ಕುಶಾಲನಗರ ಫೆ.10: ಕುಶಾಲನಗರ ಸಮೀಪದ ಬೈಲುಕುಪ್ಪೆಯ ಟಿಬೇಟಿಯನ್ ನಿರಾಶ್ರಿತ ಶಿಬಿರದಲ್ಲಿ ಫೆ.23 ರಿಂದ ಒಂದು ವಾರಗಳಕಾಲ ಟಿಬೇಟಿಯನ್ ಉತ್ಸವ ನಡೆಯಲಿದೆ ಎಂದು ಟಿಬೇಟನ್ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ತಶಿ ವುಂಗ್ಡು ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಟಿಬೇಟಿಯನ್ ಸಂಸ್ಕೃತಿ ಮತ್ತು ಪರಂಪರೆಯ ವಾರದ ಆಚರಣೆಯು ವರ್ಣರಂಜಿತವಾಗಿರಲಿದೆ ಎಂದು ತಿಳಿಸಿದರು.
ಉತ್ಸವವು ಸಾಂಪ್ರದಾಯಿಕ ಸಂಗೀತ ಮತ್ತು ನೃತ್ಯ, ಮರಳು ಮಂಡಲದ ಲೈವ್ ರಚನೆ, ಕಾರ್ಪೆಟ್ ನೇಯ್ಗೆ ಮತ್ತು ಟಿಬೇಟಿಯನ್ ಚಿತ್ರಕಲೆ, ಟಿಬೇಟಿಯನ್ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ರುಚಿಕರವಾದ ಟಿಬೆಟಿಯನ್ ಪಾಕ ಪದ್ಧತಿ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಉತ್ಸವದಲ್ಲಿ ಪ್ರದರ್ಶಿಸಲಾಗುವುದು ಹಾಗೂ ಟಿಬೆಟ್ ವೈದ್ಯಕೀಯ ಶಿಬಿರ ಮತ್ತು ಸಾಂಪ್ರದಾಯಿಕ ಟಿಬೇಟಿಯನ್ ಕ್ರೀಡೆಗಳನ್ನು ವೀಕ್ಷಿಸಲು ಪ್ರವಾಸಿಗರಿಗೆ ಅವಕಾಶವಿದೆ. ಮನರಂಜನೆಯ ಜೊತೆಗೆ, ಉತ್ಸವವು ಟಿಬೇಟಿಯನ್ ಬೌದ್ಧಧರ್ಮ, ಟಿಬೇಟಿಯನ್ ಮೆಡಿಸಿನ್, ವಿಶಿಷ್ಟಚಿತ್ರಕಲೆ ಮತ್ತು ಟಿಬೆಟ್ ಪ್ರಸ್ತುತ ರಾಜಕೀಯ ಪರಿಸ್ಥಿತಿಯ ಕುರಿತು ಸಂವಾದ ಕಾರ್ಯಕ್ರಮಗಳನ್ನು ಕೂಡ ಹಮ್ಮಿಕೊಳ್ಳಲಾಗುತ್ತದೆ ಎಂದರು.
ಉತ್ಸವ ಸಂದರ್ಭ ಮ್ಯಾಜಿಕ್ ಶೋಗಳು, ಮಕ್ಕಳ ಮನರಂಜನೆಗಳು ಮತ್ತು ವಿವಿಧ ವಸ್ತುಗಳು ಮತ್ತು ಆಹಾರಗಳನ್ನು ಮಾರಾಟ ಮಾಡುವ ಸಾಕಷ್ಟು ಮಳಿಗೆಗಳು ಇರುತ್ತವೆ. ಟಿಬೇಟಿಯನ್ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಯನ್ನು ಉತ್ತೇಜಿಸುವ ಗುರಿಯನ್ನು ಟಿಬೇಟಿಯನ್ ಉತ್ಸವ ಹೊಂದಿದೆ ಮತ್ತು ಖ್ಯಾತ ಟಿಬೇಟಿಯನ್, ನೇಪಾಳಿ ಮತ್ತಿತರ ಕಡೆಗಳಿಂದ ಆಗಮಿಸುವ ಕಲಾವಿದರು, ಸಂಗೀತಗಾರರು ಮತ್ತು ಕುಶಲಕರ್ಮಿಗಳಿಗೆ ತಮ್ಮ ಕಲೆಯನ್ನು ಪ್ರೇಕ್ಷಕರಿಗೆ ಪ್ರದರ್ಶಿಸಲು ವೇದಿಕೆಯನ್ನು ಒದಗಿಸುತ್ತದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮ ಆಯೋಜಕರಾದ ಉದ್ಯಮಿ ಲಿಪಿಕಾ ದೇವಯ್ಯ ಮಾತನಾಡಿ, ಗೋಲ್ಟನ್ ಟೆಂಪಲ್ ಸಮೀಪದ ಆವರಣದಲ್ಲಿ ನಡೆಯುವ ಉತ್ಸವದಲ್ಲಿ ಸುಮಾರು 30 ಸ್ಟಾಲ್‍ಗಳನ್ನು ಅಳವಡಿಸಲಾಗುತ್ತಿದ್ದು, ಮಹಿಳೆಯರು ಮನೆಯಲ್ಲಿ ತಯಾರಿಸುವ ಉತ್ಪನ್ನ ಮಾರಾಟ ಮಾಡಲಾಗುವುದು. ಇಂಡಿಯನ್ ಮತ್ತು ಟಿಬೇಟಿಯನ್ ಸಂಸ್ಕೃತಿಯ ಪರಂಪರೆ ಬಿಂಬಿಸುವ ಕಾರ್ಯಕ್ರಮಗಳು ಉತ್ಸವದಲ್ಲಿ ನಡೆಯಲಿದೆ ಎಂದರು. ಕಾರ್ಯಕ್ರಮ ಯಶಸ್ವಿಗೆ ಎಲ್ಲರ ಸಹಕಾರವನ್ನು ಕೋರಿದರು.
ಟಿಬೇಟ್ ಉತ್ಸವದಲ್ಲಿ ಭಾರತೀಯರ, ಉತ್ಪನ್ನಗಳ ಪ್ರದರ್ಶನಕೂಡ ನಡೆಯಲಿದೆ ಎಂದು ಲಿಪಿಕಾ ದೇವಯ್ಯ ತಿಳಿಸಿದರು. ಕಾರ್ಯಕ್ರಮದ ಹೆಚ್ಚಿನ ಮಾಹಿತಿಗಾಗಿ, 9900478300, 9591583267 ಸಂಪರ್ಕಿಸಬಹುದು ಎಂದು ತಿಳಿಸಿದರು.
ಈ ಸಂದರ್ಭ ಟಿಬೇಟಿಯನ್ ಚೇಂಬರ್ ಆಫ್ ಕಾಮರ್ಸ್ ಸದಸ್ಯರಾದ ಕುಂಚಾಂಗ್, ಚೋಟಕ್ ಇದ್ದರು.