ಮಡಿಕೇರಿ ಮಾ.7 : ‘ರಾಷ್ಟ್ರದ ಮೂಲ ಸಂಸ್ಕೃತಿಯ ಬೇರು, ಭವ್ಯ ಭಾರತದ ತೇರು’ ಎಂಬುದನ್ನು ಯಾರೂ ಸಹ ಮರೆಯಬಾರದು ಎಂದು ಮೂಲ ಸಂಸ್ಕೃತಿ ಮತ್ತು ಕನ್ನಡ ಸಂಸ್ಕೃತಿ ರಾಜ್ಯ ಸಂಚಾಲಕ ಜಗದೀಶ್ ಹಿರೇಮನಿ ಪ್ರತಿಪಾದಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ‘ಮೂಲ ಸಂಸ್ಕೃತಿ -ಕನ್ನಡ ಸಂಸ್ಕೃತಿ ’ ನಶಿಸಿ ಹೋಗುತ್ತಿರುವ ತಳ ಸಮುದಾಯದ ವಿಶಿಷ್ಟ ಕಲೆಗಳ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ರಸ್ತುತ ಕಾಲದಲ್ಲಿ ಕಲಾ ಸಾಹಿತ್ಯದಲ್ಲಿ ಭಾವನಾತ್ಮಕತೆ ಕಡಿಮೆಯಾಗುತ್ತದೆ. ಇದರಿಂದ ಮೂಲ ಸಂಸ್ಕೃತಿ ಉಳಿಯಲು ಸಾಧ್ಯವೇ ಎಂಬುದನ್ನು ಚಿಂತಿಸಬೇಕಿದೆ. ಆ ನಿಟ್ಟಿನಲ್ಲಿ ವಿವಿಧ ಕಲಾಪ್ರಕಾರಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಮೂಲ ಸಂಸ್ಕೃತಿ -ಕನ್ನಡ ಸಂಸ್ಕೃತಿ ಕಾರ್ಯಕ್ರಮ ಸಹಕಾರಿಯಾಗಿದೆ ಎಂದರು.
ಪ್ರತಿಯೊಬ್ಬರೂ ಒಂದಲ್ಲ ಒಂದು ಜಾನಪದ ಕಲೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಮನಸ್ಸನ್ನು ಹಗುರ ಮಾಡಿಕೊಳ್ಳಬಹುದು. ಇದರಿಂದ ಉತ್ತಮ ಆರೋಗ್ಯ ಪಡೆಯಬಹುದು. ಸದಾ ಧನಾತ್ಮಕವಾಗಿ ಚಿಂತಿಸಬಹುದು ಎಂದು ಜಗದೀಶ್ ಹಿರೇಮನಿ ಅವರು ಹೇಳಿದರು.
ಜಾನಪದ ಕಲಾ ಪ್ರಕಾರಗಳಲ್ಲಿ ಸಮಾಜದ ಬದುಕನ್ನು ಬದಲಿಸುವ ಶಕ್ತಿ ಇದೆ. ಮೂಲ ಸಂಸ್ಕೃತಿ -ಕನ್ನಡ ಸಂಸ್ಕೃತಿ ಹೆಸರಿನಲ್ಲಿ ನಶಿಸಿ ಹೋಗುತ್ತಿರುವ ತಳ ಸಮುದಾಯದ ವಿಶಿಷ್ಟ ಕಲೆಗಳನ್ನು ಉಳಿಸಿ ಬೆಳೆಸುವಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 31 ಜಿಲ್ಲೆಗಳಲ್ಲಿ ತಲಾ 5 ಕಲಾತಂಡಗಳಿಗೆ ಅವಕಾಶ ಮಾಡಿ, 20 ದಿನಗಳ ಕಾಲ ತರಬೇತಿ ಆಯೋಜಿಸಲಾಗಿತ್ತು ಎಂದು ಜಗದೀಶ್ ಹಿರೇಮನಿ ಅವರು ತಿಳಿಸಿದರು.
