ್.ಡಿ.ದೇವೆಗೌಡರು, ಎಚ್.ಡಿ.ಕುಮಾರಸ್ವಾಮಿ ಹಾಗು ಎಚ್.ಡಿ.ರೇವಣ್ಣ ಅವರು ಕೊಟ್ಟ ಭರವಸೆಗಳನೆಲ್ಲಾ ಈಡೇರಿಸಿದ್ದಾರೆ. ಸಮ್ಮೀಶ್ರ ಸರ್ಕಾರವಿದ್ದಾಗಲು ರೈತರ ಸಾಲಮನ್ನಾ ಮಾಡಿದ್ದಾರೆ. ಬಡವರು, ದೀನದಲಿತರು, ಹಿಂದುಳಿದವರು ಹಾಗು ಅಲ್ಪಸಂಖ್ಯಾಯತರಿಗೆ ಅನೇಕ ಯೋಜನೆಗಳ ಸೌಲಭ್ಯಗಳನ್ನು ನೀಡಿದ್ದಾರೆ ಎಂದರು.
ಕಾಫಿ ಉದ್ಯಮದಿಂದ ಕೇಂದ್ರ ಸರ್ಕಾರಕ್ಕೆ ವಾರ್ಷಿಕವಾಗಿ 12ಸಾವಿರ ಕೋಟಿ ರೂ., ಹಣ ವಿದೇಶಿ ವಿನಿಮಯ ಮತ್ತು ತೆರಿಗೆಯಿಂದ ಬರುತ್ತಿದೆ. ಕೇವಲ 500ಕೋಟಿ ರೂ.ಗಳನ್ನು ಕಾಫಿ ಮಂಡಳಿಯ ಮೂಲಕ ಕಾಫಿ ಉದ್ಯಮಕ್ಕೆ ನೀಡಿ ಎಂದು ಕೇಂದ್ರ ವಾಣಿಜ್ಯ ಮಂತ್ರಿಗಳಿಗೆ ಮನವಿ ಪತ್ರದ ಮೂಲಕ ಬೇಡಿಕೆಯಿಟ್ಟಿದ್ದೆ. ಆದರೆ ನನ್ನ ಮನವಿ ಪತ್ರವನ್ನು ಕಸದ ಬುಟ್ಟಿಗೆ ಹಾಕುವ ಮೂಲಕ ಕಾಫಿ ಬೆಳೆಗಾರರಿಗೆ ಕೇಂದ್ರ ಅನ್ಯಾಯ ಮಾಡಿದೆ ಎಂದು ದೂರಿದರು.
ಚಿಕ್ಕಮಗಳೂರು, ಕೊಡಗು, ಹಾಸನದಲ್ಲಿ ಕಾಫಿ ಬೆಳೆಯುವ ರೈತರು ಸಂಕಷ್ಟದಲ್ಲಿದ್ದಾರೆ. ಬೆಳೆಗಾರರು ಸ್ವಾಭಿಮಾನಿಗಳು, ಕೈಯಿಂದ ಕೊಟ್ಟವರೆ ಹೊರತು ಬೇಡಿದವರಲ್ಲ. ಕಾಫಿ ಉದ್ಯಮ ನಶಿಸುತ್ತಿದೆ. ಕೇಂದ್ರ ಸರ್ಕಾರಕ್ಕೆ ಬರುವ ಆದಾಯವೂ ಸತ್ತು ಹೋಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಬಲ್ ಇಂಜಿನ್ ಸರ್ಕಾರ ಎಂದು ರಾಜ್ಯದ ಎಂ.ಪಿ.ಗಳು ಕೂಗುತ್ತಿದ್ದಾರೆ. ಇಂಜಿನ್ ಇಲ್ಲ ಭೋಗಿ ಮಾತ್ರ ಹೋಗುತ್ತಿದೆ. ರಾಜ್ಯ ಜಿಎಸ್‌ಟಿ ಪಾಲು ತರಲಾಗದ ಸಂಸದರಿಗೆ ಮತದಾರರು ಯಾತಕ್ಕಾದರೂ ಮತ ನೀಡುತ್ತಾರೋ ಗೊತ್ತಿಲ್ಲ. ಕಾಫಿ ಬೆಳೆಗಾರರ, ರೈತರ, ಬಡವರ ಸಮಸ್ಯೆಗಳನ್ನು ಕೇಂದ್ರ ಸರ್ಕಾರಕ್ಕೆ ಹೇಳಲು ಸಾಧ್ಯವಿಲ್ಲದ ಸಂಸದರು ಏತಕ್ಕಾಗಿ ಎಂದು ಪ್ರಶ್ನಿಸಿದರು.
