ವಿರಾಜಪೇಟೆ ಜ.25 : ವಿದ್ಯಾರ್ಥಿಗಳ ಗುಣ ಮಟ್ಟದ ಶಿಕ್ಷಣದೊಂದಿಗೆ ಎಲೆ ಮರೆಯ ಕಾಯಿಯಂತಿರುವ ಪ್ರತಿಭೆಯನ್ನು ತೋರಲು ಶಾಲೆಯಲ್ಲಿ ನಡೆಯುತ್ತಿರುವ ‘ಕಲಿಕಾ ಹಬ್ಬ’ ಸರಕಾರದ ಉತ್ತಮ ಕಾರ್ಯಕ್ರಮವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮೂಕೊಂಡ ಶಶಿ ಸುಬ್ರಮಣಿ ಹೇಳಿದರು.
ವಿರಾಜಪೇಟೆ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷ 2022-23ನೇ ಸಾಲಿನ ವಿರಾಜಪೇಟೆ ಕ್ಲಸ್ಟರ್ ಮಟ್ಟದ ‘ಕಲಿಕಾ ಹಬ್ಬ’ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಬಳಿಕ ಮಾತನಾಡಿ, ಕಲಿಕಾ ಹಬ್ಬದ ಮೂಲಕ ಗ್ರಾಮೀಣ ಭಾಗದ ಮಕ್ಕಳಿಗೆ ತಮ್ಮ ಪ್ರತಿಭೆಯನ್ನು ಹೊರಹೊಮ್ಮಲು ಅವಕಾಶ ದೊರಕಿದಂತಾಗಿದೆ ಎಂದ ಶಶಿಸುಬ್ರಮಣಿ ವಿದ್ಯಾರ್ಥಿಗಳು ದುಷ್ಚಟಗಳನ್ನು ದೂರಮಾಡಿ ಈ ವರ್ಷದ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸುವುದರೊಂದಿಗೆ ತಮ್ಮ ಗುರಿ ಮುಟ್ಟುವಂತಾಗಬೇಕು ಎಂದರು.
ಪುರಸಭೆ ಸದಸ್ಯೆ ಆಶಾ ಸುಬ್ಬಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಿಗೆ ಹೆಚ್ಚು ಕಲಿಯುವ ನಿಟ್ಟಿನಲ್ಲಿ ಚಟುವಟಿಕೆಗಳಲ್ಲಿ ಭಾಗವಹಿಸಲು ಕಲಿಕಾ ಹಬ್ಬ ಸಹಕಾರಿ ಯಾಗಲಿದೆ. ಇದರಿಂದ ಜ್ಞಾನ ಹೆಚ್ಚಲಿದೆ. ಮಕ್ಕಳು ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ದೇಶದ ಉತ್ತಮ ಪ್ರಜೆಗಳಾಗುವಂತೆ ಹೇಳಿದರು.
ಕ್ಷೇತ್ರ ಸಮಪನ್ಮೂಲ ಸಮನ್ವಯಾಧಿಕಾರಿ ವನಜಾಕ್ಷಿ ಮಾತನಾಡಿ ಕಲಿಕಾ ಹಬ್ಬ 7 ಕ್ಲಸ್ಟರ್ಗಳಲ್ಲಿ ಮುಗಿಯುವ ಹಂತದಲ್ಲಿದ್ದು, ಯಶಸ್ವಿಯಾಗಿ ನಡೆಯುತ್ತಿದೆ.. ಶಿಕ್ಷಕರ ಸಹಕಾರದಿಂದ ಮಕ್ಕಳು ಸಂಭ್ರಮಿಸುತ್ತಿದ್ದಾರೆ. ವಿದ್ಯಾಥಿಗಳು ಕಲಿತ್ತಿರುವುದನ್ನು ಅಳವಡಿಸಿಕೊಳ್ಳುವಂತಾಗಬೇಕು ಎಂದರು.
ಪ್ರೌಢಶಾಲಾ ಮುಖ್ಯ ಶಿಕ್ಷಕ ಪ್ರತೀಕಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳಲ್ಲಿ ಕಲಿಕೆಯನ್ನು ಕೊಠಡಿಯಲ್ಲಿ ಕಲಿಸದೇ ವಿದ್ಯಾರ್ಥಿಗಳನ್ನು ಗುಂಪು ಗುಂಪಾಗಿ ಕಲಿಕೆಯನ್ನು ಅಳವಡಿಸಿ ಕೊಳ್ಳಬೇಕೆಂದು ಕಲಿಕಾ ಹಬ್ಬದ ಮಹತ್ವವನ್ನು ತಿಳಿಸಿದರು.
ವೇದಿಕೆಯಲ್ಲಿ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಪ್ರವೀಣ್, ಕಾಕೋಟು ಪರಂಬು ಕ್ಲಸ್ಟರ್ನ ಶ್ರೀನಿವಾಸ್, ಎಸ್.ಡಿ.ಎಂ.ಸಿ ಅಧ್ಯಕ್ಷ ಮೋಹನ್, ಸದಸ್ಯೆ ಪುಷ್ಪ, ಬೇಟೋಳಿ ಶಾಲೆ ಮತ್ತು ಕೆದಮುಳ್ಳೂರು ಶಾಲಾ ಮುಖ್ಯ ಶಿಕ್ಷಕರಾದ ಸೀತಾ ಮತ್ತು ಜ್ಞಾನಮಣಿ, ಬಿಆರ್ಪಿ ಕೆ.ಸಿ.ಗೀತಾಂಜಲಿ, ದೈಹಿಕ ಶಿಕ್ಷಕ ತಮ್ಮಯ್ಯ, ಶಿಕ್ಷಕರಾದ ನಸೀಮಾ, ಮಧನ್ ಮತ್ತಿತರರು ಉಪಸ್ಥಿತರಿದ್ದರು.