31 ಜಿಲ್ಲೆಗಳ 155 ಕಲಾತಂಡಗಳು ತಮ್ಮ ತಮ್ಮ ಕಲಾಪ್ರಕಾರಗಳ ತರಬೇತಿ ಪಡೆದು ನಶಿಸಿ ಹೋಗುತ್ತಿರುವ ಕಲೆಗಳನ್ನು ಉಳಿಸಿ ಬೆಳೆಸುವಲ್ಲಿ ಶ್ರಮಿಸಲಾಗಿದೆ. ಆ ನಿಟ್ಟಿನಲ್ಲಿ ರಾಜ್ಯದ 155 ಕಲಾತಂಡಗಳಲ್ಲಿ 31 ಜಿಲ್ಲೆಯ ತಲಾ 2 ತಂಡಗಳು ಇದೇ ಮಾರ್ಚ್, 9 ಮತ್ತು 10 ರಂದು ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿವೆ ಎಂದು ಮೂಲ ಸಂಸ್ಕೃತಿ ಮತ್ತು ಕನ್ನಡ ಸಂಸ್ಕೃತಿ ರಾಜ್ಯ ಸಂಚಾಲಕರು ವಿವರಿಸಿದರು.
ಮೂಲ ಸಂಸ್ಕೃತಿ -ಕನ್ನಡ ಸಂಸ್ಕೃತಿ ಯನ್ನು 180 ಶಿಕ್ಷಕರು ತರಬೇತಿ ನೀಡಿದ್ದು, 1800 ಹೊಸ ವಿದ್ಯಾರ್ಥಿಗಳು ನಶಿಸಿ ಹೋಗುತ್ತಿರುವ ಕಲಾ ತರಬೇತಿಯ ಶಿಕ್ಷಣ ಪಡೆದಿದ್ದಾರೆ. ಪದವಿ, ಸ್ನಾತಕೋತ್ತರ ಪದವಿ, ಎಂಜಿನಿಯರ್, ಸೇರಿದಂತೆ ವಿವಿಧ ಪದವಿ ವಿದ್ಯಾರ್ಥಿಗಳು ಜಾನಪದ ಕಲಾ ತರಬೇತಿ ಪಡೆದಿದ್ದಾರೆ ಎಂದು ಜಗದೀಶ್ ಹಿರೇಮನಿ ಅವರು ಹೇಳಿದರು.
ಮೂಲ ಜಾನಪದ ಸಂಸ್ಕೃತಿಯು ಪ್ರದೇಶದಿಂದ ಪ್ರದೇಶಕ್ಕೆ ಬೇರೆ ಬೇರೆ ಆಗಿರುವುದರಿಂದ ಜಾನಪದ ಕಲೆ ಎಲ್ಲರನ್ನೂ ಒಟ್ಟುಗೂಡಿಸುತ್ತದೆ ಎಂಬುದನ್ನು ಮರೆಯಬಾರದು ಎಂದು ಜಗದೀಶ್ ಹಿರೇಮನಿ ಅವರು ಪ್ರತಿಪಾದಿಸಿದರು.
ಮೂಲ ಸಂಸ್ಕೃತಿ ಮತ್ತು ಕನ್ನಡ ಸಂಸ್ಕೃತಿ ಪ್ರಾದೇಶಿಕ ಸಂಚಾಲಕರಾದ ಎಂ.ಎಸ್.ಪರಮಾನಂದ ಅವರು ಮಾತನಾಡಿ ಕಲೆಗಳಲ್ಲಿ ಲಲಿತ ಕಲೆ, ಜಾನಪದ ಕಲೆ ಪ್ರಮುಖವಾಗಿದೆ. ಆ ನಿಟ್ಟಿನಲ್ಲಿ ಲಲಿತ ಕಲೆಯಲ್ಲಿ ಭರತನಾಟ್ಯ ಒಳಗೊಂಡರೆ. ಜಾನಪದದಲ್ಲಿ ಸಾಂಪ್ರದಾಯಿಕ ಕಲಾಪ್ರಕಾರಗಳನ್ನು ಒಳಗೊಂಡಿದೆ ಎಂದರು.
