ಮಡಿಕೇರಿ ಫೆ.25 : ಕೇಂದ್ರ ಮತ್ತು ರಾಜ್ಯ ಸರ್ಕಾರದ ಬಜೆಟ್‍ನಲ್ಲಿ ಕೊಡಗನ್ನು ಕಡೆಗಣಿಸಲಾಗಿದ್ದು, ಜಿಲ್ಲೆಯ ಜ್ವಲಂತ ಸಮಸ್ಯೆಗಳು ಬಗೆಹರಿಯದೆ ಉಳಿದುಕೊಂಡಿದೆ ಎಂದು ಆರೋಪಿಸಿ ಭಾರತ ಕಮ್ಯುನಿಸ್ಟ್ ಪಕ್ಷ ಕೊಡಗು ಜಿಲ್ಲಾ ಘಟಕದಿಂದ ಮಡಿಕೇರಿಯಲ್ಲಿ ಜನಾಂದೋಲಕ್ಕೆ ಚಾಲನೆ ನೀಡಲಾಯಿತು.
ನಗರದ ಜನರಲ್ ತಿಮ್ಮಯ್ಯ ವೃತ್ತದ ಬಳಿ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು, ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಪಕ್ಷದ ರಾಜ್ಯ ಸಮಿತಿ ಸದಸ್ಯ ಗುರುಶಾಂತ್ ಮಾತನಾಡಿ, ಜಿಲ್ಲೆಯ ವಿವಿಧೆಡೆ ಸಂಚರಿಸಿ ಸಭೆ ನಡೆಸುವ ಜೊತೆಗೆ ಮನೆ ಮನೆಗೆ ತೆರಳಿ ಬಿಜೆಪಿ ಸರ್ಕಾರ ವೈಫಲ್ಯಗಳ ಕುರಿತು ಜನರಿಗೆ ಅರಿವು ಮೂಡಿಸುವುದಾಗಿ ತಿಳಿಸಿದರು.
ಬಜೆಟ್‍ನಲ್ಲಿ ಕೊಡಗಿಗೆ ಪ್ರತ್ಯೇಕ ಯೋಜನೆಗಳನ್ನು ಘೋಷಿಸಿಲ್ಲ. ಕಾರ್ಮಿಕರು, ರೈತರ ನಿರೀಕ್ಷೆಗಳೆಲ್ಲಾ ಹುಸಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಉದ್ಯೋಗ ಸೃಷ್ಠಿ, ಸಾಲ ಮನ್ನಾ ಸೇರಿದಂತೆ ಜನರ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕು, ಕೊಡಗಿನ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು, ಸಂರಚನಾ ಯೋಜನೆಗಳಲ್ಲಿ ಸರಕಾರದ ಹೂಡಿಕೆಯನ್ನು ಹೆಚ್ಚಿಸಬೇಕು, ಉಚಿತವಾಗಿ ನೀಡುವ 5.ಕೆ.ಜಿ.ಪಡಿತರ ಜೊತೆಯಲ್ಲಿಯೇ 5 ಕೆ.ಜಿ.ಸಬ್ಸಿಡಿ ಆಧರಿತ ಪಡಿತರವನ್ನೂ ಪುನಃ ಪ್ರಾರಂಭಿಸಬೇಕು, ಹೆಚ್ಚಿನ ವೇತನದೊಂದಿಗೆ ಉದ್ಯೋಗ ಖಾತ್ರಿಯೋಜನೆಯನ್ನು ವ್ಯಾಪಕವಾಗಿ ವಿಸ್ತರಿಸಬೇಕು, ಸಂಪತ್ತು ತೆರಿಗೆ ಮತ್ತು ಅನುವಂಶೀಯ ತೆರಿಗೆಯನ್ನು ಜಾರಿಗೆತರಬೇಕು, ಶ್ರೀಮಂತರಿಗೆ ಕೊಡುವ ತೆರಿಗೆ ವಿನಾಯಿತಿಯನ್ನು ಹಿಂಪಡೆಯಬೇಕು ಮತ್ತು ಅತೀ ಶ್ರೀಮಂತರ ಮೇಲೆ ತೆರಿಗೆಯನ್ನು ಹೆಚ್ಚಿಸಬೇಕೆಂದು ಒತ್ತಾಯಿಸಿದರು.
ಔಷಧಿಗಳನ್ನೂ ಒಳಗೊಂಡು ಆಹಾರ ಮತ್ತು ಇತರ ವಸ್ತುಗಳ ಮೇಲಿನ ಜಿ.ಎಸ್.ಟಿ ಯನ್ನು ಹಿಂಪಡೆಯಬೇಕು, ರೈತರು, ಕೂಲಿಗಾರರು ಮತ್ತು ಮಹಿಳೆಯರ ಖಾಸಗೀ ಸೇರಿದಂತೆ ಎಲ್ಲಾ ರೀತಿಯ ಸಾಲ ಮನ್ನಾ ಮಾಡಬೇಕು, ಲೂಟಿಕೋರ ಕಾರ್ಪರೇಟ್ ಸುಲಿಗೆಗೆ ನೆರವಾಗುವರೈತ ವಿರೋಧಿ ಕೃಷಿ ಕಾಯಿದೆಗಳು, ಕಾರ್ಮಿಕರ ವಿರೋಧಿ ಕಾರ್ಮಿಕ ಕಾಯಿದೆಗಳು ಮತ್ತು ನೂತನರಾಷ್ಟ್ರೀಯ ಶಿಕ್ಷಣ ನೀತಿ, ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣಾ ಸುಗ್ರೀವಾಜ್ಞೆ ಹಾಗೂ ವಿದ್ಯುತ್ ತಿದ್ದುಪಡಿ ಮಸೂದೆಗಳನ್ನು ವಾಪಾಸು ಪಡೆಯಬೇಕು ಆಗ್ರಹಿಸಿದರು.
ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಹೆಚ್.ಬಿ ರಮೇಶ್, ಪ್ರಮುಖರಾದ ಕುಟ್ಟಪ್ಪನ್, ಶಾಜಿ, ಎ.ಸಿ ಸಾಬು, ಸಿಐಟಿಯು ಸಂಘಟನೆ ಜಿಲ್ಲಾಧ್ಯಕ್ಷ ಪಿ.ಆರ್ ಭರತ್ ಮತ್ತಿತರರು ಪಾಲ್ಗೊಂಡಿದ್ದರು.