ಮಡಿಕೇರಿ ಜ.25 : ಯುವ ಸಮೂಹಕ್ಕೆ ಕೊಡವ ಸಂಸ್ಕೃತಿಯನ್ನು ಕರಗತ ಮಾಡಿಕೊಡುವ ಮೂಲಕ ಕೊಡಗಿನ ಕಲೆ, ಆಚಾರ-ವಿಚಾರಗಳು ದೇಶ, ವಿದೇಶಗಳಲ್ಲಿ ಪರಿಚಯವಾಗುವಂತೆ ಮಾಡಲು ಸಾಕಷ್ಟು ಶ್ರಮವಹಿಸಿದ ಹಿರಿಯ ಕಲಾವಿದೆ ಹಾಗೂ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷೆ ರಾಣಿ ಮಾಚಯ್ಯ ಅವರಿಗೆ ಕೇಂದ್ರ ಸರ್ಕಾರ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ನೀಡಿದೆ.
ಕೊಡವ ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವಲ್ಲಿ ರಾಣಿಮಾಚಯ್ಯ ಅವರ ಕೊಡುಗೆ ಅಪಾರವಾಗಿದೆ. ಕೊಡಗಿನ ಜಾನಪದ ಉಮ್ಮತ್ತಾಟ್ ಕಲೆ ಉಳಿವಿಗಾಗಿ ತಂಡ ಮಾಡಿಕೊಂಡು ದೇಶ ವಿದೇಶಗಳಿಗೆ ತೆರಳಿ ಜಿಲ್ಲೆಯ ಸಂಸ್ಕೃತಿಯನ್ನು ಪರಿಚಯ ಮಾಡಿಕೊಟ್ಟಿದ್ದಾರೆ. ಇದರಿಂದ ಕೊಡವ ಸಂಸ್ಕೃತಿ ಈ ನೆಲದ ಗಡಿ ದಾಟಿ ವಿದೇಶಗಳಲ್ಲಿಯೂ ಪರಿಚಯಿಸಲ್ಪಟ್ಟಿದೆ. ಕೊಡಗಿನ ಜಾನಪದ ಕಲೆಗಳನ್ನು ಯುವಜನತೆಗೆ ಯಶಸ್ವಿಯಾಗಿ ಪರಿಚಯಿಸುವ ಕಾಯಕದಲ್ಲಿ ತೊಡಗಿದವರಲ್ಲಿ ಮೊದಲ ಹೆಸರು ರಾಣಿ ಮಾಚಯ್ಯ ಅವರಿಗೆ ಸಲ್ಲುತ್ತದೆ.
ಪ್ರತಿಷ್ಠಿತ ಪದ್ಮಶ್ರೀ ದೊರೆತ್ತಿರುವ ಬಗ್ಗೆ ರಾಣಿ ಮಾಚಯ್ಯ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಪ್ರಶಸ್ತಿಯನ್ನು ರಾಷ್ಟ್ರಪತಿಗಳು ಪ್ರದಾನ ಮಾಡಲಿದ್ದಾರೆ.