ನಾಪೋಕ್ಲು ಮಾ.9 : ನೆಲಜಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಕುಂಬ್ಯಾರು ಕಲಾಡ್ಚ ವಾರ್ಷಿಕೋತ್ಸವವು ಶ್ರದ್ಧಾಭಕ್ತಿಯಿಂದ ಸಂಪನ್ನಗೊಂಡಿತು.
ಉತ್ಸವದ ಅಂಗವಾಗಿ ವಿಶೇಷ ಪೂಜೆಗಳು ನೆರವೇರಿದವು. ದೇವಾಲಯದಲ್ಲಿ ತುಲಾಭಾರ ಸೇವೆ ಬಳಿಕ ಭಕ್ತರು ವಿವಿಧ ರೀತಿಯ ಹರಕೆ ಸಲ್ಲಿಸಿದರು.
ದೇವಾಲಯದಲ್ಲಿ ತುಲಾಭಾರ ಸೇವೆ ಬಳಿಕ, ಭಕ್ತರಿಂದ ಕಾಫಿ, ಕಾಳುಮೆಣಸು, ಎಣ್ಣೆ, ಮತ್ತಿತರ ಹರಕೆ ಸಲ್ಲಿಸಲಾಯಿತು. ನಂತರ ದೇವಾಲಯದಲ್ಲಿ ಮಹಾಪೂಜೆ, ಎತ್ತುಪೋರಾಟ ಜರುಗಿತು.
ಅಪರಾಹ್ನ ನೆರೆದಿದ್ದ ಭಕ್ತಾಧಿಗಳಿಗೆ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ಬಳಿಕ ದೇವರ ನೃತ್ಯಬಲಿ ಜರುಗಿತು. ತಂತ್ರಿ ಸಂತೋಷ್ ಹೆಬ್ಬಾರ್, ಅರ್ಚಕರಾದ ಸುರೇಶ್ ಶರ್ಮ, ರಮೇಶ್ ಶರ್ಮ ಹಾಗೂ ಸುಧೀರ್ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.
ಆನಂತರ ಇಗ್ಗುತ್ತಪ್ಪ ದೇವರ ಆದಿ ಸ್ಥಳವಾದ ಮಲ್ಮ ಬೆಟ್ಟಕ್ಕೆ ಎತ್ತುಪೋರಾಟದೊಂದಿಗೆ ತೆರಳಿ ವಿವಿಧ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಉತ್ಸವದಲ್ಲಿ ತಕ್ಕ ಮುಖ್ಯಸ್ಥರಾದ ನಾಪನೆರವಂಡ ಪೊನ್ನಪ್ಪ, ಬಾಳೆಯಡ ರಾಜ ಕುಂಞಪ್ಪ, ಬದಂಚೆಟ್ಟೀರ ನಾಣಯ್ಯ, ಕೈಯ್ಯಂದಿರ ರಮೇಶ್, ಆಡಳಿತ ಮಡಳಿ ಅಧ್ಯಕ್ಷ ಮುಂಡ0ಡ ನಾಣಯ್ಯ, ಕಾರ್ಯದರ್ಶಿ ಮುಕ್ಕಾಟಿರ ವಿನಯ್, ಆಡಳಿತ ಮಡಳಿ ಸದಸ್ಯರು, ಗ್ರಾಮಸ್ಥರು, ಊರಿನ ಹಾಗೂ ಪರ ಊರಿನ ಭಕ್ತರು ಪಾಲ್ಗೊಂಡಿದ್ದರು.
ವರದಿ : ದುಗ್ಗಳ ಸದಾನಂದ.