ಯಾವುದೇ ಸಾಂಪ್ರದಾಯಿಕ ಕಲೆಗಳನ್ನು ನೋಡಿ ಕಲಿಯುವುದು ಮೂಲ ಸಂಸ್ಕೃತಿಯಾಗಿದೆ. ಇದಕ್ಕೆ ಶುಲ್ಕ ನೀಡಿ ಕಲಿಯುವ ಅಗತ್ಯವಿಲ್ಲ ಎಂದು ಅವರು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಮೂಲ ಸಂಸ್ಕೃತಿ ಕಡಿಮೆಯಾಗಿ ಮೊಬೈಲ್‍ಗಳಿಗೆ ದಾಸರಾಗುತ್ತಿದ್ದೇವೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಸಾಂಪ್ರದಾಯಿಕ ಕಲೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಲಿದೆ ಎಂದರು.
‘ಸಾಂಪ್ರದಾಯಿಕ ಕಲೆಗಳನ್ನು ಪ್ರತಿಯೊಬ್ಬರೂ ಕಲಿಯುವಂತಾಗಬೇಕು. ಕಲಿತು ಉಳಿಸುವಂತಾಗಬೇಕು. ಕಲಾಪ್ರಕಾರಗಳಿಗೆ ಯಾರೂ ಸಹ ಬೇಲಿ ಹಾಕಬಾರದು. ಸಮುದಾಯಗಳ ಸಮಾನತೆ, ಸಾಮರಸ್ಯ, ಭ್ರಾತೃತ್ವ ಅತೀ ಮುಖ್ಯ ಎಂದು ಪರಮಾನಂದ ಅವರು ಒತ್ತಿ ಹೇಳಿದರು.
ಮೂಲ ಸಂಸ್ಕೃತಿ-ಕನ್ನಡ ಸಂಸ್ಕೃತಿಯನ್ನು ಉಳಿಸದಿದ್ದರೆ, ಮುಂದಿನ ದಿನಗಳಲ್ಲಿ ಟಿವಿ ಅಥವಾ ಮೊಬೈಲ್‍ನಲ್ಲಿ ನೋಡುವ ಕಾಲ ಸನ್ನಿಹಿತವಾಗಲಿದೆ ಎಂದು ಎಚ್ಚರಿಸಿದರು.
ಕೊಡಗು ಜಿಲ್ಲಾ ಜಾನಪದ ಪರಿಷತ್ತು ಅಧ್ಯಕ್ಷರಾದ ಬಿ.ಜಿ.ಅನಂತಶಯನ ಅವರು ಮಾತನಾಡಿ ನಶಿಸಿ ಹೋಗುತ್ತಿರುವ ಕಲೆಗಳನ್ನು ಸಂರಕ್ಷಣೆ ಮಾಡಬೇಕಿದೆ. ಪ್ರತಿಯೊಬ್ಬರೂ ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸುವಂತಾಗಬೇಕು. ಜೊತೆಗೆ ಕಲಿಸುವಂತಾಗಬೇಕು ಎಂದರು.
ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ ಅವರು ಮಾತನಾಡಿ ಎಲ್ಲಾ ಜನಾಂಗಗಳಲ್ಲಿಯೂ ಒಂದಲ್ಲ ಒಂದು ಕಲೆಗಳು ಇರುತ್ತವೆ. ಅದನ್ನು ಉಳಿಸಿಕೊಂಡು ಹೋಗಬೇಕು. ಜಾನಪದ ಕಲೆ, ಸಂಸ್ಕೃತಿಯನ್ನು ಅನಾದಿ ಕಾಲದಿಂದಲೂ ಉಳಿಸಿಕೊಂಡು ಬಂದಿರುವ ಮೂಲ ಸಂಸ್ಕೃತಿಯನ್ನು ಈಗಲೂ ಉಳಿಸುತ್ತಿರುವವರನ್ನು ಪ್ರೋತ್ಸಾಹಿಸಬೇಕು ಎಂದರು.