15 ದಿನದಲ್ಲೇ ನೂರಾರು ಜೆಸಿಬಿ ಕಳುಹಿಸಿ ರಸ್ತೆ ಸರಿಪಡಿಸಿ, ಸಂತ್ರಸ್ತರಿಗೆ ಮನೆಗಳನ್ನು ನಿರ್ಮಿಸಿಕೊಟ್ಟ ಕೀರ್ತಿ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಸಲ್ಲಬೇಕು. ಎಚ್.ಡಿ.ರೇವಣ್ಣ ಅವರು ಲೋಕೋಪಯೋಗಿ ಸಚಿವರಾಗಿದ್ದ ಕಾಲದಲ್ಲೇ ಸೋಮವಾರಪೇಟೆ ತಾಲ್ಲೂಕಿನ ರಸ್ತೆ ಅಭಿವೃದ್ಧಿಗೆ 110ಕೋಟಿ ರೂ,ಗಳು, ಮಡಿಕೇರಿ ಮತ್ತು ವಿರಾಜಪೇಟೆ ತಾಲ್ಲೂಕಿಗೆ ತಲಾ 5 ಕೋಟಿ ರೂ.ಗಳನ್ನು ನೀಡಲಾಗಿ, ಆ ಅನುದಾನದಲ್ಲೇ ಇಂದು ರಸ್ತೆಗಳಾಗಿವೆ ಎಂದರು.
ಮಡಿಕೇರಿ ಕ್ಷೇತ್ರದಲ್ಲಿ ಜೆಡಿಎಸ್ ಬಲಿಷ್ಠವಾಗಿದ್ದು, ಚುನಾವಣೆಯಲ್ಲಿ ಗೆಲುವು ಸಾಧಿಸಲಿದೆ ಎಂದರು. ಬಿಜೆಪಿಯವರು ಜೆಡಿಎಸ್ ಬಗ್ಗೆ ಕುಟುಂಬ ರಾಜಕಾರಣ ಎನ್ನುತ್ತಾರೆ. ಕಳೆದ ಬಾರಿಯ ಎಂ.ಎಲ್.ಸಿ. ಪ್ರಸಕ್ತ ವರ್ಷದ ಎಂ.ಎಲ್.ಸಿ ಟಿಕೇಟ್ ಒಂದೇ ಕುಟುಂಬದವರಿಗೆ ಕೊಟ್ಟಿಲ್ಲವೆ? ಎಂದು ಪ್ರಶ್ನಿಸಿದರು.
ಜೆಡಿಎಸ್ ಮುಖಂಡ ನಾಪಂಡ ಮುತ್ತಪ್ಪ ಮಾತನಾಡಿ, ಭ್ರಷ್ಟ ವ್ಯವಸ್ಥೆಯಿಂದ ಕೊಡಗು ಜಿಲ್ಲೆ ನಲುಗಿದೆ. ಆಡಳಿತ ವ್ಯವಸ್ಥೆ ಕುಸಿದಿದೆ. ಕಮಿಷನ್ ದಂಧೆಯಿಂದ ಎಲ್ಲಾ ಕಾಮಗಾರಿಗಳು ಕಳಪೆಯಾಗಿವೆ. ಕಳೆದ 28 ವರ್ಷಗಳಿಂದ ಜಿಲ್ಲೆಯ ಅಭಿವೃದ್ಧಿಯಲ್ಲಿ ಸಂಪೂರ್ಣ ಹಿನ್ನೆಡೆಯಾಗಿದೆ. ಬಿಜೆಪಿ ಕುಟುಂಬವೊಂದರ ತೆಕ್ಕೆಯಲ್ಲಿದೆ ಎಂದು ದೂರಿನ ಸುರಿಮಳೆಗೈದರು.
ಇಲ್ಲಿನ ಶಾಸಕರು ತಮ್ಮ ಕಾರಿನಲ್ಲಿ ಹಾರೆ, ಪಿಕಾಸಿ, ಇಟ್ಟುಕೊಂಡು ಹೊದಲ್ಲೆಲ್ಲಾ ಭೂಮಿ ಪೂಜೆ ಮಾಡುತ್ತಿದ್ದಾರೆ. ಆದರೆ ಗ್ರಾಮೀಣ ಭಾಗದಲ್ಲಿ ರಸ್ತೆ ಹೊಂಡಗಳಿಂದ ಕೂಡಿವೆ ಎಂದು ಕುಟುಕಿದರು. 2018ರಲ್ಲಿ ಪ್ರಕೃತಿ ವಿಕೋಪ ಸಂಭವಿಸಿದ ಸಂದರ್ಭ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿಯವರು 7 ಬಾರಿ ಬಂದಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಜಿಲ್ಲೆಯಲ್ಲೆ ವಾಸ್ತವ್ಯ ಹೂಡಿ. ಜನರ ಕಷ್ಟಕ್ಕೆ ಸ್ಪಂದಿಸಿದರು. ಒಂದು ಸಾವಿರ ಮನೆಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಬಿಜೆಪಿಯಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಜನರು ರೋಷಿದ್ದಾರೆ. ಜೆಡಿಎಸ್ ಗೆಲವು ಶತಸಿದ್ದ ಎಂದರು.
