ಮಡಿಕೇರಿ ಫೆ.6 : ನಿಟ್ಟೂರು ಗ್ರಾ.ಪಂ ವ್ಯಾಪ್ತಿಯ ವಿವಿಧ ಹಾಡಿ ಹಾಗೂ ಕಾಲೋನಿಗೆ ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಮಂಜೂರಾದ 77ಲಕ್ಷ ರೂಪಾಯಿ ವೆಚ್ಚದಲ್ಲಿ 2 ಒವರ್ ಹೆಡ್ ಟ್ಯಾಂಕ್ ನಿರ್ಮಾಣ ಮತ್ತು ಪೈಪ್ ಲೈನ್ ಅಳವಡಿಕೆ ಕಾರ್ಯಕ್ಕೆ ನಿಟ್ಟೂರು ಗ್ರಾ.ಪಂ ಅಧ್ಯಕ್ಷ ಕಾಟಿಮಾಡ ಶರೀನ್ ಮುತ್ತಣ್ಣ ಚಾಲನೆ ನೀಡಿದರು.
ನಿಟ್ಟೂರು ಗ್ರಾ.ಪಂ ವ್ಯಾಪ್ತಿಯ ಕಾರ್ಮಾಡು, ದಾಳಿಂಬೆ ಕೊಲ್ಲಿಹಾಡಿ, ಬೆಂಡೆಕುತ್ತಿ, ಕಟ್ಟೇಹಾಡಿ, ಹೊಸ ಕಾಲೋನಿ, ವಡ್ಡರಮಾಡು ಕಟ್ಟೆಕಾಲೋನಿ ಭಾಗದ ಮನೆಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಲು ಗ್ರಾ.ಪಂ ಸದಸ್ಯರೊಡನೆ ಭೂಮಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಈ ಯೋಜನೆ ಅಡಿಯಲ್ಲಿ ಬಡವರ್ಗದ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸುವ ಯೋಜನೆಯು ಶ್ಲಾಘನೀಯವಾಗಿದ್ದು, ಪ್ರತಿ ಮನೆಗಳಿಗೆ ಯೋಜನೆಯ ನಿಯಮದಂತೆ ಮೀಟರ್ ಅಳವಡಿಕೆ ಕಾರ್ಯ ಅಗಲಿದೆ. ಗ್ರಾಮಸ್ಥರು ಜಲಮೂಲಗಳನ್ನು ಇತಿಮಿತಿಯಲ್ಲಿ ಬಳಸಿಕೊಂಡು ಈ ಯೋಜನೆಯ ಉಪಯೋಗ ಪಡೆದುಕೊಳ್ಳಲು ಕರೆ ನೀಡಿದರು.
ಗ್ರಾ.ಪಂ ಸದಸ್ಯರುಗಳಾದ ಚಕ್ಕೇರ ಸೂರ್ಯ ಅಯ್ಯಪ್ಪ, ಪಡಿಞರಂಡ ಕವಿತಾ ಪ್ರಭು, ಅಮ್ಮಯ್ಯ, ರಾಜು, ವಿರಾಜಪೇಟೆ ತಾಲ್ಲೂಕು ಬಗರ್ ಹುಕುಮ್ ಜಾಗೃತಿ ಸಮಿತಿ ನಿರ್ದೇಶಕ ಮಾಪಂಗಡ ಯಮುನಾ ಚಂಗಪ್ಪ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮನಮೋಹನ್, ಪ್ರಮುಖರಾದ ಕೊಟ್ಟಂಗಡ ಮಂಜುನಾಥ್, ಮುಕ್ಕಾಟಿರ ಸೋಮಯ್ಯ, ರೋಷನ್ ಹೊಟ್ಟೇಂಗಡ, ಅಜಿತ್, ಹರೀಶ್ , ಗಿರಿಜನ ಮುಖಂಡ ದಾಸಪ್ಪ, ತಿರ್ನೆಲಿಮಾಡ ಪೂಣಚ್ಚ, ಸೇರಿದಂತೆ ಗ್ರಾಮಸ್ಥರು, ಸ್ತ್ರೀ ಶಕ್ತಿ ಸಂಘದ ಸದಸ್ಯರು, ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದವರು ಹಾಜರಿದ್ದರು.