ಮೂಲ ಸಂಸ್ಕೃತಿ ಕಲಾಪ್ರಕಾರಗಳನ್ನು ಉಳಿಸಬೇಕು. ಆದರೆ ಆಧುನಿಕ ಸ್ಪರ್ಶ ನೀಡುವುದು ಬೇಡ. ಉರುಟ್ಟಿಕೋಟ್, ಉಮ್ಮತ್ತಾಟ್ ಕೊಡಗಿನ ಸಾಂಪ್ರದಾಯಿಕ ಕಲೆಗಳು ಸದಾ ಜನಮನ ಸೆಳೆಯುತ್ತವೆ ಎಂದು ನಗರಸಭೆ ಅಧ್ಯಕ್ಷರು ನುಡಿದರು.
ಮೂಲ ಸಂಸ್ಕೃತಿ -ಕನ್ನಡ ಸಂಸ್ಕೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಲಾವಿದರಾದ ಕುಡಿಯರ ಶಾರದ, ನಾಣಚ್ಚಿಯ ರಮೇಶ್, ಈ.ರಾಜು, ಗಣೇಶ್, ಕುಟ್ಟಪ್ಪ, ಉಮೇಶ್, ಗಿರೀಶ್ ಇತರರಿಗೆ ಶಾಲೂ, ಫಲ-ತಾಂಬೂಲ ನೀಡಿ ಸನ್ಮಾನಿಸಲಾಯಿತು.
ಕುಡಿಯರ ಶಾರದ ಮತ್ತು ತಂಡದವರಿಂದ ದುಡಿ ಹಾಡು, ರಮೇಶ್ ಮತ್ತು ತಂಡದವರಿಂದ ಗಿರಿಜನ ಹಾಡು ಹಾಗೂ ನೃತ್ಯ ಪ್ರದರ್ಶನ, ಈ.ರಾಜು ಮತ್ತು ತಂಡದವರಿಂದ ಜಾನಪದ ಹಾಡು, ಗಣೇಶ್ ಮತ್ತು ತಂಡದವರಿಂದ ಪೌರಾಣಿಕ ನಾಟಕ ಪ್ರದರ್ಶನ, ಗಿರೀಶ್ ಮತ್ತು ತಂಡದವರಿಂದ ಗೀಗೀ ಪದ ಹಾಗೂ ಲಾವಣಿ ಹಾಡು ಜನಮನ ಸೆಳೆಯಿತು.
ನಗರಸಭಾ ಸದಸ್ಯರಾದ ಸತೀಶ್, ಮೂಲ ಸಂಸ್ಕೃತಿ -ಕನ್ನಡ ಸಂಸ್ಕೃತಿ ಜಿಲ್ಲಾ ಸಂಚಾಲಕರಾದ ಜಿ.ಡಿ.ದುಶ್ಯಂತ್ ಕುಮಾರ್, ಸುಶೀಲ, ಸರ್ವೋದಯ ಸಮಿತಿ ಅಧ್ಯಕ್ಷರಾದ ಅಂಬೆಕಲ್ ಕುಶಾಲಪ್ಪ, ಮೂಲ ಸಂಸ್ಕೃತಿ-ಕನ್ನಡ ಸಂಸ್ಕೃತಿಯ ಮಹೇಶ್, ಪ್ರತಾಪ್ ಶಾಂತಳ್ಳಿ, ಜಾನಪದ ಪರಿಷತ್ ಸದಸ್ಯರಾದ ರೇವತಿ ರಮೇಶ್, ಕವಿತಾ ರಾಮ್, ಮೀನಾಕ್ಷಿ, ಇತರರು ಇದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಚಿನ್ನಸ್ವಾಮಿ ಸ್ವಾಗತಿಸಿದರು. ಮಡಿಕೇರಿ ತಾಲ್ಲೂಕು ಜಾನಪದ ಪರಿಷತ್ತು ಅಧ್ಯಕ್ಷರಾದ ಅನಿಲ್ ಎಚ್.ಟಿ. ನಿರೂಪಿಸಿದರು. ಈ. ರಾಜು ಮತ್ತು ತಂಡದವರು ನಾಡಗೀತೆ ಹಾಡಿದರು. ಮಣಜೂರು ಮಂಜುನಾಥ್ ವಂದಿಸಿದರು.