ಮಡಿಕೇರಿ ಮಾ.3 : ಕುಶಾಲನಗರದಲ್ಲಿ ಮರಾಠ ಸಮುದಾಯ ಭವನ ನಿರ್ಮಾಣಕ್ಕೆ ಕನಿಷ್ಠ 25 ಸೆಂಟ್ ಜಾಗವನ್ನು ಒದಗಿಸುವಂತೆ ಮರಾಠ ಸಮಾಜದ ಜಿಲ್ಲಾ ಅಧ್ಯಕ್ಷ ಎಸ್.ಎನ್.ರಾಜಾರಾವ್ ಮನವಿ ಮಾಡಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ವತಿಯಿಂದ ನಗರದ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ನಡೆದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಹಾಗೂ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕುಶಾಲನಗರದಲ್ಲಿ ಮರಾಠ ಸಮಾಜ ಜನಸಂಖ್ಯೆ ಇದ್ದು, ಅಲ್ಲಿ ಮರಾಠ ಸಮುದಾಯ ಭವನ ನಿರ್ಮಾಣ ಮಾಡುವುದರಿಂದ ಸ್ಥಳೀಯರಿಗೆ ಅನುಕೂಲವಾಗಲಿದೆ ಎಂದು ಅವರು ಕೋರಿದರು.
ಮರಾಠ ಸಮುದಾಯ ಭವನ ನಿರ್ಮಾಣಕ್ಕೆ ರಾಜ್ಯ ಮರಾಠ ಪರಿಷತ್ತಿನಿಂದಲೂ ಅನುದಾನ ದೊರೆಯಲಿದೆ. ಹಾಗೆಯೇ ಸ್ಥಳೀಯ ಅಭಿವೃದ್ಧಿ ಯೋಜನೆಯಡಿ ಅನುದಾನ ಲಭ್ಯ ಆಗಲಿದ್ದು, ಜಾಗ ನೀಡುವಂತೆ ಕೋರಿದರು.
ಕರ್ನಾಟಕ ಜೀವ ವೈವಿದ್ಯ ಮಂಡಳಿ ರಾಜ್ಯ ಅದ್ಯಕ್ಷರಾದ ನಾಪಂಡ ರವಿಕಾಳಪ್ಪ ಅವರು ಮಾತನಾಡಿ ಶಿವಾಜಿ ಮಹಾರಾಜರು ಭಾರತೀಯ ಸಂಸ್ಕೃತಿ ಮತ್ತು ಜೀವನ ಪದ್ಧತಿ ಸಂರಕ್ಷಣೆಗೆ ಮತ್ತು ಅಭಿವೃದ್ಧಿಗೆ ಒತ್ತು ನೀಡಿದ್ದರು ಎಂದು ಕೊಂಡಾಡಿದರು.
ಸಂತ ಸೇವಾಲಾಲ್ ಅವರ ಆದರ್ಶಗಳನ್ನು ತಿಳಿದುಕೊಳ್ಳುವಂತಾಗಬೇಕು. ಪ್ರಕೃತಿಯನ್ನು ಪೂಜಿಸುವ ಶ್ರಮಿಕ ವರ್ಗವಾಗಿದ್ದು, ಯಾವುದೇ ಪ್ರದೇಶಕ್ಕೆ ಹೋದರೂ ಒಂದೇ ಭಾಷೆ ಮಾತನಾಡುತ್ತಾರೆ ಎಂದು ಅವರು ತಿಳಿಸಿದರು,
ಹೆಬ್ಬಾಲೆ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ವೆಂಕಟ ನಾಯಕ್ ಅವರು ಮಾತನಾಡಿ ಶಿವಾಜಿ ಮಹಾರಾಜರು ಭಾರತ ದೇಶವನ್ನು ಸ್ವರಾಜ್ಯ ಸಾಮ್ರಾಜ್ಯವನ್ನಾಗಿ ಮಾಡಬೇಕು ಎಂಬ ಕನಸು ಕಂಡಿದ್ದವರು ಎಂದರು.
ಭಾರತೀಯ ಸಂಸ್ಕೃತಿ ಮತ್ತು ಧಾರ್ಮಿಕ ಕೇಂದ್ರಗಳ ರಕ್ಷಣೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಕೊಡುಗೆ ಅಪಾರವಾಗಿದೆ ಎಂದು ವೆಂಕಟ ನಾಯಕ್ ಅವರು ಹೇಳಿದರು.
ಭಾರತದ ಸಾಂಸ್ಕøತಿಕ ಚರಿತ್ರೆ ಅರ್ಥ ಮಾಡಿಕೊಳ್ಳಬೇಕಾದರೆ ಶಿವಾಜಿಯವರ ಚರಿತ್ರೆ ತುಂಬಾ ವಿಶೇಷ. ಛತ್ರಪತಿ ಶಿವಾಜಿ ಮಹಾರಾಜರವರ ಜಯಂತಿ ಆಚರಿಸುವ ಮೂಲಕ ಅದರ ಜೊತೆ ಜೊತೆಗೆ ಅವರ ಜೀವನ ಸಾಧನೆಯನ್ನು ಜನರಿಗೆ ತಿಳಿಸುವಂತಹ ಪ್ರಯತ್ನ ಮಾಡುವಂತಾಗಬೇಕು ಎಂದರು.
ಸಂತ ಸೇವಾಲಾಲ್ ಅವರು ದಾವಣಗೆರೆ ಜಿಲ್ಲೆಯಲ್ಲಿ ಹುಟ್ಟಿ ಬೆಳೆದರು ಸಮಾಜದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ರಾಷ್ಟ್ರದ ಎಲ್ಲೆಡೆ ಸಂತ ಸೇವಾಲಾಲ್ ಜನಾಂಗದವರು ಇದ್ದು, ಲಂಬಾಣಿ, ಬಂಜಾರ ಜನಾಂಗದವರ ಉಡುಗೆ ತೊಡುಗೆ, ಸಂಸ್ಕೃತಿ ವಿಭಿನ್ನವಾಗಿದೆ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಅವರು ಮಾತನಾಡಿ ಶಿವಾಜಿ ಮಹಾರಾಜರು ತಮ್ಮ ಆಡಳಿತ ಅವಧಿಯಲ್ಲಿ ಹಲವು ಸುಧಾರಣೆಗಳನ್ನು ಜನಪರವಾಗಿ ಕೈಗೊಂಡು ಜನಮೆಚ್ಚುಗೆಗೆ ಪಾತ್ರರಾಗಿದ್ದರು ಎಂದರು.
ಹಾಗೆಯೇ ಸಂತ ಸೇವಾಲಾಲರು ಹಲವು ಸಮಾಜಮುಖಿ ಕಾರ್ಯಗಳನ್ನು ಕೈಗೊಂಡು ಸಮಾಜದಲ್ಲಿ ಇತರರಂತೆ ಬದುಕು ಕಟ್ಟಿಕೊಳ್ಳುವಂತಾಗಲು ಜಾಗೃತಿ ಮೂಡಿಸಿದರು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಚಿನ್ನಸ್ವಾಮಿ, ಬಿ.ಸಿ.ಶಂಕರಯ್ಯ, ಚೊಕ್ಕಾಡಿ ಪ್ರೇಮ ರಾಘವಯ್ಯ ಇತರರು ಇದ್ದರು.