ಮಡಿಕೇರಿ ಕ್ಷೇತ್ರ ಸಮಿತಿ ಅಧ್ಯಕ್ಷ ಎಚ್.ಆರ್.ಸುರೇಶ್ ಮಾತನಾಡಿ ರಾಜ್ಯದಲ್ಲಿ ರೈತರು, ಬಡವರು, ಅಲ್ಪಸಂಖ್ಯಾತರು ನೆಮ್ಮದಿಯಾಗಿ ಬದುಕಲು ಪ್ರಾದೇಶಿಕ ಪಕ್ಷ ಜೆಡಿಎಸ್ ಆಡಳಿತ ಚುಕ್ಕಾಣಿ ಹಿಡಿಯಲೇ ಬೇಕು ಎಂದರು.
ಬಿಜೆಪಿ, ಕಾಂಗ್ರೆಸ್ ತೊರೆದ ಕಾರ್ಯಕರ್ತರು ಜೆಡಿಎಸ್ ಸೇರ್ಪಡೆಗೊಂಡರು.
Breaking News
- *ಕೊಡಗು : ಡಿ.1 ರಿಂದ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಪ್ರಕ್ರಿಯೆ ಆರಂಭ : ಜಿಲ್ಲಾಧಿಕಾರಿ ವೆಂಕಟ್ ರಾಜಾ*
- *ಪಡಿತರ ಚೀಟಿ ಪರಿಷ್ಕರಣೆ : ಅರ್ಹ ಬಿಪಿಎಲ್ ಕಾರ್ಡ್ ರದ್ದುಗೊಳಿಸುವುದಿಲ್ಲ : ಸಚಿವ ಮುನಿಯಪ್ಪ*
- *ಕೊಡಗು ಬ್ಲಡ್ ಡೋನಸ್೯ ಸಂಸ್ಥೆಯ 7ನೇ ವಾಷಿ೯ಕೋತ್ಸವ : ಜೀವ ಉಳಿಸುವ ರಕ್ತದಾನಿಗಳೇ ನಿಜವಾದ ಹೀರೋಗಳು : ಅನಿಲ್ ಹೆಚ್.ಟಿ.*
- *ದಿವ್ಯಜ್ಯೋತಿ ಪತ್ತಿನ ಸಹಕಾರ ಸಂಘದ ಚುನಾವಣೆ : ಜಾನ್ಸನ್ ಪಿಂಟೋ ಸೇರಿ ಹಲವರು ಕಣದಲ್ಲಿ*
- *ಕಲ್ಲು ಬಾಯ್ಸ್ ಲೈಕ್ಸ್ ಫ್ಯಾಶನ್ ಫುಟ್ಬಾಲ್ ಕಪ್ : ನಿಯೋನ್ ಎಫ್.ಸಿ ಅಮ್ಮತ್ತಿ ಚಾಂಪಿಯನ್*
- *ಗ್ರಾ.ಪಂ ಉಪಚುನಾವಣೆ : ಕೊಡಗಿನ ವಿವಿಧೆಡೆ ಮದ್ಯ ಮಾರಾಟ ನಿಷೇಧ*
- *ನಂದಿನಿ ವಿವಿಧ ಶ್ರೇಣಿಯ ಹಾಲು ಬಿಡುಗಡೆ : ದೇಶದ ಹಾಲು ಉತ್ಪಾದನೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ : ಮುಖ್ಯಮಂತ್ರಿ ಸಿದ್ದರಾಮಯ್ಯ*
- *ಕಟ್ಟೆಹಾಡಿ ಅರಣ್ಯ ಹಕ್ಕು ಸಮಿತಿ ರಚನೆ : ಆದಿವಾಸಿಗಳನ್ನು ಒಕ್ಕಲೆಬ್ಬಿಸದಂತೆ ಆಗ್ರಹ*
- *ನ.29 ರಂದು ವಾಲ್ನೂರು-ತ್ಯಾಗತ್ತೂರು ಗ್ರಾಮ ಸಭೆ*
- *ಕೊಡಗು : ಗ್ರಾ.ಪಂ.ಉಪಚುನಾವಣೆ : ವಿವಿಧ ಸಂತೆ, ಜಾತ್ರೆಗಳ ನಿಷೇಧ*